ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಕಮಲ ಅರಳಿಸಿದ್ದ ಶ್ರೀಶೈಲಪ್ಪ ಬಿದರೂರ

ಬಾಳ ಪಯಣ ಮುಗಿಸಿದ ‘ಸಾಹುಕಾರ’
Last Updated 26 ನವೆಂಬರ್ 2022, 3:00 IST
ಅಕ್ಷರ ಗಾತ್ರ

ಗದಗ: ಸಹೃದಯಿ, ಅಜಾತಶತ್ರು, ಸಾಹುಕಾರ್‌ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಳ್ಳುತ್ತಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರು ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಿದರೂರರ ಸಾವು ಅವರ ಬೆಂಬಲಿಗರಿಗೆ ದಿಗ್ಭ್ರಮೆ ಮೂಡಿಸಿದೆ.

ಸೂಡಿ ಮಂಡಲ ಪಂಚಾಯ್ತಿ ಪ್ರಧಾನರಾಗಿ ರಾಜಕೀಯ ಜೀವನ ಆರಂಭಿಸಿದ ಶ್ರೀಶೈಲಪ್ಪ ಬಿದರೂರ, 1994ರಲ್ಲಿ ರೋಣದ ಹಳೆ ಸಂತೆ ಬಜಾರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜ್ಞಾನದೇವ ದೊಡ್ಡಮೇಟಿ ಅವರಿಂದ, ‘ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆ, ತತ್ವ ಸಿದ್ಧಾಂತಗಳಿಗೆ ಬದ್ಧನಿರುತ್ತೇನೆ’ ಎಂದು ಪ್ರತಿಜ್ಞೆ ಸ್ವೀಕರಿಸಿದ್ದರು. ಇದೊಂದು ಅಭೂತಪೂರ್ವ ಸನ್ನಿವೇಶ ಎಂದು ಹಲವರು ಈಗಲೂ ನೆನಪಿಸಿಕೊಳ್ಳುತ್ತಾರೆ.

‘ರಾಜಕೀಯ ದಿಗ್ಗಜರಾದ ಎಚ್‌.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ ಅವರ ಒತ್ತಡವಿದ್ದರೂ ವಂಶಪಾರಂಪರ್ಯ ಅಧಿಕಾರ ಬೇಡ ಎಂಬ ಕಾರಣಕ್ಕೆ ಜ್ಞಾನದೇವ ದೊಡ್ಡಮೇಟಿಯವರು ಶ್ರೀಶೈಲಪ್ಪ ಬಿದರೂರ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. 1994ರಲ್ಲಿ ನಡೆದ ಚುನಾವಣೆಯಲ್ಲಿ ಶ್ರೀಶೈಲಪ್ಪ ಬಿದರೂರ ಅವರು ರೋಣ ಮತಕ್ಷೇತ್ರದಿಂದ ಜನತಾದಳದಿಂದ ಗೆಲುವು ಸಾಧಿಸಿ, ಮೊದಲಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು’ ಎಂದು ರವೀಂದ್ರನಾಥ ದೊಡ್ಡಮೇಟಿ ನೆನಪಿಸಿಕೊಂಡರು.

ಆದರೆ, 1999ರಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅವರು ಜನತಾ ದಳದಿಂದ ಪರಾಭವಗೊಂಡಿದ್ದರು.

ಜನತಾ ದಳದಲ್ಲಿದ್ದ ಶ್ರೀಶೈಲಪ್ಪ ಬಿದರೂರ 2007ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಜತೆಗೆ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಾದಿಯನ್ನೂ ಅಲಂಕರಿಸಿದ್ದರು.

2008ರಲ್ಲಿ ನಡೆದ ಚುನಾವಣೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪ್ರಭಾವಿ ಮುಖಂಡ ಎಚ್.ಕೆ.ಪಾಟೀಲ ಅವರನ್ನು ಭಾರಿ ಮತಗಳ ಅಂತರದಿಂದ ಪರಾಭವಗೊಳಿಸಿ ಅಚ್ಚರಿಗೆ ಕಾರಣರಾಗಿದ್ದರು. ಕಾಂಗ್ರೆಸ್ ಭದ್ರಕೋಟೆಯನ್ನು ಮೊದಲ ಬಾರಿಗೆ ಭೇದಿಸಿದ್ದ ಕೀರ್ತಿ ಶ್ರೀಶೈಲಪ್ಪ ಬಿದರೂರ ಅವರಿಗೆ ಇತ್ತು.

ಗದಗ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಬಿದರೂರ ಕಾರ್ಯಕರ್ತರಿಂದ ದೂರವೇ ಉಳಿದರು ಎಂಬ ಅಸಹನೆ ಕ್ಷೇತ್ರದಲ್ಲಿ ಹೊಗೆಯಾಡುತ್ತಿತ್ತು. ಇದೇ ಕಾರಣದಿಂದ 2013ರ ಚುನಾವಣೆಯಲ್ಲಿ ಹಳೆ ವರ್ಚಸ್ಸು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅಲ್ಲದೇ, ಬಿಜೆಪಿ ಪಕ್ಷವು ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಎಂದು ಮೂರು ಹೋಳಾಯಿತು. ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಶೈಲಪ್ಪ ಬಿದರೂರ ಅವರು ಎಚ್.ಕೆ.ಪಾಟೀಲ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದರು.

2013ರ ಚುನಾವಣೆಯಲ್ಲಿ ಸೋತ ನಂತರ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದರು. ಇದರ ಪರಿಣಾಮವಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮುಖಂಡರು ಟಿಕೆಟ್ ಕೊಡಲು ನಿರಾಕರಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಬಿದರೂರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

2023ರ ಚುನಾವಣೆಯಲ್ಲಿ ಗದಗ ಅಥವಾ ರೋಣ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿ, ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಗದಗ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಅವರ ನಡೆ ಚರ್ಚೆಗೆ ಗ್ರಾಸವಾಗಿತ್ತು. ಶುಕ್ರವಾರ ಬೆಂಗಳೂರಿನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಆಕಾಂಕ್ಷಿಗಳ ಸಭೆಯಲ್ಲಿ ಭಾಗವಹಿಸಿದ್ದ ಬಿದರೂರ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿ ಮೃತ‍ಪಟ್ಟಿದ್ದಾರೆ. 60ನೇ ವಯಸ್ಸಿನಲ್ಲಿಯೇ ಮರಳಿಬಾರದ ಊರಿಗೆ ಪಯಣಿಸಿದ್ದಾರೆ.

ಸಾಹುಕಾರ್ ಕುಟುಂಬದ ಕುಡಿ ಶ್ರೀಶೈಲಪ್ಪ ಬಿದರೂರ

ಗಜೇಂದ್ರಗಡ: ಸೂಡಿ ಗ್ರಾಮದ ವಿರೂಪಾಕ್ಷಪ್ಪ, ಸಿದ್ದಮ್ಮ ದಂಪತಿಯ ಮೂರನೇ ಮಗನಾಗಿ 15.04.1962ರಲ್ಲಿ ಶ್ರೀಶೈಲಪ್ಪ ಬಿದರೂರ ಜನಿಸಿದ್ದರು.

ಗದಗ ನಗರದ ಲೊಯಲಾ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಕಲಬುರಗಿಯ ಶರಣಬಸವೇಶ್ವರ ರೆಸಿಡೆನ್ಸಿಯಲ್ ಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ 1980ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು.

ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಶ್ರೀಶೈಲಪ್ಪ ಬಿದರೂರ ಅವರು ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಸೂಡಿ ಗ್ರಾಮದಲ್ಲಿ ಬಿದರೂರ ಸಾಹುಕಾರ್ ಎಂದೇ ಖ್ಯಾತಿ ಪಡೆದಿದ್ದರು.

‘ಶ್ರೀಶೈಲಪ್ಪ ಬಿದರೂರ ಅವರ ತಂದೆ ವಿರೂಪಾಕ್ಷಪ್ಪ ಬಿದರೂರ ಅವರು ರೋಣ ಟಿಡಿಬಿ ಪ್ರೆಸಿಡೆಂಟ್ ಆಗಿದ್ದರು. ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ದೇವೇಗೌಡ ಅವರೊಂದಿಗೆ ಒಡನಾಟ ಹೊಂದಿದ್ದ ವಿರುಪಾಕ್ಷಪ್ಪ ಅವರು ಸಾಹುಕಾರ್ ಎಂದೇ ಕರೆಯುತ್ತಿದ್ದರು. ಬಿದರೂರ ಕುಟುಂಬಕ್ಕೆ ಹಿಂದಿನಿಂದಲೂ ಸಾಹುಕಾರ್ ಕುಟುಂಬ ಎಂದೇ ಖ್ಯಾತಿ ಪಡೆದಿದೆ. ಅಂತಹ ಕುಟುಂಬದ ಕುಡಿ ಶ್ರೀಶೈಲಪ್ಪ ಬಿದರೂರ ಅವರ ಅಗಲಿಕೆ ತುಂಬಲಾರದ ನಷ್ಟ’ ಎಂದು ರೋಣ ಕಾಂಗ್ರೆಸ್ ಬ್ಲಾಕ್ ಕಮಿಟಿ ಅಧ್ಯಕ್ಷ ವೀರಣ್ಣ ಶಟ್ಟರ್ ಸಂತಾಪ ವ್ಯಕ್ತಪಡಿಸಿದರು.

ಶ್ರೀಶೈಲಪ್ಪ ಬಿದರೂರ ಅವರಿಗೆ ಪತ್ನಿ ಮಹೇಶ್ವರಿ, ಮಕ್ಕಳಾದ ವಿಕ್ರಮ, ಅಕ್ಷಯ ಹಾಗೂ ನಾಲ್ವರು ಸಹೋದರಿಯರು, ಸಹೋದರ (ತಮ್ಮ) ರವಿ ಬಿದರೂರ ಇದ್ದಾರೆ.

ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ಇಂದು
ಶನಿವಾರ ಬೆಳಿಗ್ಗೆ 5ಕ್ಕೆ ಗದಗ ನಗರದ ಕಳಸಾಪುರ ರಸ್ತೆಯ ಆದರ್ಶ ನಗರದ ಸ್ವಗೃಹಕ್ಕೆ ಪಾರ್ಥಿವ ಶರೀರ ಬರಲಿದೆ. ಬೆಳಿಗ್ಗೆ 8.30ಕ್ಕೆ ಗದಗ ನಗರದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಬಳಿಕ ಗಜೇಂದ್ರಗಡ ತಾಲ್ಲೂಕಿನ ಸೂಡಿ ಗ್ರಾಮಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುವುದು. ಗ್ರಾಮದ ಗುರು ಮಹಾಂತೇಶ ಶಾಲೆ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ನಂತರ ಗಜೇಂದ್ರಗಡ ರಸ್ತೆಯಲ್ಲಿರುವ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

*

ನಮ್ಮ ಕುಟುಂಬದಲ್ಲಿಯೇ ಮೃದು ಸ್ವಭಾವದ ವ್ಯಕ್ತಿಯಾದ ನನ್ನ ಸಹೋದರನ ಮರಣ ಅತೀವ ದುಃಖ ತಂದಿದೆ. ಸೂಡಿಯಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿಸಲಾಗುವುದು
-ಮಲ್ಲಿಕಾರ್ಜುನ ಬಿದರೂರ,ಶ್ರೀಶೈಲಪ್ಪನವರ ಹಿರಿಯ ಸಹೋದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT