ಶನಿವಾರ, ಆಗಸ್ಟ್ 8, 2020
23 °C
ಮಾತು ಬರಲ್ಲ, ಕಿವಿ ಕೇಳಲ್ಲ; ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಸಂತೋಷ

ಅಂಗವಿಕಲರಿಗೆ ಮಾದರಿಯಾದ ಟ್ರಾಕ್ಟರ್‌ ಮೇಸ್ತ್ರಿ..!

ನಾಗರಾಜ ಎಸ್. ಹಣಗಿ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಕಿವಿ ಕೇಳಿಸದ, ಮಾತೂ ಬಾರದ ವ್ಯಕ್ತಿಯೊಬ್ಬರು, ಟ್ರಾಕ್ಟರ್‌ ದುರಸ್ತಿಯಲ್ಲಿ ಪ್ರಾವೀಣ್ಯತೆ ಗಳಿಸಿ, ತಮ್ಮ ಸ್ವಂತ ದುಡಿಮೆಯ ಮೂಲಕ ಇತರೆ ಅಂಗವಿಕಲರಿಗೂ ಮಾದರಿ ಆಗಿದ್ದಾರೆ. ಲಕ್ಷ್ಮೇಶ್ವರದ ಸಂತೋಷ ಸಂಭಾಜಿ ಮೇಸ್ತ್ರಿ ವೈಕಲ್ಯವನ್ನು ಮೀರಿ ಬೆಳೆದಿದ್ದಾರೆ.

ಸಂತೋಷ ಹುಬ್ಬಳ್ಳಿ ತಾಲ್ಲೂಕು ಮಂಟೂರು ಗ್ರಾಮದವರು. ಲಕ್ಷ್ಮೇಶ್ವರದಲ್ಲಿರುವ ತಮ್ಮ ಅಜ್ಜನ ಮನೆಯಲ್ಲಿದ್ದು ಕೊಂಡು, ಇಲ್ಲೇ ಬದುಕು ರೂಪಿಸಿಕೊಂಡಿದ್ದಾರೆ. ರೋಣ ತಾಲ್ಲೂಕು ನರೇಗಲ್ಲ ಪಟ್ಟಣದ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಮೂರನೇ ತರಗತಿವರೆಗೆ ಅಧ್ಯಯನ ಮಾಡಿದ್ದಾರೆ.

ಒಂದೂವರೆ ದಶಕಗಳ ಹಿಂದೆ, ಲಕ್ಷ್ಮೇಶ್ವರದಲ್ಲಿ ಟ್ರಾಕ್ಟರ್‌ ಮೇಸ್ತ್ರಿ ಎಂದು ಪ್ರಸಿದ್ಧರಾಗಿದ್ದ ಹಾವೇರಿ ಮೇಸ್ತ್ರಿ ಅವರ ಹತ್ತಿರ ಸಂತೋಷ ಅವರನ್ನು ಸಹಾಯಕರಾಗಿ ಕೆಲಸ ಮಾಡಲು ಅವರ ಅಜ್ಜ ಕಳುಹಿಸಿದರು. ಎಂಟು ವರ್ಷಗಳ ಕಾಲ ಅಲ್ಲಿ ಸಹಾಯಕರಾಗಿ ದುಡಿದು, ವೃತ್ತಿ ಅನುಭವ ಗಳಿಸಿಕೊಂಡಿದ್ದರು. ನಂತರ ಮಾಲತೇಶ ಆಟೋ ಎಲೆಕ್ಟ್ರಿಕಲ್ ವರ್ಕ್ಸ್‌ ಹೆಸರಿನಲ್ಲಿ ತಾವೇ ಸ್ವಂತ ಗ್ಯಾರೇಜ್ ತೆರೆದರು. ಕಳೆದ ಮೂರು ವರ್ಷಗಳ ಹಿಂದೆ ಧಾರವಾಡದಿಂದ ಕಿವುಡ ಮತ್ತು ಮೂಕ ಯುವತಿಯನ್ನು ಮದುವೆ ಆಗಿದ್ದಾರೆ.

ಸಂತೋಷ ಟ್ರಾಕ್ಟರ್‌ ದುರಸ್ತಿ ಮಾಡುವುದರಲ್ಲಿ ನಿಸ್ಸೀಮರು. ಹೀಗಾಗಿ ಅವರಿಗೆ ಕೆಲಸದ ತೊಂದರೆ ಎಂದೂ ಕಾಡಿಲ್ಲ. ದಿನಾಲೂ ಹಲವು ಟ್ರಾಕ್ಟರ್‌‌ಗಳು ದುರಸ್ತಿಗಾಗಿ ಇವರ ಗ್ಯಾರೇಜಿಗೆ ಬರುತ್ತವೆ. ಟ್ರಾಕ್ಟರ್‌‌ನ ಬಿಡಿಭಾಗಗಳನ್ನು ಗಮನಿಸಿಯೇ ಸಮಸ್ಯೆಯ ಮೂಲವನ್ನು ಕಂಡು ಹಿಡಿದು ದುರಸ್ತಿ ಮಾಡುತ್ತಾರೆ.

‘ಸಂತೋಷ ಒಳ್ಳೆ ಮೇಸ್ತ್ರಿ. ಇವರು ಕೆಲಸಕ್ಕೆ ತಕ್ಕಷ್ಟು ಹಣ ಪಡೆಯುತ್ತಾರೆ. ಹೆಚ್ಚಿನ ಹಣವನ್ನು ಜನರಿಂದ ವಸೂಲಿ ಮಾಡುವುದಿಲ್ಲ. ಹಿಂಗಾಗಿ ನಾವು ಟ್ರಾಕ್ಟರ್‌ ಬದಲಾಯಿಸಿದರೂ ಮೇಸ್ತ್ರಿಯನ್ನು ಮಾತ್ರ ಬದಲಾಯಿಸಿಲ್ಲ’ ಎಂದು ಧಾರವಾಢ ಜಿಲ್ಲೆ ಕುಂದಗೊಳ ತಾಲ್ಲೂಕು ಕಳಸ ಗ್ರಾಮದದಿಂದ ಇಲ್ಲಿಗೆ ಟ್ರಾಕ್ಟರ್‌‌ ರಿಪೇರಿಗೆ ಬಂದಿದ್ದ ರೈತ ಮೆಹಬೂಬ್‍ಸಾಬ್ ಖಾದರ್‍ಸಾಬ್ ಸುಂಕದ ಖುಷಿಯಿಂದ ಹೇಳಿದರು.

‘ನಮ್ಮ ಅಣ್ಣ ಹಣಕ್ಕಾಗಿ ಎಂದೂ ಆಸೆ ಪಟ್ಟವರಲ್ಲ. ದುಡಿಮೆಗೆ ತಕ್ಕ ಹಣ ಪಡೆಯುತ್ತಾರೆ. ಒಮ್ಮೊಮ್ಮೆ ಹಣ ಇಲ್ಲದೇ ಬಂದವರ ಟ್ರಾಕ್ಟರ್‌‌ಗಳನ್ನೂ ಸಹ ರಿಪೇರಿ ಮಾಡಿ ಕಳುಹಿಸಿದ್ದಾರೆ’ ಎಂದು ಸಂತೋಷ ಅವರ ತಮ್ಮ ಸದಾನಂದ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.