ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಬಿಂಕದಕಟ್ಟಿ ಮೃಗಾಲಯಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ

Published 22 ಜುಲೈ 2023, 3:27 IST
Last Updated 22 ಜುಲೈ 2023, 3:27 IST
ಅಕ್ಷರ ಗಾತ್ರ

ಕೆ.ಎಂ.ಸತೀಶ್‌ ಬೆಳ್ಳಕ್ಕಿ

ಗದಗ: ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯ ಲಾಭವು ಮಹಿಳೆಯರಿಗೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಅಷ್ಟೇ ಅಲ್ಲ, ಗದಗ ತಾಲ್ಲೂಕಿನ ಬಿಂಕದಕಟ್ಟಿ ಮೃಗಾಲಯಕ್ಕೂ ಆದಾಯ ಬರುತ್ತಿದೆ. ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಈ ಮೃಗಾಲಯಕ್ಕೆ ನಾಲ್ಕು ತಿಂಗಳಲ್ಲಿ 75 ಸಾವಿರ ಜನರು ಭೇಟಿ ನೀಡಿದ್ದಾರೆ.

‘2022–23ನೇ ಸಾಲಿನಲ್ಲಿ 1,69,869 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಚಿಣ್ಣರ ವನ ದರ್ಶನ ಮತ್ತು ಶೈಕ್ಷಣಿಕ ‌ಪ್ರವಾಸದ ಭಾಗವಾಗಿ 80 ಶಾಲೆಗಳ ಮಕ್ಕಳು ಭೇಟಿ ನೀಡಿದ್ದಾರೆ. 2023–24ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಜುಲೈ 15ರವರೆಗೆ 75 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಹೀಗೆ ಮುಂದುವರಿದರೆ, ಪ್ರಸಕ್ತ ವರ್ಷ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ 2 ಲಕ್ಷ ದಾಟುವ ಸಾಧ್ಯತೆ ಇದೆ’ ಎಂದು ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ ತಿಳಿಸಿದರು.

‘ಮೃಗಾಲಯಕ್ಕೆ ಈ ಮೊದಲು ಗದಗ, ಧಾರವಾಡ ಹಾಗೂ ಕೊಪ್ಪಳ ಜಿಲ್ಲೆಗಳ ಜನರಷ್ಟೇ ಬರುತ್ತಿದ್ದರು. ಶಕ್ತಿ ಯೋಜನೆ ಜಾರಿ ಬಳಿಕ ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಮಹಿಳೆಯರ ಜತೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ’ ಎಂದು ಮೃಗಾಲಯದ ಸಿಬ್ಬಂದಿ ನಿಖಿಲ್‌ ಕುಲಕರ್ಣಿ ತಿಳಿಸಿದರು.

‘ಡಿಸೆಂಬರ್‌ ಮತ್ತು ಜನವರಿ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಬನ್ನೇರುಘಟ್ಟ, ಮೈಸೂರು, ಶಿವಮೊಗ್ಗ ಮತ್ತು ಹಂಪಿ ಮೃಗಾಲಯಗಳು ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿವೆ. ಅವು ಹೊರತುಪಡಿಸಿದರೆ ಗದಗ ಮತ್ತು ಬೆಳಗಾವಿ ಮೃಗಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ’ ಎಂದರು.

ಪ್ರವೇಶ ಶುಲ್ಕ ಹಿರಿಯರಿಗೆ ₹50 ಮತ್ತು ಮಕ್ಕಳಿಗೆ ₹30 ಇದೆ. ಸಫಾರಿ ಸೌಲಭ್ಯ ಹೊರತುಪಡಿಸಿ ಮೃಗಾಲಯದಿಂದಲೇ ಆದಾಯ ಪಡೆಯುವ ಮೃಗಾಲಯಗಳ ಪೈಕಿ ಗದಗ ಕೂಡ ಮುಂಚೂಣಿಯಲ್ಲಿದೆ. 40 ಎಕರೆ ವ್ಯಾಪ್ತಿಯಲ್ಲಿರುವ ಈ ಮೃಗಾಲಯದಲ್ಲಿ ಚಿರತೆ, ಹುಲಿ, ಸಿಂಹ, ತೋಳ, ನರಿ, ಜಿಂಕೆಗಳಿವೆ’ ಎಂದರು.

ಮೃಗಾಲಯದ ಸುವರ್ಣ ಮಹೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜಿಸುವುದರ ಜೊತೆಗೆ ಪ್ರಾಣಿ, ಪಕ್ಷಿಗಳ ಕುರಿತ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಮೃಗಾಲಯದ ಸಿಬ್ಬಂದಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT