ನರಗುಂದ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಅ.4ರಂದು ನರಗುಂದ ಪಟ್ಟಣದಲ್ಲಿ ಬೃಹತ್ ರೈತರ ಸಮಾವೇಶ ನಡೆಸಲಾಗುವುದು ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ–ಕಳಸಾ–ಬಂಡೂರಿ ಮಲಪ್ರಭೆ ನದಿ ಜೋಡಣಾ ಹೋರಾಟ ಸಮನ್ವಯ ಸಮಿತಿಯ ಹೋರಾಟದ ವೇದಿಕೆಯಲ್ಲಿ ಬುಧವಾರ ಮಾತನಾಡಿದರು.
ಮಹದಾಯಿ ಯೋಜನೆ ಅನುಷ್ಠಾನ, ಶಾಶ್ವತ ಖರೀದಿ ಕೇಂದ್ರ, ಕಬ್ಬು ಬೆಳೆಗಾರರ ಬಾಕಿ ಹಣ, ಬರ ಪರಿಹಾರ, ಸೇರಿದಂತೆ ರೈತರ ಹಲವಾರು ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಹೈಕೋರ್ಟ್ ನ್ಯಾಯಾಧೀಶರ ಭೇಟಿಗೆ ಸಮಯಾವಕಾಶ ನೀಡಬೇಕು. ಇದಕ್ಕಾಗಿ ಸೆ.8ಕ್ಕೆ ಬೆಂಗಳೂರಿಗೆ ರೈತ ಮುಖಂಡರೆಲ್ಲರೂ ಹೊರಡಲಿದ್ದೇವೆ. ಮುಖ್ಯಮಂತ್ರಿಗಳು, ಲೋಕಾಯುಕ್ತರು ಮತ್ತು ನ್ಯಾಯಾಧೀಶರು ಸೇರಿದಂತೆ ಇತರರ ಭೇಟಿಗೆ ಅವಕಾಶ, ಸಮಯ ನೀಡುವಂತೆ ಆಗ್ರಹಿಸಿ 20 ಜನ ರೈತ ಮುಖಂಡರ ತಂಡವು ಬೆಂಗಳೂರಿಗೆ ತೆರಳಿ ಅಂತಿಮ ಗಡುವು ಕೊಡಲಿದ್ದೇವೆ ಎಂದು ತಿಳಿಸಿದರು.
ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಹೀಗಾಗಿ ನಾವು ನ್ಯಾಯಾಧೀಶರನ್ನು ಭೇಟಿಯಾಗಲಿದ್ದೇವೆ. ಸೆ.9 ರೊಳಗೆ ಗೌರವಾನ್ವಿತ ನ್ಯಾಯಾಧೀಶರ ಭೇಟಿಗೆ ಸಮಯ ನೀಡದಿದ್ದಲ್ಲಿ, ರಾಜ್ಯದ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸೆ.16,17 ರಂದು ರಾಜ್ಯ ರೈತ ಮುಖಂಡರು ಸಮಾವೇಶದ ಪೂರ್ವಭಾವಿ ಸಭೆ ನಡೆಸಲಾಗುವುದು. ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಸಮಾವೇಶ ನಡೆಸಲಾಗುವುದು. ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು. ನಮ್ಮ ತೆರಿಗೆ ನಮ್ಮ ದುಡಿಮೆ ಕುರಿತಂತೆ ಸರ್ಕಾರದ ಗಮನ ಸೆಳೆಯಬೇಕಾಗಿದೆ. ರೈತರ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಚರ್ಚಿಸಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ರೈತರ ಬೃಹತ್ ಸಮಾವೇಶವನ್ನು ಅ.4 ರಂದು ಬೆಳಿಗ್ಗೆ 10 ಗಂಟೆಯಿಂದ 4 ರವರೆಗೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಎಷ್ಟೇ ದವಸ ಧಾನ್ಯ ಖರೀದಿಸಲಿ, ಕೇಂದ್ರ ಸರ್ಕಾರ ಬೆಂಬಲ ಬೆಲೆ ಅಡಿಯಲ್ಲಿ ತೆಗೆದುಕೊಳ್ಳಲು ಸಿದ್ದವಿದೆ. ಆದರೆ ರಾಜ್ಯ ಸರ್ಕಾರವು ಖರೀದಿ ಕೇಂದ್ರ ಪ್ರಾರಂಭಿಸಲು ಹಿಂದೇಟು ಹಾಕುತ್ತಿದೆ. ದಲ್ಲಾಳಿಗಳು, ಜಂಟಿ ನಿರ್ದೇಶಕರು, ಸಹಕಾರ ಮಾರಾಟ ಮಂಡಳಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಇವರೆಲ್ಲರೂ ಸೇರಿಕೊಂಡು ತಡವಾಗಿ ಖರೀದಿ ಪ್ರಾರಂಭಿಸಿ, ಕಮಿಷನ್ ಪಡೆಯುವ ಷಡ್ಯಂತ್ರ ನಡೆಸುತ್ತಿರುವುದು ಕಂಡುಬರುತ್ತಿದೆ. ಇದನ್ನು ರೈತ ಸಂಘಟನೆಗಳು ಸಹಿಸುವುದಿಲ್ಲ ಎಂದು ಹೇಳಿದರು.
ಶಿವಪ್ಪ ಹೊರಕೇರಿ, ವೀರಬಸಪ್ಪ ಹೂಗಾರ, ಸಿ.ಎಸ್.ಪಾಟೀಲ, ಎಸ್.ಬಿ.ಜೋಗಣ್ಣವರ, ಸುಭಾಸ ಗಿರಿಯಣ್ಣವರ, ನಿಂಗಪ್ಪ ಆದೆಪ್ಪನವರ, ಅರ್ಜುನ ಮಾನೆ, ವಿಜಯಲಕ್ಷ್ಮಿ ಕುಮ್ಮಿ, ಕಸ್ತೂರೆವ್ವ ಬೆಳವಣಿಕಿ, ತಿಪ್ಪಣ್ಣ ಮೇಟಿ, ಮಲ್ಲಯ್ಯ ಹಿರೇಮಠ, ಕಲ್ಲಪ್ಪ ಹುದ್ದಾರ, ಹನುಮಂತ ಸರನಾಯ್ಕರ, ಅರ್ಜುನ ಮಾನೆ, ವಾಸು ಚವ್ಹಾಣ, ಬಸನಗೌಡ ಪಾಟೀಲ, ಶಂಕ್ರಪ್ಪ ಜಾಧವ, ಚನಬಸಪ್ಪ ಚವಡಿ, ಫಕೀರಸಾಬ್ ನದಾಫ್, ರುದ್ರಯ್ಯ ಮಠದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.