ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ: ಮರಳು ಅಕ್ರಮ ದಂಧೆ ಅವ್ಯಾಹತ

ಮರಳಿಗಾಗಿ ನಿಯಮ ಮೀರಿ ಭೂಮಿ ಅಗೆತ: ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಸ್ಥಳೀಯರ ಕಿಡಿ
ನಿಂಗಪ್ಪ ಹಮ್ಮಿಗಿ
Published 10 ಜೂನ್ 2024, 5:45 IST
Last Updated 10 ಜೂನ್ 2024, 5:45 IST
ಅಕ್ಷರ ಗಾತ್ರ

ಶಿರಹಟ್ಟಿ: ಕಟ್ಟಡ ನಿರ್ಮಾಣ ಹಾಗೂ ವಿವಿಧ ಬಗೆಯ ನಿರ್ಮಾಣ ಕಾಮಗಾರಿಗಳು ಹೆಚ್ಚಾದಂತೆ ಮರಳು, ಕಲ್ಲಿನ ಬೇಡಿಕೆಯೂ ಹೆಚ್ಚುತ್ತದೆ. ಮರಳು ಸಂಗ್ರಹಕ್ಕಾಗಿ ನಿರ್ದಿಷ್ಟ ಸ್ಥಳಗಳಿರುತ್ತವೆ. ಸುಮ್ಮನೆ ನದಿ, ಕೆರೆ ಭಾಗಗಳಿಂದ ಎಲ್ಲೆಂದರಲ್ಲಿ ಮರಳು ಎತ್ತುವಂತಿಲ್ಲ. ಅದರೆ, ತಾಲ್ಲೂಕಿನಲ್ಲಿ ನಿಯಮಗಳನ್ನು ಮೀರುವುದು ದುಷ್ಟರಿಗೆ ಚಿಟಿಕೆ ಹೊಡೆದಷ್ಟೇ ಸುಲಭವಾಗಿದ್ದು, ಅಕ್ರಮ ಮರಳು ದಂಧೆಯನ್ನು ಅವ್ಯಾಹತವಾಗಿ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರೂ ಪ್ರಾಕೃತಿಕ ಸಂಪತ್ತು ಹೇರಳವಾಗಿರುವ ತಾಲ್ಲೂಕಿನ ಮೇಲೆಯೇ ಬಂಡವಾಳಶಾಹಿಗಳ ಕಣ್ಣುಬಿದ್ದಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ; ಅಧಿಕಾರಿಗಳ ನೆರಳಲ್ಲಿ ನಿತ್ಯ ಮರಳು ಸಾಗಿಸುತ್ತಿದ್ದು, ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ ಎಂದು ಪರಿಸರವಾದಿಗಳು ಆರೋಪ ಮಾಡಿದ್ದಾರೆ.

ಅತಿ ಹೆಚ್ವು ಪಾಯಿಂಟ್: ಗದಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮರಳಿನ ಪಾಯಿಂಟ್‌ಗಳು ಇರುವುದು ಶಿರಹಟ್ಟಿ ತಾಲ್ಲೂಕಿನಲ್ಲಿ. ಇಟಗಿ, ತೊಳಗಿ, ಸಾಸಲವಾಡ, ಗೋವನಕೊಪ್ಪ, ಅಂಕಲಿ, ಬೂದಿಹಾಳ, ಬಸಾಪುರ, ನಾಗರಮಡವು ಗ್ರಾಮದ ಸರ್ಕಾರಿ ಹಾಗೂ ಪಟ್ಟಾ ಭೂಮಿಯಲ್ಲಿ ಒಟ್ಟು 16 ಮರಳು ಗುತ್ತಿಗೆದಾರರಿಗೆ ಪರವಾನಗಿ ನೀಡಲಾಗಿದೆ. ಇದರಲ್ಲಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ 10 ಸಂಸ್ಥೆಯ ಪರವಾನಗಿ ಮುಗಿದಿದ್ದು, 6 ಚಾಲ್ತಿಯಲ್ಲಿವೆ. ಇದು ಕೇವಲ ಹೆಸರಿಗೆ ಮಾತ್ರ ಆಗಿದ್ದು, ಇಲ್ಲಿ ಅಕ್ರಮವಾಗಿ ಮರಳು ಅಗೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಾರೆ.

ಇದನ್ನು ಹೊರತುಪಡಿಸಿ ಹಳ್ಳ–ಕೊಳ್ಳ, ನದಿಪಾತ್ರದ ಜಮೀನು ಹಾಗೂ ಹಳ್ಳಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಲೆಕ್ಕವೇ ಇಲ್ಲದಂತಾಗಿದೆ ಎಂದು ಸ್ಥಳೀಯರು ದಂಧೆಯ ವಿಸ್ತಾರ ಮತ್ತು ಸ್ವರೂಪವನ್ನು ಬಿಚ್ಚಿಡುತ್ತಾರೆ.

ಸರ್ಕಾರದ ನಿಯಮ ಉಲ್ಲಂಘನೆ: ಮರಳು ಗುತ್ತಿಗೆ ಪಡೆದ ಒಂದು ಸಂಸ್ಥೆಗೆ 5 ವರ್ಷಗಳ ಅವಧಿಗೆ ಪರವಾನಗಿ ನೀಡಬೇಕಾದರೆ ವರ್ಷಕ್ಕೆ ಇಂತಿಷ್ಟು ಮೆಟ್ರಿಕ್ ಟನ್ ಮರಳು ತೆಗೆಯಬೇಕೆಂಬ ನಿಯಮ ಇರುತ್ತದೆ. ಅಲ್ಲದೇ ಪ್ರತಿ ಪಾಯಿಂಟ್‌ನಿಂದ ಲೋಡ್ ಆಗುವ ಟಿಪ್ಪರ್ ಅಥವಾ ಟ್ರ್ಯಾಕ್ಟರ್‌ಗಳಿಗೆ ಕಡ್ಡಾಯವಾಗಿ ಪರವಾನಗಿಯ ಪಾಸ್ ನೀಡಬೇಕು. ಅದು ಇಂತಿಷ್ಟು ಕಾಲಾವಧಿಗೆ ಮಾತ್ರ ಎಂದಿರುತ್ತದೆ. ತಾಲ್ಲೂಕಿನಲ್ಲಿ ಬಹುತೇಕ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಮರಳು ಮಾರಾಟವನ್ನು ದಂಧೆಯಾಗಿ ಮಾರ್ಪಡಿಸಲಾಗಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಾರೆ.

ಮರಳಿನ ಅಗೆತ ದುಪ್ಪಟ್ಟು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಸರ್ಕಾರ ಒಂದು ಪಾಯಿಂಟ್‌ನಲ್ಲಿ ವರ್ಷಕ್ಕೆ ಇಂತಿಷ್ಟು ಮೆಟ್ರಿಕ್ ಟನ್ ಎಂದು ಮರಳು ತೆಗೆಯಲು ನಿಯಮ ವಿಧಿಸಲಾಗಿದೆ. ಆದರೆ, ಅದನ್ನು ಲೆಕ್ಕಿಸದ ಗುತ್ತಿಗೆದಾರರು ಸಾಕಷ್ಟು ಮರಳು ತೆಗೆಯುವುದಲ್ಲದೆ ಮರಳು ಎತ್ತಲು ತೆಪ್ಪವನ್ನು ಸಹ ಬಳಸುತ್ತಿದ್ದಾರೆ. ಸದ್ಯ ಮಳೆ ಪ್ರಾರಂಭವಾಗಿದ್ದು, ಈಗಾಗಲೇ ಸಾಕಷ್ಟು ಮರಳು ಸಂಗ್ರಹಿಸಿದ್ದಾರೆ. ಅಲ್ಲದೇ ಇನ್ನೂ ಬೇಡಿಕೆ ಹೆಚ್ಚಾದಂತೆಲ್ಲ ನೀರು ಇದ್ದರೂ ತೆಪ್ಪದ ಮೂಲಕ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಮುಂದುವರಿಸಿದ್ದಾರೆ.

ಈ ದಂಧೆಯಲ್ಲಿ ಎಲ್ಲರೂ ಶಾಮೀಲು–ಆರೋಪ: ‘ರಾಜಕಾರಣಿಗಳು, ಅಧಿಕಾರಿಗಳಷ್ಟೇ ಅಲ್ಲದೆ ಲಾರಿ ಚಾಲಕನಿಂದ ಹಿಡಿದು ಎಲ್ಲರೂ ಈ ದಂಧೆಯಲ್ಲಿ ನಿತ್ಯ ಲಾಭದೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಸರಪಳಿಯಂತೆ ಸಾಗುವ ಈ ಜಾಲದಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಲಾಗುತ್ತದೆ. ಸಮಯ ಹಾಗೂ ದುಡ್ಡು ಉಳಿಸಲು ಸುಲಭವಾಗಿ ಸಿಗುವ ತಾಣದಲ್ಲಿ ಅಕ್ರಮ ಮರಳು ದಂಧೆ ನಡೆಸುವ ದಂಧೆಕೋರರು ಬೇಡಿಕೆ ಹೆಚ್ಚಾದಂತೆ ಮರಳಿಗೆ ಕಲಬೆರೆಕೆ ಮಾಡುತ್ತಾರೆ’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪಾಸ್‌ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಟ್ರ್ಯಾಕ್ಟರ್
ಪಾಸ್‌ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಟ್ರ್ಯಾಕ್ಟರ್

ಕಾರ್ಯನಿರ್ವಹಿಸದ ಟಾಸ್ಕ್‌ಫೋರ್ಸ್‌: ‘ಅಕ್ರಮ ಮರಳು ದಂಧೆ ಕಡಿವಾಣಕ್ಕೆ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸದಸ್ಯತ್ವದೊಂದಿಗೆ ಕಮಿಟಿ ರಚಿಸಲಾಗಿದ್ದು, ಯಾರೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸುವುದಿಲ್ಲ. ಇದರಿಂದ ಅವ್ಯಾಹತವಾಗಿ ಮರಳು ಮಾಫಿಯಾದ ಜಾಡು ಹೆಚ್ಚುತ್ತಲೇ ಇದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು’ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ವೈಶಾಲಿ ಎಂ.ಎಲ್
ವೈಶಾಲಿ ಎಂ.ಎಲ್
ಸರ್ಕಾರದ ನಿಯಮ ಮೀರಿ ಮರಳು ತೆಗೆಯುವ ಗುತ್ತಿಗೆದಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು
ವೈಶಾಲಿ ಎಂ.ಎಲ್. ಜಿಲ್ಲಾಧಿಕಾರಿ
ಬಿ.ಎಸ್‌.ನೇಮಗೌಡ
ಬಿ.ಎಸ್‌.ನೇಮಗೌಡ
ಅಕ್ರಮವಾಗಿ ಮರಳು ಸಾಗಿಸುವ ಗಾಡಿಗಳ ಮಾಹಿತಿ ದೊರೆತರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು
ಬಿ.ಎಸ್‌. ನೇಮಗೌಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಸಂತೋಷ ಕುರಿ
ಸಂತೋಷ ಕುರಿ
ನಿಗದಿ ಮಾಡಿದ ಸ್ಥಳಗಳಲ್ಲಿ ಮರಳು ತುಂಬದೆ ಹಣದ ಆಸೆಗಾಗಿ ಅಕ್ರಮವಾಗಿ ಬೇರೆಡೆ ತುಂಬುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ
ಸಂತೋಷ ಕುರಿ ಎಐಸಿಸಿ ಮಾನವ ಹಕ್ಕುಗಳ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಕಾಶ ಕಲ್ಯಾಣಿ
ಪ್ರಕಾಶ ಕಲ್ಯಾಣಿ
ಮರಳಿಗಾಗಿ ಹಳ್ಳಗಳಲ್ಲಿ ತೆಗ್ಗು ತೋಡುತ್ತಿರುವುದರಿಂದ ಮಳೆಯ ನೀರು ರೈತರ ಜಮೀನಿಗೆ ನುಗ್ಗಿ ಮಣ್ಣು ಕೊಚ್ಚಿ ಹೋಗುತ್ತಿದೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಹೋರಾಟ ಕೈಗೊಳ್ಳಲಾಗುವುದು
ಪ್ರಕಾಶ ಕಲ್ಯಾಣಿ ಜಿಲ್ಲಾ ರೈತ ಸಂಘದ ಅಧ್ಯಕ್ಷ
ಮಾಫಿಯಾ ಬೃಹತ್ ಆಗಿ ಬೆಳೆದಿದ್ದು ಹೇಗೆ?
ಮರಳು ಮಾರಾಟ ಉದ್ಯಮದಲ್ಲಿ ಬಂಡವಾಳ ಕಡಿಮೆ; ಆದಾಯ ಅಧಿಕ. ಒಂದು ಲಾರಿ ಲೋಡ್ ಮರಳು ಪಾಸ್ ಇಲ್ಲದೆ ₹17 ಸಾವಿರದಿಂದ ₹20 ಸಾವಿರಕ್ಕೆ ಹಾಕಿರುತ್ತಾರೆ. ಪಾಸ್ ಇದ್ದರೆ ಸುಮಾರು ₹30 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಮರಳಿನ ಬೆಲೆ ದುಪ್ಪಟ್ಟಾಗಿರುತ್ತದೆ. ಪಾಸ್ ಇಲ್ಲದೇ ಹೆಚ್ಚು ವಾಹನಗಳಲ್ಲಿ ಮರಳು ಸಾಗಣೆ ನಡೆಯುತ್ತಿದೆ. ಪಾಯಿಂಟ್‌ನಲ್ಲಿ ಪಾಸ್ ಪಡೆದರೆ ಗುತ್ತಿಗೆ ಪಡೆದ ಸಂಸ್ಥೆಯು ರಾಜಧನದ ರೂಪದಲ್ಲಿ ನಿಗದಿತ ಮೊತ್ತವನ್ನು ಸರ್ಕಾರಕ್ಕೆ ಕಟ್ಟಬೇಕು. ಇಲ್ಲಿ ಅಕ್ರಮವು ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಯಾವುದೇ ರಾಜಧನವನ್ನು ಸರ್ಕಾರಕ್ಕೆ ಕಟ್ಟದೇ; ಅದನ್ನೇ ಸಂಬಂಧಪಟ್ಟ ಇಲಾಖೆಗಳಿಗೆ ತಿಂಗಳಿಗೆ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT