ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ವಿರುದ್ಧ ವಿರೋಧಿಗಳ ಷಡ್ಯಂತ್ರ ಫಲಿಸದು: ಎಚ್.ಕೆ. ಪಾಟೀಲ

ರಾಜ್ಯಪಾಲರ ನಿರ್ಣಯ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಬೃಹತ್‌ ಪ್ರತಿಭಟನೆ
Published 19 ಆಗಸ್ಟ್ 2024, 16:03 IST
Last Updated 19 ಆಗಸ್ಟ್ 2024, 16:03 IST
ಅಕ್ಷರ ಗಾತ್ರ

ಗದಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಏಳಿಗೆ ಸಹಿಸದೇ ಕೇಂದ್ರ ಸರ್ಕಾರ, ರಾಜ್ಯಪಾಲರು, ಕೇಂದ್ರ ಮಂತ್ರಿಗಳು ಹಾಗೂ ಬಡವರ ಪರ ಕಾರ್ಯಕ್ರಮಗಳ ವಿರೋಧಿಗಳು ಷಡ್ಯಂತ್ರ ರೂಪಿಸಿ, ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅವರ ಪ್ರಯತ್ನ ಫಲಿಸದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಣಯ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಸೋಮವಾರ ನಗರದ ಟಿಪ್ಪು ಸರ್ಕಲ್‌ನಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ಬಡವರ ಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್‌ ಸರ್ಕಾರದ ಏಳಿಗೆ ಸಹಿಸದ ಶಕ್ತಿಗಳು ಸೆಕ್ಷನ್‌ 17ಎ ಹಾಗೂ 218ರ ಪ್ರಕಾರ ರಾಜ್ಯಪಾಲರಿಂದ ಅನುಮತಿ ಕೊಡಿಸುವ ಮೂಲಕ ಸರ್ಕಾರವನ್ನು ಅಭದ್ರಗೊಳಿಸಲು ಮುಂದಾಗಿದ್ದಾರೆ. ರಾಜ್ಯ‍ಪಾಲರು ನೀಡಿರುವ ಆದೇಶ ಸಂವಿಧಾನಬಾಹಿರವಾದುದು. ರಾಜಭವನವನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಂಡು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಶಕ್ತಗೊಳಿಸುವ ಯತ್ನ ನಡೆಸಿದ್ದಾರೆ’ ಎಂದು ಹರಿಹಾಯ್ದರು.

‘ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಅವರು ಈ ಹಿಂದೆಯೇ, ‘ಇನ್ನೂ ಹತ್ತು ದಿನಗಳ ಕಾಲ ತಡೆಯಿರಿ, ಸಿಎಂ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಲಿದ್ದಾರೆ’ ಎಂಬ ಹೇಳಿಕೆ ನೀಡಿದ್ದರು. ಅಂದರೆ, ರಾಜ್ಯಪಾಲರು ಇವರಿಗೆ ಮೊದಲೇ ತಿಳಿಸಿದ್ದರೇ? ಈ ರೀತಿಯ ಷಡ್ಯಂತ್ರವನ್ನು ಕೇಂದ್ರ ಮಂತ್ರಿಗಳು ರೂಪಿಸಿದ್ದಾರೆ. ರಾಜ್ಯಪಾಲರು ಅವರ ಕೈಗೊಂಬೆಯಾಗಿ ಆಟವಾಡುತ್ತಿದ್ದಾರೆ’ ಎಂದು ದೂರಿದರು.

‘ನಮ್ಮ ಸರ್ಕಾರ ರಾಜ್ಯಪಾಲರ ಆದೇಶದ ಮೇಲೆ ನಿಂತಿಲ್ಲ. ಕನ್ನಡಿಗರ ಆಶೀರ್ವಾದದ ಫಲವಾಗಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಏಳು ಕೋಟಿ ಕನ್ನಡಿಗರ ಬಲ ನಮ್ಮ ಮೇಲಿದೆ. ಕನ್ನಡಿಗರ ಆಶಯ ಧಿಕ್ಕರಿಸುವ ನಿಮ್ಮ ನೀತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಹೇಳಿದರು.

ಶಾಸಕ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್‌.ಪಾಟೀಲ ಮಾತನಾಡಿ, ‘ಕಾಂಗ್ರೆಸ್ ಪಕ್ಷ, ಕಾರ್ಯಕರ್ತರು, ಸರ್ಕಾರಕ್ಕೆ ನ್ಯಾಯ ಸಿಗುವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ. ರಾಜ್ಯದಲ್ಲಿ ನಡೆದಿರುವ ಅರಾಜಕತೆಯನ್ನು ಗಮನಿಸಿ, ರಾಜ್ಯಪಾಲರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಹಾಗೂ ರೋಣ ಶಾಸಕ ಜಿ.ಎಸ್‌.ಪಾಟೀಲ ಅವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಹಾಗೂ ರೋಣ ಶಾಸಕ ಜಿ.ಎಸ್‌.ಪಾಟೀಲ ಅವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು
ನಮ್ಮದು ಒಕ್ಕೂಟ ವ್ಯವಸ್ಥೆ. ಇದನ್ನು ಅಶಕ್ತಗೊಳಿಸುವ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆದಿದೆ. ಇದರ ವಿರುದ್ಧ ರಾಜಕೀಯ ಮತ್ತು ಕಾನೂನಾತ್ಮಕ ಹೋರಾಟ ಮಾಡುತ್ತೇವೆ
-ಎಚ್‌.ಕೆ.ಪಾಟೀಲ ಸಚಿವ
ರಾಜ್ಯಪಾಲರ ನಿರ್ಧಾರವು ಕೇಂದ್ರ ಸರ್ಕಾರದ ರಾಜಕೀಯ ಹಿತಾಸಕ್ತಿಗಳಿಂದ ಪ್ರಭಾವಿತವಾಗಿದೆ. ರಾಜಭವನವನ್ನು ಬಿಜೆಪಿ ಜೆಡಿಎಸ್‌ ದುರುಪಯೋಗ ಮಾಡಿಕೊಂಡಿವೆ. ಇದು ಖಂಡನೀಯ
-ಜಿ.ಎಸ್‌.ಪಾಟೀಲ ರೋಣ ಶಾಸಕ

‘ತರಾತುರಿಯಲ್ಲಿ ತನಿಖೆಗೆ ಅನುಮತಿ’

‘ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ಲೋಕಾಯುಕ್ತ ಎಲ್ಲ ವಿಚಾರಣೆ ಮಾಡಿದೆ. ತನಿಖೆ ಪೂರ್ಣಗೊಳಿಸಿ ಪರವಾನಿಗೆ ಕೇಳಿದೆ. ಆದರೆ ಅದನ್ನು ಒಂದು ಮೂಲೆಗೆ ಸರಿಸಿದ್ದಾರೆ’ ಎಂದು ಸಚಿವ ಎಚ್‌.ಕೆ.ಪಾಟೀಲ ಹರಿಹಾಯ್ದರು. ‘ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಬೆಳಿಗ್ಗೆ ದೂರು ನೀಡಿದ ತಕ್ಷಣ ಸಂಜೆ ವೇಳೆಗೆ ರಾಜ್ಯಪಾಲರು ನೋಟಿಸ್‌ ನೀಡುತ್ತಾರೆ. ಅಲ್ಲದೆ ಈ ಪ್ರಕರಣದಲ್ಲಿ ತನಿಖೆ ಆಗಿಲ್ಲ. ತನಿಖೆ ಮಾಡಲು ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ. ಅವರು ಈಗಷ್ಟೇ ಕೆಲಸ ಶುರು ಮಾಡಿದ್ದಾರೆ. ರಾಜ್ಯಪಾಲರು ವರದಿ ಬರುವವರೆಗೆ ತಡೆಯಲಿಲ್ಲ ಅಥವಾ ಪೂರ್ವಭಾವಿ ತನಿಖಾ ವರದಿಯನ್ನೂ ಕೇಳಲಿಲ್ಲ. ತರಾತುರಿಯಲ್ಲಿ ತನಿಖೆಗೆ ಅನುಮತಿ ನೀಡಿದರು. ಇದು ಸರಿಯಲ್ಲ’ ಎಂದು ಹೇಳಿದರು. ‘ಸಂವಿಧಾನಾತ್ಮಕ ವ್ಯವಸ್ಥೆಯ ಮುಖ್ಯಸ್ಥರು ಈ ರೀತಿ ಮಾಡಿದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT