ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪಾರಿಗೆ ಬಲಿಯಾದ ಕೊಪ್ಪಳದ ಕುಟುಂಬ: ಬರ್ತ್‌ಡೇ ದಿನವೇ ನಾಲ್ವರ ಬರ್ಬರ ಹತ್ಯೆ

Published 23 ಏಪ್ರಿಲ್ 2024, 5:32 IST
Last Updated 23 ಏಪ್ರಿಲ್ 2024, 5:32 IST
ಅಕ್ಷರ ಗಾತ್ರ

ಗದಗ: ಹ್ಯಾಪಿ ಬರ್ಡೇ ಟು ಯೂ... ಹ್ಯಾಪಿ ಬರ್ಡೇ ಟು ಯೂ ಡಿಯರ್‌ ಮಾಮಿ... – ಹೀಗೆ ಏ.18ರಂದು ರಾತ್ರಿ ಬಂಧು ಬಾಂಧವರ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿ, ಅತ್ಯಂತ ಸಂತೋಷದಿಂದ ಜನ್ಮದಿನ ಆಚರಿಸಿಕೊಂಡಿದ್ದರು ಲಕ್ಷ್ಮಿಬಾಯಿ. ಪತಿ ಪರುಶುರಾಮ, ಮಗಳು ಆಕಾಂಕ್ಷಾ, ಅಳಿಯ ಕಾರ್ತಿಕ್‌ ಬಾಕಳೆ ಅವರಿಂದ ಪ್ರೀತಿಯ ಉಡುಗೊರೆಯನ್ನೂ ಸ್ವೀಕರಿಸಿದ್ದರು. ಪ್ರಕಾಶ್‌ ಬಾಕಳೆ ಹಾಗೂ ಸುನಂದಾ ಬಾಕಳೆ ನೂರು ಕಾಲ ಚೆನ್ನಾಗಿ ಬಾಳಿ ಎಂದು ಹಾರೈಸಿದ್ದರು.

ಆದರೆ, ನಗರದ ದಾಸರಓಣಿಯಲ್ಲಿರುವ ಪ್ರಕಾಶ್‌ ಬಾಕಳೆ ಮನೆಯಲ್ಲಿ ಖುಷಿಯಿಂದ ಜನ್ಮದಿನ ಆಚರಿಸಿಕೊಂಡಿದ್ದ ಲಕ್ಷ್ಮಿಬಾಯಿ ಅದೇದಿನ ರಾತ್ರಿ, ಅದೇಮನೆಯಲ್ಲಿ ಬರ್ಬರವಾಗಿ ಹತ್ಯೆಯಾದರು. ಪರುಶುರಾಮ ಅವರ ತಂಗಿ ರುಕ್ಮಿಣಿ ಅವರ ಮಗ ವಿನಾಯಕ ಬಾಕಳೆ ಸ್ವಂತ ತಂದೆ ಹಾಗೂ ಮಲತಾಯಿ, ಮಲತಮ್ಮನ ಹತ್ಯೆಗೆ ನೀಡಿದ್ದ ಸುಪಾರಿಗೆ ಇವರೂ ಬಲಿಯಾದರು.

ಪ್ರಕಾಶ್‌ ಬಾಕಳೆ ಅವರ ಮೊದಲ ಪತ್ನಿ ದಿವಂಗತ ರುಕ್ಮಿಣಿ ಅವರಿಗೆ ಮೂವರು ಮಕ್ಕಳು. ಆ ಪೈಕಿ ವಿನಾಯಕ ಬಾಕಳೆ ಹೆಸರಿನಲ್ಲಿ ಪ್ರಕಾಶ್‌ ಬಾಕಳೆ ಸಾಕಷ್ಟು ಆಸ್ತಿ ಮಾಡಿದ್ದರು. ಐದು ತಿಂಗಳ ಹಿಂದೆ ತಂದೆಗೆ ತಿಳಿಸದೇ ಮಗ ಮೂರು ಆಸ್ತಿಗಳನ್ನು ಮಾರಾಟ ಮಾಡಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮಗನ ನಡುವೆ ವೈಮನಸ್ಸು ಮೂಡಿತ್ತು. ಗಲಾಟೆ ಕೂಡ ಆಗಿತ್ತು. ಇದೇ ವಿಷಯಕ್ಕೆ ಸ್ವಂತ ತಂದೆ ಹಾಗೂ ಮಲತಾಯಿ ಮತ್ತು ಅವರ ಮಗನ ಹತ್ಯೆಗೆ ವಿನಾಯಕ ಬಾಕಳೆ ಸಂಚು ರೂಪಿಸಿ, ಫೈರೋಜ್‌ ಎಂಬಾತನಿಗೆ ₹2 ಲಕ್ಷ ಮುಂಗಡ ನೀಡಿದ್ದ.

ಬಳಸಿದ ಕಾರುಗಳನ್ನು ಮಾರಾಟ ಮಾಡುವ ಏಜೆಂಟ್‌ ಆಗಿದ್ದ ಗದುಗಿನ ರಾಜೀವ್‌ಗಾಂಧಿ ನಗರದ ನಿವಾಸಿ ಫೈರೋಜ್‌ ಮೂವರ ಹತ್ಯೆಗಾಗಿ ಮಹಾರಾಷ್ಟ್ರದ ಮೀರಜ್‌ ಪಟ್ಟಣದ ಹಂತಕರನ್ನು ಸಂಪರ್ಕಿಸಿದ್ದ. ₹65 ಲಕ್ಷಕ್ಕೆ ಮಾತುಕತೆ ಮುಗಿಸಿ ಅವರನ್ನು ಗದಗ ನಗರಕ್ಕೆ ಕರೆಯಿಸಿದ್ದ.

ಹಂತಕರೆಲ್ಲಾ 19ರಿಂದ 23 ವರ್ಷದೊಳಗಿನವರು: ಮಹಾರಾಷ್ಟ್ರದ ಮೀರಜ್‌ ಪಟ್ಟಣ ಸುಪಾರಿ ಕೊಲೆಗಡುಕರೆಲ್ಲರೂ ಚಿಕ್ಕ ವಯಸ್ಸಿನವರು. ಮೀರಜ್‌ ಪಟ್ಟಣದಲ್ಲಿ ಕಾರು ತೊಳೆಯುವುದು, ಹಮಾಲಿ ಕೆಲಸ, ಗೌಂಡಿ ಕೆಲಸ ಮಾಡಿಕೊಂಡಿದ್ದವರು.

ಹಂತಕರ ಪೈಕಿ ಅತಿ ಕಿರಿಯರಾದ 19 ವರ್ಷದ ಸಾಹಿಲ್‌ ಮತ್ತು ಸೊಹೇಲ್‌ ಅವಳಿ ಜವಳಿ ಹುಡುಗರು. ಸಾಹಿಲ್‌ ಕಾರು ತೊಳೆಯುತ್ತಿದ್ದ. ಸೊಹೇಲ್‌ ಹಮಾಲಿ ಕೆಲಸ ಮಾಡಿಕೊಂಡಿದ್ದ. ಮೀರಜ್‌ನ ಪ್ರತಾಪ್‌ ಕಾಲೊನಿಯ ಸುಲ್ತಾನ್‌ (23), ಮೋವಿನ್‌ ಗಲ್ಲಿಯ ವಾಹಿದ್‌ ಬೇಪಾರಿ (21) ಗೌಂಡಿ ಕೆಲಸ ಮಾಡುತ್ತಿದ್ದರು. ಮಹೇಶ್‌ ಸಾಳೋಂಕೆ (21) ವಿಂಡೋ ಸ್ಲೈಡಿಂಗ್‌ ಕೆಲಸ ಮಾಡಿಕೊಂಡಿದ್ದ.

ಫೈರೋಜ್‌ ಮೂಲಕ ಸುಪಾರಿ ಪಡೆದ ಹಂತಕರು ಘಟನೆ ನಡೆಯುವ ಒಂದು ವಾರಕ್ಕೂ ಮುನ್ನವೇ ಗದಗ ನಗರಕ್ಕೆ ಬಂದಿಳಿದಿದ್ದರು. ನಿಂಬೆಹಣ್ಣು ಮಾರುವುದು, ಚಿಂದಿ ಹಾಯುವವರ ಸೋಗಿನಲ್ಲಿ ದಾಸರ ಓಣಿಯಲ್ಲಿ ಸಾಕಷ್ಟು ಬಾರಿ ಅಡ್ಡಾಡಿಕೊಂಡು ಮನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಮನೆಯೊಳಕ್ಕೆ ನುಗ್ಗಲು ಹಾಗೂ ಹತ್ಯೆ ಮುಗಿಸಿದ ನಂತರ ಪರಾರಿಯಾಗಲು ದಾರಿ ಎಲ್ಲವನ್ನೂ ಮೊದಲೇ ಕಂಡುಕೊಂಡು, ಹತ್ಯೆಯ ಯೋಜನೆ ರೂಪಿಸಿಕೊಂಡಿದ್ದರು. ಈ ಹಂತಕರಿಗೆ ಹಣಕಾಸು, ವಾಹನ, ಕೊಲೆಗೆ ಬೇಕಿರುವ ಆಯುಧಗಳನ್ನೆಲ್ಲಾ ಫೈರೋಜ್‌ ಒದಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಸುಪಾರಿ ಪಡೆದ ಮೀರಜ್‌ ಕೊಲೆಗಡುಕರು ಒಂದು ವಾರಗಳ ಕಾಲ ಅಡ್ಡಾಡಿ ಎಲ್ಲ ಮಾಹಿತಿ ಸಂಗ್ರಹಿಸಿ ಅತ್ಯಂತ ಕಡಿಮೆ ಸಮಯದಲ್ಲಿ ಕೊಲೆ ಯೋಜನೆ ರೂಪಿಸಿದ್ದರು. ಪ್ರಕಾಶ್‌ ಬಾಕಳೆ, ಸುನಂದಾ ಬಾಕಳೆ, ಕಾರ್ತಿಕ್‌ ಬಾಕಳೆ ಅವರ ಟಾರ್ಗೆಟ್‌ ಆಗಿದ್ದರು. ಆದರೆ, ಹಂತಕರು ಪ್ರಕಾಶ್‌ ಬಾಕಳೆ ಅವರ ಮನೆ ಪ್ರವೇಶಿಸಿದ ಸಂದರ್ಭದಲ್ಲಿ ಅತಿಥಿಗಳು ಇರುವುದು ಅವರಿಗೆ ಗೊತ್ತಿರಲಿಲ್ಲ. ದುರದೃಷ್ಟವಶಾತ್‌ ಆವತ್ತು ಪರುಶುರಾಮ, ಲಕ್ಷ್ಮಿಬಾಯಿ, ಆಕಾಂಕ್ಷಾ ಕೂಡ ಬಲಿಯಾದರು’ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಶ್‌ ಕುಮಾರ್‌ ವಿಕಾಶ್‌ ತಿಳಿಸಿದ್ದಾರೆ.

‘ಜನ್ಮದಿನ ಆಚರಿಸಿಕೊಂಡು ಕೊಪ್ಪಳಕ್ಕೆ ತೆರಳುವ ಸಲುವಾಗಿ ಏ.18ರಂದು ರಾತ್ರಿ ಈ ಕುಟುಂಬ ರೈಲ್ವೆ ನಿಲ್ದಾಣಕ್ಕೆ ತೆರಳಿತ್ತು. ಆದರೆ, ರೈಲು ತಪ್ಪಿದ್ದರಿಂದ ಮತ್ತೇ ಬಾಕಳೆ ಮನೆಗೆ ಹಿಂತಿರುಗಿದ್ದ ಈ ಕುಟುಂಬ ಯಾರಿಗೋ ನೀಡಿದ ಸುಪಾರಿಗೆ ಸಿಕ್ಕಿಹಾಕಿಕೊಂಡು ಹತರಾಗಿದ್ದು ಮಾತ್ರ ದುರ್ದೈವದ ಸಂಗತಿ’ ಎಂದು ಸ್ಥಳೀಯರು, ಬಂಧುಗಳು ದುಃಖಿತರಾದರು.

ಲಕ್ಷ್ಮಿಬಾಯಿಗೆ ಜನ್ಮದಿನದ ಶುಭಾಶಯ ಕೋರಿದ್ದ ಪ್ರಕಾಶ್ ಬಾಕಳೆ ಕುಟುಂಬದವರ ಜತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದರು
ಲಕ್ಷ್ಮಿಬಾಯಿಗೆ ಜನ್ಮದಿನದ ಶುಭಾಶಯ ಕೋರಿದ್ದ ಪ್ರಕಾಶ್ ಬಾಕಳೆ ಕುಟುಂಬದವರ ಜತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT