ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಜೇಂದ್ರಗಡ: ವೀರಾಪುರದಲ್ಲಿ ಸ್ವಚ್ಛತೆ ಮರೀಚಿಕೆ

ಹೂಳು ತುಂಬಿದ ಚರಂಡಿಗಳು: ಸಿಸಿ ರಸ್ತೆ ನಿರ್ಮಾಣ ಇಲ್ಲ
Published 29 ನವೆಂಬರ್ 2023, 4:41 IST
Last Updated 29 ನವೆಂಬರ್ 2023, 4:41 IST
ಅಕ್ಷರ ಗಾತ್ರ

ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೀರಾಪುರದಲ್ಲಿನ ಮುಖ್ಯ ಚರಂಡಿಗಳು ಹಾಗೂ ಓಣಿಯಲ್ಲಿನ ಸಣ್ಣ ಸಣ್ಣ ಚರಂಡಿಗಳಲ್ಲಿಯೂ ಹೂಳು ತುಂಬಿಕೊಂಡಿದೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಕಸದ ರಾಶಿಯಿಂದ ಕೂಡಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ.

ಪಟ್ಟಣದಿಂದ ಗ್ರಾಮಕ್ಕೆ ಹಾಗೂ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಜನರು ಕಸ ಹಾಗೂ ತಿಪ್ಪೆಗೆ ತ್ಯಾಜ್ಯ ಹಾಕುವುದರ ಜೊತೆಗೆ ಶೌಚಕ್ಕೆ ಬಳಸುವುದರಿಂದ ಸ್ವಚ್ಛತೆ ಇಲ್ಲದಂತಾಗಿದೆ. ರಸ್ತೆ ಪಕ್ಕದಲ್ಲಿ ಜಾಲಿ ಕಂಟಿಗಳು ಬೆಳೆದು ನಿಂತಿವೆ. ಗ್ರಾಮದ ಮುಖ್ಯ ಚರಂಡಿಗಳು ಹೂಳು ತುಂಬಿಕೊಂಡು ಕಸ ಬೆಳೆದಿದೆ. ಗ್ರಾಮದ ಪ್ರಾಥಮಿಕ ಶಾಲೆಯ ಮುಂದೆ ಹಾಗೂ ಹಿಂದಿನ ಚರಂಡಿಗಳಲ್ಲಿಯೂ ಹೂಳು ತುಂಬಿ ಆಪು ಬೆಳೆದಿದೆ. ಗ್ರಾಮದ ಓಣಿಗಳಲ್ಲಿ ಜನರು ಕಸ ಹಾಗೂ ಇನ್ನಿತರ ತ್ಯಾಜ್ಯವನ್ನು ರಸ್ತೆಗೆ ಎಸೆಯುತ್ತಿರುವುದರಿಂದ ಅಲ್ಲಲ್ಲಿ ತ್ಯಾಜ್ಯ ಶೇಖರಣೆಯಾಗಿ ಚರಂಡಿ ಕಟ್ಟಿಕೊಂಡಿರುವುದು ಸಾಮಾನ್ಯವಾಗಿದೆ.

ಗ್ರಾಮದ ಕೆಲ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿಲ್ಲ. ಇನ್ನೂ ಕೆಲ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಸಿಸಿ ರಸ್ತೆ ಕಾಣಿಸದಂತೆ ರಸ್ತೆ ಮೇಲೆ ಮಣ್ಣು ಶೇಖರಣೆಯಾಗಿದೆ. ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯಿಂದ ಹಾಳಾಗಿರುವ ಸಿಸಿ ರಸ್ತೆ ದುರಸ್ತಿ ಮಾಡಲಾಗಿದೆ. ಆದರೆ ಸರಿಯಾಗಿ ಕಾಮಗಾರಿ ಮಾಡದ ಹಿನ್ನೆಲೆಯಲ್ಲಿ ಸಿಮೆಂಟ್‌ ಕಿತ್ತು ಹೋಗಿದೆ. ಅಲ್ಲದೆ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಂದ್‌ ಆಗಿದ್ದು, ಘಟಕ ಹಾಗೂ ಉಪಕರಣಗಳು ತುಕ್ಕು ಹಿಡಿಯುವ ಸ್ಥಿತಿಯಲ್ಲಿವೆ.

‘ಗ್ರಾಮದಲ್ಲಿನ ಪಂಚಾಯ್ತಿ ಸದಸ್ಯರು ಚುನಾವಣೆ ಮುಗಿದ ನಂತರ ಜನರ ಪಾಲಿಗೆ ಇಲ್ಲದಂತಾಗಿದ್ದಾರೆ. ಸಾಧ್ಯವಾದರೆ ನಮ್ಮ ಮನೆ ಮುಂದೆ ನಾವೇ ಸ್ವಚ್ಛ ಮಾಡಿಕೊಳ್ಳುತ್ತೇವೆ. ಏನಾದರು ಕೇಳಿದರೆ ನಮ್ಮನ್ನು ಬೇರೆ ಬೇರೆ ವಿಷಯಗಳಲ್ಲಿ ಗುರಿ ಮಾಡುತ್ತಾರೆʼ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರೊಬ್ಬರು ಹೇಳಿದರು.

ಗಜೇಂದ್ರಗಡ ಸಮೀಪದ ವೀರಾಪುರದಲ್ಲಿನ ಓಣಿಯಲ್ಲಿ ಸಿಸಿ ರಸ್ತೆ ಮೇಲೆ ಹೂಳು ತುಂಬಿ ರಸ್ತೆ ಮೇಲೆ  ಚರಂಡಿ ನೀರು ಹರಿಯುತ್ತಿದೆ
ಗಜೇಂದ್ರಗಡ ಸಮೀಪದ ವೀರಾಪುರದಲ್ಲಿನ ಓಣಿಯಲ್ಲಿ ಸಿಸಿ ರಸ್ತೆ ಮೇಲೆ ಹೂಳು ತುಂಬಿ ರಸ್ತೆ ಮೇಲೆ  ಚರಂಡಿ ನೀರು ಹರಿಯುತ್ತಿದೆ
ಗಜೇಂದ್ರಗಡ ಸಮೀಪದ ವೀರಾಪುರದಲ್ಲಿನ ಮುಖ್ಯ ಚರಂಡಿಯಲ್ಲಿ ಹೂಳು ತುಂಬಿ ಕಸ ಬೆಳೆದಿದೆ
ಗಜೇಂದ್ರಗಡ ಸಮೀಪದ ವೀರಾಪುರದಲ್ಲಿನ ಮುಖ್ಯ ಚರಂಡಿಯಲ್ಲಿ ಹೂಳು ತುಂಬಿ ಕಸ ಬೆಳೆದಿದೆ
ಮುತ್ತವ್ವ ಗುಡದೂರ
ಮುತ್ತವ್ವ ಗುಡದೂರ

ಗ್ರಾಮದಲ್ಲಿ ಈಗಾಗಲೇ ಸ್ವಚ್ಛ ಮಾಡಿಸಲಾಗಿದೆ. ಮುಖ್ಯ ಚರಂಡಿಗಳ ಸ್ವಚ್ಛತೆಗೆ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಗ್ರಾಮದ ಸ್ವಚ್ಛತೆಗೆ ಗ್ರಾಮಸ್ಥರೂ ಸಹಕಾರ ನೀಡಬೇಕು

–ಮುತ್ತವ್ವ ಗುಡದೂರ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ವೀರಾಪುರ

ಶ್ರಾವಣದಲ್ಲಿ ನಡೆದ ಜಾತ್ರೆ ಸಮಯದಲ್ಲಿ ಗ್ರಾಮದ ಎಲ್ಲ ಓಣಿಗಳಲ್ಲಿ ಸ್ವಚ್ಛತೆ ಮಾಡಿಸಲಾಗಿದೆ. ಮುಖ್ಯ ಚರಂಡಿಗಳಲ್ಲಿ ಹೂಳು ತುಂಬಿ ಗಿಡ-ಗಂಟಿಗಳು ಬೆಳೆದಿರುವುದರಿಂದ ಜೆಸಿಬಿ ಬಳಸಿ ಶೀಘ್ರದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತೇನೆ

–ಶರಣಪ್ಪ ಕಡಬಲಕಟ್ಟಿ ಪಿಡಿಒ ರಾಮಾಪುರ

ಗ್ರಾಮಕ್ಕಿಲ್ಲ ಬಸ್‌ ಸಂಚಾರ

ಗಜೇಂದ್ರಗಡದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ವೀರಾಪುರದಲ್ಲಿ ಸುಮಾರು 140 ಮನೆಗಳಿವೆ. ಆದರೆ ಗ್ರಾಮಕ್ಕೆ ಬಸ್‌ ಸೌಲಭ್ಯವಿಲ್ಲದ ಕಾರಣ ಗ್ರಾಮದ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಪ್ರತಿದಿನ ಗಜೇಂದ್ರಗಡ-ಗದಗ ಮುಖ್ಯ ರಸ್ತೆ ವರೆಗೆ ನಡೆದುಕೊಂಡು ಅಥವಾ ಖಾಸಗಿ ವಾಹನಗಳಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT