ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗಡಿಗಳ ಮೇಲೆ ದಾಳಿ: ನಿಷೇಧಿತ ಪ್ಲಾಸ್ಟಿಕ್‌, ತಂಬಾಕು ಉತ್ಪನ್ನಗಳು ವಶಕ್ಕೆ

Published 3 ಜುಲೈ 2024, 14:39 IST
Last Updated 3 ಜುಲೈ 2024, 14:39 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಕಂದಾಯ ಇಲಾಖೆ, ಆಹಾರ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿ ಅಂಗಡಿ ಪರವಾನಗಿ ಪರಿಶೀಲಿಸಿ, ನಿಷೇಧಿತ ಪ್ಲಾಸ್ಟಿಕ್‌, ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದರು.

ಕಾಲಕಾಲೇಶ್ವರ ವೃತ್ತದಿಂದ ಶಿವಾಜಿ ವೃತ್ತದವರೆಗೆ, ಕುಷ್ಟಗಿ ರಸ್ತೆಯಲ್ಲಿನ ಹೋಟೆಲ್‌ಗಳು ಹಾಗೂ ಬಸ್‌ ನಿಲ್ದಾಣದ ವರೆಗಿನ ಎರಡೂ ಬದಿಯ ಅಂಗಡಿ, ಹೋಟೆಲ್‌ಗಳನ್ನು ಪರಿಶೀಲಿಸಿದರು.

ನಿಷೇಧಿತ ಪ್ಲಾಸ್ಟಿಕ್‌ ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಕಿರಾಣಿ ಅಂಗಡಿಗಳು, ಡಬ್ಬಿ ಅಂಗಡಿಗಳು, ಬಟ್ಟೆ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌, ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದರು. ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಟೆಸ್ಟೀಂಗ್‌ ಪೌಡರ್‌ ಬಳಸುತ್ತಿರುವ ಕುರಿತು ಪರಿಶೀಲಿಸಿದರು. ಟೆಸ್ಟೀಂಗ್‌ ಪೌಡರ್‌ ಬಳಸುತ್ತಿದ್ದ ಹೋಟೆಲ್‌ಗಳನ್ನು ಸೀಜ್‌ ಮಾಡಿದರು.

‘ಗಜೇಂದ್ರಗಡ ಪಟ್ಟಣದಲ್ಲಿ ಬುಧವಾರ ಸುಮಾರು 40ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಿ ಪರವಾನಗಿ ಪರಿಶೀಲಿಸುವುದರ ಜೊತೆಗೆ 20 ಕೆಜಿ ತಂಬಾಕು ಉತ್ಪನ್ನಗಳು, 35 ಕೆಜಿ ನಿಷೇಧಿತ ಪ್ಲಾಸ್ಟಿಕ್‌ ವಶಕ್ಕೆ ಪಡೆಯಲಾಗಿದೆ. ಟೆಸ್ಟಿಂಗ್‌ ಪೌಡರ್‌ ಬಳಸುತ್ತಿದ್ದ ರಾಜ್‌ ಟಿಪಿನ್‌ ಸೆಂಟರ್‌ ಸೀಜ್‌ ಮಾಡಲಾಗಿದೆ. ಅಲ್ಲದೆ ಪರವಾನಗಿ ಇಲ್ಲವೆಂದು ಬಂದ್‌ ಮಾಡಿದ್ದ ಬಸ್‌ ನಿಲ್ದಾಣದ ಮುಂದಿರುವ ಏಳು ಅಂಗಡಿಗಳ ಮಾಲೀಕರು ಸಂಜೆ ಪುರಸಭೆಯಲ್ಲಿ ಪರವಾನಗಿ ಪಡೆದು ಬೀಗ ಪಡೆದುಕೊಂಡು ಹೊದರು. ಈ ಪ್ರಕ್ರಿಯೆ ಮುಂದುವರೆಯುತ್ತದೆʼ ಎಂದು ಪುರಸಭೆ ಆರೋಗ್ಯ ಅಧಿಕಾರಿ ಶಿವು ಇಲಾಳ ಮಾಹಿತಿ ನೀಡಿದರು.

ʼಪಟ್ಟಣದ ವಿವಿಧ ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪರವಾನಗಿ ಪಡೆದಿರುವವರು ಸಕಾಲದಲ್ಲಿ ರಿನಿವಲ್‌ ಮಾಡಿಸಿಕೊಳ್ಳಬೇಕು. ಅಲ್ಲದೆ ನಿಷೇಧಿತ ಪ್ಲಾಸ್ಟಿಕ್‌, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ಅವುಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಹೋಟೆಲ್‌ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದರ ಜೊತೆಗೆ ಟೆಸ್ಟಿಂಗ್‌ ಪೌಡರ್‌ ಬಳಸುವಂತಿಲ್ಲʼ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.

ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ, ಆಹಾರ ಇಲಾಖೆಯ ಪ್ರಭಾರಿ ಆಹಾರ ನಿರೀಕ್ಷಕಿ ಶಾಂತಾಬಾಯಿ ಚವಡಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಆರೋಗ್ಯ ಅಧಿಕಾರಿ ಶಿವಕುಮಾರ ಇಲಾಳ, ಪುರಸಭೆ ಸಿಬ್ಬಂದಿ ನಜೀರಸಾಬ ಸಾಂಗ್ಲೀಕರ, ರಾಘವೇಂದ್ರ ಮಂತಾ, ಗ್ರಾಮ ಆಡಳಿತಾಧಿಕಾರಿ ಉಮೇಶ ಅರಳಿಗಿಡದ, ಪೊಲೀಸ್‌ ಇಲಾಖೆಯ ಸುರೇಶ ಮಂತಾ, ಪ್ರಕಾಶ ಭೂಸನೂರಮಠ, ಸದಾಶಿವ ಕದಂ ಸೇರಿದಂತೆ ಪೌರ ಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT