ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಜೋರು ಗಾಳಿ: ಧರೆಗುರುಳಿದ ಗಿಡಮರ

Last Updated 8 ಮೇ 2022, 14:03 IST
ಅಕ್ಷರ ಗಾತ್ರ

ಮುಂಡರಗಿ (ಗದಗ ಜಿಲ್ಲೆ): ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಹಲವಾರು ಬೃಹತ್ ಗಿಡಮರಗಳು ಧರೆಗುರುಳಿವೆ.

ಸಂಜೆ ನಾಲ್ಕು ಗಂಟೆಗೆ ಪ್ರಾರಂಭವಾದ ಭಾರಿ ಗಾಳಿಯು ಸುಮಾರು ಎರಡು ಗಂಟೆಗಳ ಕಾಲ ಬೀಸಿತು. ಇದರಿಂದಾಗಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣ, ಅನ್ನದಾನೀಶ್ವರ ನಗರ, ಬಸವೇಶ್ವರ ನಗರ ಮೊದಲಾದ ಭಾಗಗಳಲ್ಲಿ ಬೃಹತ್ ಗಿಡ ಮರಗಳು ನೆಲಕ್ಕುರುಳಿದವು. ಗಿಡಗಳು ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರಿಂದ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು.

ತಾಲ್ಲೂಕಿನ ವಿರುಪಾಪೂರ ಗ್ರಾಮದ ಬಳಿ ಚಲಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮೇಲೆ ಬೃಹತ್ ಬೇವಿನ ಮರ ಬಿದ್ದಿತು. ಬಸ್ ನಿಧಾನವಾಗಿ ಚಲಿಸುತ್ತಿದ್ದುದ್ದರಿಂದ ಯಾರಿಗೂ ಯಾವ ಅಪಾಯವು ಆಗಲಿಲ್ಲ. ಗಿಡ ಬಿದ್ದ ರಭಸಕ್ಕೆ ಬಸ್ಸಿನ ಮುಂದಿನ ಚಕ್ರ ಪಂಚರ್ ಅಯಿತು. ನಂತರ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳು ಬಿದ್ದ ಗಿಡಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನಕೂಲ ಮಾಡಿಕೊಟ್ಟರು.

ತಾಲ್ಲೂಕಿನ ಕಲಕೇರಿ, ಬೆಣ್ಣಿಹಳ್ಳಿ, ಕೊರ್ಲಹಳ್ಳಿ, ಶಿಂಗಟಾಲೂರ ಮೊದಲಾದ ಗ್ರಾಮಗಳಲ್ಲಿ ದೊಡ್ಡ ದೊಡ್ಡ ಗಿಡಗಳು ನೆಲಕ್ಕುರುಳಿವೆ. ಬೆಣ್ಣಿಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಪಟ್ಟಣದ ಕೆಲವು ಭಾಗಗಳ ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದ ಗಿಡಮರಗಳನ್ನು ಹೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದರು.

ತಾಲ್ಲೂಕಿನ ಬಿದರಳ್ಳಿ, ಮುಂಡವಾಡ, ಹಮ್ಮಿಗಿ, ಶಿಂಗಟಾಲೂರ, ಶೀರನಹಲ್ಳಿ, ಗಂಗಾಪೂರ, ಕೊರ್ಲಹಳ್ಳಿ ಮೊದಲಾದ ತುಂಗಭದ್ರಾ ನದಿ ದಂಡೆಯ ಗ್ರಾಮಗಳಲ್ಲಿ ಭಾರಿ ಗಾಳಿಯಿಂದ ಕೊಯ್ಲಿಗೆ ಬಂದಿದ್ದ ಭತ್ತದ ಪೈರು ಹಾಗೂ ಕಬ್ಬು ನೆಲಕ್ಕೊರಗಿದೆ.

ತಾಲ್ಲೂಕಿನಾದ್ಯಂತ ಮಳೆಯ ಆರ್ಭಟಕ್ಕಿಂತ ಗಾಳಿಯ ಆರ್ಭಟ ಹೆಚ್ಚಾಗಿತ್ತು. ಕೆಲವು ಭಾಗಗಳಲ್ಲಿ ಮಾತ್ರ ಜೋರಾಗಿ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT