ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಆವರಣದಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು..!

ಹಾತಲಗೇರಿ ಗ್ರಾಮದಲ್ಲಿ ಸ್ಮಶಾನದ ಸಮಸ್ಯೆ; ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 12 ಜುಲೈ 2019, 14:29 IST
ಅಕ್ಷರ ಗಾತ್ರ

ಗದಗ: ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಇಲ್ಲದ ಕಾರಣ, ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಗ್ರಾಮ ಪಂಚಾಯ್ತಿ ಆವರಣದಲ್ಲೇ ನಡೆಸಲು ಗ್ರಾಮಸ್ಥರು ಮುಂದಾದ ಘಟನೆ ತಾಲ್ಲೂಕಿನ ಹಾತಲಗೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದಲ್ಲಿ 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಶವಸಂಸ್ಕಾರಕ್ಕೆ ಸ್ಮಶಾನ ಇಲ್ಲದಿರುವುದರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ನಾಲ್ಕು ದಶಕಗಳಿಂದ ಗ್ರಾಮದಲ್ಲಿ ಯಾರೇ ಮೃತಪಟ್ಟರೂ, ಗ್ರಾಮದಲ್ಲೇ ಇರುವ ಖಾಸಗಿ ಒಡೆತನದ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಈ ಜಮೀನಿನ ಮಾಲೀಕ ಅಲ್ಲಿ ಅಂತ್ಯಕ್ರಿಯೆಗೆ ಅವಕಾಶ ನಿರಾಕರಿಸಿದ್ದರಿಂದ ಸಮಸ್ಯೆ ಕಾಣಿಸಿಕೊಂಡಿತ್ತು.

ಸ್ಮಶಾನಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬೇಸತ್ತ ಗ್ರಾಮಸ್ಥರು ಶುಕ್ರವಾರ ಗ್ರಾಮ ಪಂಚಾಯ್ತಿ ಆವರಣದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡು, ಅಲ್ಲಿ ಕಟ್ಟಿಗೆಯನ್ನು ಜೋಡಿಸಿದರು. ವಿಷಯ ತಿಳಿದ ಗದಗ ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಮತ್ತು ಗ್ರಾಮೀಣ ಠಾಣೆ ಪಿಎಸ್‍ಐ ಮಲ್ಲಿಕಾರ್ಜುನ ಕುಲಕರ್ಣಿ ಗ್ರಾಮಕ್ಕೆ ದೌಡಾಯಿಸಿ, ಇದನ್ನು ತಡೆದರು.

‘ಸಾರ್ವಜನಿಕ ಸ್ಮಶಾನಕ್ಕೆ ಭೂಮಿ ಖರೀದಿಸುವಂತೆ ಆಗ್ರಹಿಸಿ ಹಾತಲಗೇರಿ ಗ್ರಾಮಸ್ಥರು ಕಳೆದ 4 ವರ್ಷಗಳಿಂದ ಗ್ರಾಮ ಪಂಚಾಯ್ತಿ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಸ್ಮಶಾನ ಭೂಮಿ ಖರೀದಿಯಾಗಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಹಶೀಲ್ದಾರ್‌ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸ್ಥಳ ಪರಿಶೀಲನೆ ನಡೆಸಿದರು. ಮೂರು ತಿಂಗಳೊಳಗೆ ಸ್ಮಶಾನಕ್ಕೆ ಜಮೀನು ಖರೀದಿಸಲಾಗುವುದು ಎಂದು ಭರವಸೆ ನೀಡಿದರು. ಆ ನಂತರ ಗ್ರಾಮಸ್ಥರು, ಪಂಚಾಯ್ತಿ ಮುಂದೆ ಶವಸಂಸ್ಕಾರಕ್ಕಾಗಿ ಜೋಡಿಸಿದ ಕಟ್ಟಿಗೆಯನ್ನು ತೆರವುಗೊಳಿಸಿದರು. ಗ್ರಾಮದ ಹಳ್ಳದ ಬದುವಿನಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿದರು.

‘ಜಿಲ್ಲಾಡಳಿತ ಕೂಡಲೇ ಸ್ಮಶಾನಕ್ಕೆ ಜಾಗ ನೀಡಬೇಕು’ ಎಂದು ಹಾತಲಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೈಲಾರಪ್ಪ ಜಾಲಮ್ಮನವರ ಆಗ್ರಹಿಸಿದರು. ಗಣೇಶ ಪೂಜಾರ, ಯಲ್ಲಪ್ಪ ಬೇಲೇರಿ, ಯಂಕಪ್ಪ ಮೇಲ್ಮನಿ, ವಾಸು ಮೇಲ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT