ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳ ಅಭ್ಯುದ್ಯಯಕ್ಕೆ ಶ್ರಮಿಸಿ: ಸಚಿವ ಕೆ.ಎಸ್.ಈಶ್ವರಪ್ಪ

ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳಿಗೆ ಒಂದು ದಿನದ ಕಾರ್ಯಾಗಾರ
Last Updated 10 ಅಕ್ಟೋಬರ್ 2021, 6:00 IST
ಅಕ್ಷರ ಗಾತ್ರ

ಗದಗ: ‘ಗ್ರಾಮ ಪಂಚಾಯ್ತಿಗಳ ಚುನಾಯಿತ ಜನಪ್ರತಿನಿಧಿಗಳು ಗ್ರಾಮಗಳ ಅಭ್ಯುದಯಕ್ಕೆ ಶ್ರಮಿಸಬೇಕು. ಈ ಮೂಲಕ ಮತದಾರರ ಋಣ ತೀರಿಸಬೇಕು’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾಗುವುದು ಅತ್ಯಂತ ಸವಾಲಿನ ಸಂಗತಿ. ಗ್ರಾಮಗಳ ಸಮಗ್ರ ಅಭಿವೃದ್ಧಿಯ ಗುರುತರ ಜವಾಬ್ದಾರಿ ಚುನಾಯಿತ ಜನಪ್ರತಿನಿಧಿಗಳ ಮೇಲಿದೆ’ ಎಂದು ಹೇಳಿದರು.

‘ಗ್ರಾಮಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿವೆ. ಗ್ರಾಮ ಪಂಚಾಯ್ತಿಗಳಿಗೆ ನೂತನವಾಗಿ ಚುನಾಯಿತರಾದ ಜನಪ್ರತಿನಿಧಿಗಳಿಗೆ ಕೈಪಿಡಿ ನೀಡಲಾಗಿದ್ದು, ಅದರಂತೆ ತಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ರೂಪುರೇಷೆ ಸಿದ್ಧಪಡಿಸಿ, ಮಾದರಿ ಗ್ರಾಮ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ‘ಅನುದಾನದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದು ಚುನಾಯಿತ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಪಿಡಿಒಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಬೇಕು’ ಎಂದು ಹೇಳಿದರು.

‘ಜಲಜೀವನ ಮಿಷನ್ ಯೋಜನೆಯನ್ನು ಪ್ರತಿ ಗ್ರಾಮಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಚುನಾಯಿತ ಜನಪ್ರತಿನಿಧಿಗಳು ಹಾಗೂ ಪಿಡಿಒಗಳು ಕ್ರಮವಹಿಸಬೇಕು’ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾ‌ದ ಶಿವಾನಂದ ಕಳವೆ, ಪ್ರಮೋದ ಹೆಗಡೆ, ಸುರೇಶ ಕಪ್ಪತ್ತನವರ, ಚಂದ್ರಶೇಖರ ಉಪನ್ಯಾಸ ನೀಡಿದರು.

ಶಾಸಕರಾದ ಕಳಕಪ್ಪ ಬಂಡಿ, ಎಚ್.ಕೆ.ಪಾಟೀಲ, ರಾಮಣ್ಣ ಲಮಾಣಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಮಾಜಿ ಶಾಸಕ ಡಿ.ಆರ್.ಪಾಟೀಲ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಸಿಇಒ ಭರತ್‌ ಎಸ್. ಇದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಆರೋಗ್ಯ ಅಮೃತ ಅಭಿಯಾನ ಹಾಗೂ ಸ್ವಚ್ಛ ಭಾರತ ಮಿಷನ್‌ ಸಾಕ್ಷ್ಯ ಚಿತ್ರ ವಾಹನಕ್ಕೆ ಚಾಲನೆ ನೀಡಲಾಯಿತು.

ಜನಪ್ರತಿನಿಧಿಗಳೊಂದಿಗೆ ಸಂವಾದ
ಚುನಾಯಿತ ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಸಚಿವ ಕೆ.ಎಸ್‌.ಈಶ್ವರಪ್ಪ, ಗ್ರಾಮಗಳಲ್ಲಿನ ಕೆರೆ, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿ ತುಂಬಿಸುವುದು, ಸ್ಮಶಾನಗಳ ನಿರ್ಮಾಣ, ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಹಾಗೂ ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆಯಿಂದಾಗುವ ಉಪಯೋಗಗಳ ಕುರಿತು ಗ್ರಾಮಗಳ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಅಂಗನವಾಡಿ ಕೇಂದ್ರ, ಸ್ಮಶಾನ, ಆಟದ ಮೈದಾನ ಮುಂತಾದ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳುವಂತೆ ತಿಳಿಸಿದರು.

13 ಕೋಟಿ ಮಾನವ ದಿನಗಳ ಸೃಜನೆ
ರಾಜ್ಯದಲ್ಲಿ ನರೇಗಾ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದ್ದು, ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಗ್ರಾಮ ಪಂಚಾಯ್ತಿಗಳ ಆದ್ಯ ಕರ್ತವ್ಯವಾಗಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಈ ನಿಟ್ಟಿನಲ್ಲಿ ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳನ್ನು ಸೃಜಿಸಿ, ಹೆಚ್ಚುವರಿ ಎರಡು ಕೋಟಿ ಮಾನವ ದಿನಗಳಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಪಿಡಿಒಗಳು ಕಡ್ಡಾಯವಾಗಿ ಕಚೇರಿಗೆ ಹಾಜರಾಗಿ ಜನಪ್ರತಿನಿಧಿಗಳು ಸೂಚಿಸುವ ಕಾರ್ಯಗಳನ್ನು ನಿರ್ವಹಿಸಬೇಕು. ದೂರುಗಳು ಬಂದರೆ ಸಂಬಂಧಿಸಿದ ಅಧಿಕಾರಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಕೆ.ಎಸ್.ಈಶ್ವರಪ್ಪ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT