ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಹಂಗಾಮು ಮುಗಿದರೂ ಆರಂಭಗೊಳ್ಳದ ಹೆಸರುಕಾಳು ಖರೀದಿ

ಬೆಂಬಲ ಬೆಲೆ: 2708 ರೈತರು ಹೆಸರು ನೋಂದಣಿ
Last Updated 19 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಗದಗ: ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಹೆಸರುಕಾಳು ಮಾರಾಟ ಮಾಡಲು ಜಿಲ್ಲೆಯ 7 ಖರೀದಿ ಕೇಂದ್ರಗಳಲ್ಲಿ ಶನಿವಾರ ಮಧ್ಯಾಹ್ನದವರೆಗೆ 2708 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಹೆಸರು ನೋಂದಣಿಗೆ ಅ.19 ಕೊನೆಯ ದಿನವಾಗಿತ್ತು.

ಸರ್ಕಾರದ ಆದೇಶದಂತೆ ನೋಂದಣಿ ಅವಧಿಯು ಅ.9ರಂದು ಮುಗಿದಿತ್ತು. ಆದರೆ, ದಸರಾ ಹಬ್ಬ, ರಜಾ ದಿನಗಳ ಹಿನ್ನೆಲೆಯಲ್ಲಿ ಇದನ್ನು ಇನ್ನೂ 10 ದಿನಗಳ ಕಾಲ ವಿಸ್ತರಿಸಲಾಗಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಸರುಕಾಳು ಮಾರಾಟಕ್ಕಾಗಿ ರೈತರ ನೋಂದಣಿ ಜಿಲ್ಲೆಯಲ್ಲಿ ಗಣನೀಯವಾಗಿ ಕುಸಿದಿದೆ. ಕಳೆದ ಸಾಲಿನಲ್ಲಿ 48,846 ರೈತರು ನೋಂದಣಿ ಮಾಡಿಕೊಂಡಿದ್ದರು. ನೋಂದಣಿ ಕಡಿಮೆಯಾಗಲು ಹೆಸರುಕಾಳು ಹಂಗಾಮು ಮುಗಿದಿರುವುದೇ ಪ್ರಮುಖ ಕಾರಣ ಎನ್ನುತ್ತಾರೆ ಬೆಳೆಗಾರರು.

ಜಿಲ್ಲೆಯ ಗದಗ, ರೋಣ, ನರಗುಂದ, ಮುಂಡರಗಿ, ಲಕ್ಷ್ಮೇಶ್ವರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ (ಪಿಎಸಿಎಸ್‌) ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ‘ಎಫ್‌ಎಕ್ಯೂ’ ಗುಣಮಟ್ಟದ ಹೆಸರುಕಾಳನ್ನು ಪ್ರತಿ ಕ್ವಿಂಟಲ್‌ಗೆ ₹7,050 ದರದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಬಾರಿ ಹೆಸರು ಕಟಾವಿನ ಸಮಯದಲ್ಲಿ ನಿರಂತರ ಮಳೆಯಾಗಿತ್ತು. ಹೀಗಾಗಿ ತೇವಾಂಶ ಹೆಚ್ಚಾಗಿ, ಗಿಡದಲ್ಲೇ ಕಾಳುಗಳು ಮೊಳಕೆಯೊಡೆದಿದ್ದವು. ಇದರಿಂದ ಕಾಳುಗಳ ಗುಣಮಟ್ಟ, ಗಾತ್ರ ಕುಸಿದಿದೆ. ಹೊಳಪು ಕಳೆದುಕೊಂಡಿದೆ. ಇಂತಹ ಕಾಳುಗಳು ‘ಎನ್ಇಎಂಎಲ್‌’ ಕಂಪೆನಿ ನಡೆಸುವ ‘ಎಫ್‌ಎಕ್ಯೂ’ ಗುಣಮಟ್ಟ ಪರಿಶೀಲನೆಯಲ್ಲಿ ತೇರ್ಗಡೆಯಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಎಪಿಎಂಸಿ ವರ್ತಕರು.

‘ಖರೀದಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಏಕಕಾಲದಲ್ಲಿ ನಡೆಸಲು ಸಾಧ್ಯವಿದೆ. ಆದರೆ, ಇವೆರಡನ್ನೂ ಪ್ರತ್ಯೇಕವಾಗಿ ಮೊಬೈಲ್‌ ಅಪ್ಲಿಕೇಷನ್‌ ಮೂಲಕವೇ ನಿರ್ವಹಿಸಬೇಕಿದೆ. ಹೀಗಾಗಿ ಮೊದಲು ನೋಂದಣಿ ಮಾಡಿ ನಂತರ ಖರೀದಿ ಮಾಡುತ್ತೇವೆ. ಇದಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಅ.21ರಿಂದ ನ.2ರವರೆಗೆ ಖರೀದಿ ನಡೆಯಲಿದೆ’ ಎಂದು ಸಹಕಾರ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕಡೊಂಕಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರ ಪ್ರತಿ ರೈತರಿಂದ ಗರಿಷ್ಠ 4 ಕ್ವಿಂಟಲ್‌ ಹೆಸರು ಖರೀದಿ ಮಾಡುವುದಾಗಿ ಹೇಳಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ 2708 ರೈತರಿಂದ ತಲಾ 4 ಕ್ವಿಂಟಲ್‌ನಂತೆ ಹೆಸರುಕಾಳು ಖರೀದಿಸಿದರೂ ಒಟ್ಟು ಪ್ರಮಾಣ 11 ಸಾವಿರ ಕ್ವಿಂಟಲ್‌ ದಾಟುವುದಿಲ್ಲ. ‘ಜಿಲ್ಲೆಯಲ್ಲಿ ಈಗಾಗಲೇ ಹೆಸರುಕಾಳಿನ ಹಂಗಾಮು ಮುಗಿದಿರುವುದರಿಂದ ಬೆಂಬಲ ಬೆಲೆಯ ಪ್ರಯೋಜನ ರೈತರಿಗಿಂತ ವರ್ತಕರಿಗೇ ಲಭಿಸುತ್ತದೆ ಎನ್ನುತ್ತಾರೆ’ ಬೆಳೆಗಾರರು.

ಗದಗ ಎಪಿಎಂಸಿ ರಾಜ್ಯದಲ್ಲೇ ಹೆಸರುಕಾಳಿನ ಅಗ್ರ ಮಾರುಕಟ್ಟೆ. ಪ್ರಸಕ್ತ ಹಂಗಾಮಿನಲ್ಲಿ ಇದುವರೆಗೆ 1.19 ಲಕ್ಷ ಕ್ವಿಂಟಲ್‌ ಹೆಸರುಕಾಳು ಗದಗ ಎಪಿಎಂಸಿಗೆ ಆವಕವಾಗಿದೆ. ಶನಿವಾರ ಗದಗ ಎಪಿಎಂಸಿಗೆ 1,206 ಕ್ವಿಂಟಲ್‌ ಹೆಸರು ಆವಕವಾಗಿದ್ದು, ವರ್ತಕರು ರಫ್ತು ಗುಣಮಟ್ಟದ ಹೆಸರು ಕಾಳನ್ನು ಕ್ವಿಂಟಲ್‌ಗೆ ಗರಿಷ್ಠ ₹6,696 ದರ ನೀಡಿ ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT