ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ಮತದಾನಕ್ಕೆ ಬಿರುಬಿಸಿಲು, ಉಷ್ಣ ಅಲೆಯ ಸವಾಲು

ಮತದಾನ ಮಾಡುವಂತೆ ಮನವಿ; ಸಿಬ್ಬಂದಿಗೆ ಆರೋಗ್ಯ ತಪಾಸಣೆ
Published 6 ಮೇ 2024, 15:48 IST
Last Updated 6 ಮೇ 2024, 15:48 IST
ಅಕ್ಷರ ಗಾತ್ರ

ಗದಗ: ಲೋಕಸಭಾ ಚುನಾವಣಾ ಪ್ರಚಾರದ ಕಾವು ಇಳಿದಿದೆ. ಆದರೆ, ಬಿಸಿಲು ಮತ್ತು ಉಷ್ಟ ಅಲೆಯ ಬಿಸುಪು ಮಾತ್ರ ಭಯಂಕರ ಹೆಚ್ಚಾಗಿದೆ. ಮೇ 7ರಂದು ಮತದಾನ ನಡೆಯಲಿದ್ದು, ಬಿರುಬಿಸಿಲು ಮತದಾನದ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಮತದಾರರು ಬೆಳಿಗ್ಗೆ 7ರಿಂದ 10 ಗಂಟೆಯೊಳಗೆ ಮತದಾನ ಮಾಡುವಂತೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಮುಖಂಡರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಭೀಕರ ಬರಗಾಲದಿಂದಾಗಿ ನದಿ ಕೆರೆಗಳು ಬತ್ತಿದ್ದು, ಕೊಳವೆಬಾವಿಗಳಲ್ಲೂ ನೀರಿಲ್ಲದಂತಾಗಿದೆ. ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದೇವೇಳೆ, ಕಳೆದ 10 ವರ್ಷಗಳ ಅವಧಿಯಲ್ಲಿ ಕಾಣದಂತಹ ಬಿರುಬಿಸಿಲು ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ.

ಮೇ ಆರಂಭದಿಂದಲೂ 42 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿದೆ. ರಸ್ತೆಗೆ ಕಾಲಿಟ್ಟರೆ ಬಿಸಿಗಾಳಿ ಮುಖ ಹಾಗೂ ಕಣ್ಣಿಗೆ ರಾಚುತ್ತಿದೆ. ಉಷ್ಣ ಅಲೆಗಳು ರಸ್ತೆಗಿಳಿಯುವ ಪಾದಚಾರಿಗಳು ಮತ್ತು ಬೈಕ್‌ ಸವಾರರನ್ನು ನಿಶ್ಶಕ್ತಗೊಳಿಸುತ್ತಿದೆ. ಈ ಕಾರಣದಿಂದಾಗಿ ಜನರು ಹೊರಗೆ ಅಡ್ಡಾಡುವುದನ್ನೇ ಕಡಿಮೆ ಮಾಡಿದ್ದಾರೆ. ಅನಿವಾರ್ಯ ಸಂದರ್ಭಗಳಲ್ಲಷ್ಟೇ ಕೊಡೆ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈ ಪರಿಸ್ಥಿತಿ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

‘ಜಿಲ್ಲೆಯಲ್ಲಿನ ಎಲ್ಲ ಮತಗಟ್ಟೆಗಳಿಗೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಜತೆಗೆ ಮತದಾರರು ಸರತಿಯಲ್ಲಿ ನಿಂತು ಮತದಾನ ಮಾಡಲು ಕಾರಿಡಾರ್‌ಗಳು ಇಲ್ಲದ ಕಡೆಗಳಲ್ಲಿ ಶಾಮಿಯಾನ ಹಾಕಿಸಲು ಕ್ರಮವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ತಿಳಿಸಿದ್ದಾರೆ.

ಉಷ್ಣ ಅಲೆ ಭೀತಿ ಚುನಾವಣಾ ಸಿಬ್ಬಂದಿಯನ್ನೂ ಕಾಡಿದೆ. ಇದೇ ಕಾರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೋಮವಾರ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಬಿಪಿ, ಶುಗರ್‌ ಪರೀಕ್ಷೆ ನಡೆಸಿದ ವೈದ್ಯರು, ಅವರಿಗೆ ಅಗತ್ಯದ ಸೂಚನೆ ನೀಡಿದರು.

‘ಉಷ್ಣ ಅಲೆ ಮುಂದುವರಿದಿರುವುದರಿಂದ ಮತದಾನ ಪ್ರಕ್ರಿಯೆ ಮೇಲೆ ಪರಿಣಾಮ ಬೀರದಂತೆ ಜಿಲ್ಲಾಡಳಿತ ಕ್ರಮವಹಿಸಿದೆ. ಎಲ್ಲ ಬೂತ್‌ಗಳಿಗೂ ಮೆಡಿಕಲ್‌ ಕಿಟ್‌ ಪೂರೈಸಲಾಗಿದೆ. ಇದರಲ್ಲಿ ಜ್ವರದ ಗುಳಿಗೆ, ಪೇನ್‌ ಕಿಲ್ಲರ್‌, ಆ್ಯಸಿಡಿಟಿ ಮಾತ್ರೆ, ಒಆರ್‌ಎಸ್‌ ಪುಡಿ, ಎದೆನೋವಿನ ಮಾತ್ರೆಗಳು, ಬ್ಯಾಂಡೇಜ್‌, ಆಯಿಂಟ್‌ಮೆಂಟ್‌, ಪ್ರಥಮ ಚಿಕಿತ್ಸೆಗೆ ಬೇಕಿರುವ ಸಾಮಗ್ರಿಗಳನ್ನು ಒಳಗೊಂಡಿದೆ’ ಎಂದು ಡಿಎಚ್‌ಒ ಡಾ. ಎಸ್‌.ಎಸ್‌.ನೀಲಗುಂದ ತಿಳಿಸಿದ್ದಾರೆ.

‘ಮತ ಚಲಾಯಿಸಲು ಬರುವ ಮತದಾರರಿಗೆ ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಬೂತ್‌ನಲ್ಲಿ ಆಶಾಕಾರ್ಯಕರ್ತೆಯರು, ನರ್ಸ್‌ಗಳು ಇರುತ್ತಾರೆ. ಸಮೀಪದಲ್ಲಿರುವ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸ್ಥಳದಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಬಿಸಿಲಿನ ಝಳ ಜೋರಾಗಿರುವುದರಿಂದ ಮತದಾರರು ಆದಷ್ಟು ಬೆಳಿಗ್ಗೆಯೇ ಹೋಗಿ ಮತದಾನ ಮಾಡಿದರೆ ಒಳಿತು’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT