ಗದಗ: ಐತಿಹಾಸಿಕ ರೊಟ್ಟಿ ಜಾತ್ರೆ ರದ್ದು

ಡಂಬಳ (ಗದಗ): ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗುವ ಆತಂಕದ ಹಿನ್ನೆಲೆಯಲ್ಲಿ ಐತಿಹಾಸಿಕ ರೊಟ್ಟಿ ಜಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ತೊಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ ಹೇಳಿದರು.
ತೋಂಟದಾರ್ಯ ಕಲಾಭವನದಲ್ಲಿ ಸೋಮವಾರ 281ನೇ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಜಾತ್ರೆ ರದ್ದು ಮಾಡಲಾಗಿದೆ. ಆದಾಗ್ಯೂ ಸಂಪ್ರದಾಯದಂತೆ ಸಾಂಕೇತಿಕವಾಗಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಹೇಳಿದರು.
ಜಾತ್ರೆಯಲ್ಲಿ ಅಸಂಖ್ಯಾತ ಭಕ್ತರು ಸೇರುವುದರಿಂದ ಕೋವಿಡ್ ನಿಯಮ ಪಾಲನೆ ಸಾಧ್ಯವಾಗದು. ಸಾಂಸ್ಕೃತಿಕ ಕಾರ್ಯಕ್ರಮ, ಧರ್ಮಸಭೆ ಇರುವುದಿಲ್ಲ. ಸುತ್ತಲಿನ ಗ್ರಾಮದಿಂದ ಬರುವ ಭಕ್ತರಿಗೆ ಮಧ್ಯಾಹ್ನ ಮಾತ್ರ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದರು.
ಮಠದ ಆಡಳಿತಾಧಿಕಾರಿ ಎಸ್.ಎಸ್ ಪಟ್ಟಣಶೆಟ್ಟರ ಮಾತನಾಡಿ, ಕೋವಿಡ್ ಮಾರ್ಗಸೂಚಿಯಲ್ಲಿ ಜಾತ್ರೆಗೆ ಅವಕಾಶ ನೀಡಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದ್ದರಿಂದ ಅದ್ಧೂರಿ ಆಚರಣೆ ಇರುವುದಿಲ್ಲ. ಐದು ದಿನ ರುದ್ರಾಭಿಷೇಕ ಸೇರಿ ಫೆ.26ರಂದು ಮಹಾರಥೋತ್ಸವ, 27ರಂದು ಲಘುರಥೋತ್ಸವ ಇರಲಿದೆ. ನಮ್ಮಲ್ಲಿ ರೊಟ್ಟಿ ಜಾತ್ರೆ ಪ್ರಾರಂಭವಾದ ನಂತರ ಇತರೆ ಮಠಗಳಲ್ಲಿ ರೊಟ್ಟಿ ಜಾತ್ರೆ ಪ್ರಾರಂಭವಾಗಿದ್ದು, ಇದು ಕೋಮಸೌರ್ಹಾದದ ಜಾತ್ರೆಯಾಗಿದೆ ಎಂದರು.
ಕಳೆದ ವರ್ಷದ ಜಾತ್ರಾ ಕಮಿಟಿ ಅಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ, ಉಪಾಧ್ಯಕ್ಷ ಬಸವರಾಜ ಗಂಗಾವತಿ, ಕಾರ್ಯದರ್ಶಿ ಬಸವಂತಪ್ಪ ಪಟ್ಟಣಶೆಟ್ಟರ, ಖಜಾಂಚಿ ರೇವಣಸಿದ್ದಪ್ಪ ಕರಿಗಾರ ಅವರನ್ನೇ ಈ ಬಾರಿಯ ಜಾತ್ರೆಗೂ ಮುಂದುವರಿಸಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.