ಮಂಗಳವಾರ, ಜೂನ್ 22, 2021
22 °C

ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರ ಆರೋಪ: ಗ್ರಾ.ಪಂ ಸಿಬ್ಬಂದಿ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೋಣ: ನರೇಗಾದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಕುರಹಟ್ಟಿ ಗ್ರಾಮ ಪಂಚಾಯತಿ ಸಭೆ ನಡೆಯುತ್ತಿದ್ದಾಗ ಮುದೇನಗುಡಿ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.

ಕುರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೇನಗುಡಿ ಗ್ರಾಮಸ್ಥರು ಗುಂಪು ಕಟ್ಟಿಕೊಂಡು ಬಂದು ಕುರಹಟ್ಟಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಇದ್ದ ಸಿಬ್ಬಂದಿ ಹಾಗೂ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಉದ್ಯೋಗ ಖಾತ್ರಿಯ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ವೇತನ ಬಿಡುಗಡೆಯಾಗಿಲ್ಲ.  ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕೆ ಬಾರದೇ ಇದ್ದರೂ ಕಂಪ್ಯೂಟರ್ ಆಪರೇಟರ್ ತಮ್ಮ ಕುಟುಂಬಸ್ಥರು, ಹಾಗೂ ತಮ್ಮಗೆ ಬೇಕಾದವರಿಗೆ ಕೂಲಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಮುದೇನಗುಡಿಯ ಕೂಲಿಕಾರ್ಮಿಕರು ಆರೋಪಿಸಿದ್ದಾರೆ.

ಈ ಕುರಿತು ಗ್ರಾ.ಪಂ.ಕಾರ್ಯಾಲಯದಲ್ಲಿದ್ದ ಇನ್ನಿತರ ಸಿಬ್ಬಂದಿ ವಿಚಾರಿಸುವ ಹೊತ್ತಿಗೆ ಉದ್ರಿಕ್ತ ಜನರು ಏಕಾಏಕಿ ಗ್ರಾ.ಪಂ. ಕಂಪ್ಯೂಟರ್‌ ಆಪರೇಟರ್ ಭೀಮಪ್ಪ ಹಡಪದ ಗ್ರಾ.ಪಂ.ಸದಸ್ಯ ತಮ್ಮನಗೌಡ ಪಾಟೀಲ ಅವರನ್ನು ಗ್ರಾ.ಪಂ.ಆವರಣಕ್ಕೆ ಎಳೆದು ತಂದು ಹಿಗ್ಗಾಮುಗ್ಗಾ ಥಳಸಿದ್ದಾರೆ. ಕಾರ್ಯಾಲಯದಲ್ಲಿ ಕುರ್ಚಿಗಳನ್ನು ತೂರಾಡಿ ಧ್ವಂಸಗೊಳಿಸಿದ್ದಾರೆ.

ಅಲ್ಲದೆ ಪಿ.ಡಿ.ಓ.ಆಗೂ ಮತ್ತಿತರರನ್ನು ಎಳೆದಾಡಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದರು ಎನ್ನಲಾಗಿದೆ. ಘಟನೆಯಲ್ಲಿ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಘಟನೆ ಕುರಿತು ಮಾಹಿತಿ ತಿಳಿಯುತ್ತಿದಂತೆ ರೋಣ ಸಿ.ಪಿ.ಐ. ಪಿ.ಎಸ್.ಐ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಸ್ಥಿತಿಯನ್ನು ತಿಳಿಗೊಳಿಸಿದರು.

‘ಅನುಚಿತವಾಗಿ ವರ್ತಿಸಿದರು’
‘ನಮ್ಮ ಗ್ರಾಮ ಪಂಚಾಯಿತಿ ಕಂಪ್ಯೂಟರ್ ನಿರ್ವಾಹಕ ಭೀಮಪ್ಪ ಹಡಪದ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗೆ ಬರದೇ ಇರುವ ತಮ್ಮ ಸಂಬಂಧಿಕರು ಸೇರಿದಂತೆ ಕೆಲವು ಜನರ ಹೆಸರಿನಲ್ಲಿ ಕೂಲಿ ಹಣ ತಗೆದಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ವಿಚಾರಿಸಿದರೆ ಅವಾಚ್ಯ ಶಬ್ದಗಳಿಂದ ಮಾತನಾಡಿ, ನೀವು ಏನು ಕೇಳುವುದಿದ್ದರು ಗ್ರಾ.ಪಂಗೆ ಬನ್ನಿ ಎಂದ ಕಾರಣ ನಮ್ಮ ಗ್ರಾಮದವರು ಕುರಹಟ್ಟಿ ಗ್ರಾ.ಪಂ ಪಂಚಾಯಿತಿಗೆ ಈ ಬಗ್ಗೆ ವಿಚಾರಿಸಲು ಹೋಗಿದ್ದೆವು. ಈ ವೇಳೆ ಅಲ್ಲಿನ ಕೆಲ ಗ್ರಾ.ಪಂ ಸದಸ್ಯರು ಅನುಚಿತವಾಗಿ ವರ್ತಿಸಿದ ಕಾರಣ ಮಾತಿನ ಚಕಮುಕಿ ನಡೆದಿದೆ ಎಂದು ಮುದೇನಗುಡಿ ಗ್ರಾಮದ ಮುಖಂಡರಾದ ಸಂಗನಗೌಡ ಖ್ಯಾತನಗೌಡ್ರ, ಬಸನಗೌಡ ಚೆನ್ನಪ್ಪಗೌಡ್ರ, ಉಮೇಶ ಹಳಪ್ಪನವರ, ಮಲ್ಲಪ್ಪ ಹಂಪ್ಪನವರ ಹೇಳಿದರು.

‘ದೂರು ನೀಡಿದ್ದೇವೆ’
ಗ್ರಾ.ಪಂ ಪಿಡಿಒ ಎಸ್.ಬಿ. ಕಡಬಲಕಟ್ಟಿ ಮಾತನಾಡಿ, ಕೆಲಸಕ್ಕೆ ಬರದವರ ಹೆರಿನಲ್ಲಿ ಕೂಲಿ ಹಣ ತಗೆದಿದ್ದಾರೆ ಎಂದು ಆರೋಪಿಸಿ ಏಕಾಏಕಿ ನೂರಾರು ಜನರು ಬಂದು ಗಲಾಟೆ ಮಾಡಿ ಸದಸ್ಯರ ಖುರ್ಚಿಗಳು ಕಿತ್ತಿ ಎಸೆದಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು