ಭಾನುವಾರ, ಡಿಸೆಂಬರ್ 4, 2022
19 °C
ಅಮೃತ ಸರೋವರ ಯೋಜನೆ: 75 ಕೆರಗಳ ಅಭಿವೃದ್ಧಿ ಗುರಿ

ಗದಗ: ಕೆರೆ ಅಂಗಳದಲ್ಲಿ ಅಮೃತದ ಹೊನಲು

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಅಮೃತ ಸರೋವರ’ ಯೋಜನೆ ಅಡಿ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳ ಅಭಿವೃದ್ಧಿಗೆ ಗುರಿ ನೀಡಲಾಗಿದೆ. ಈ ಯೋಜನೆ ಅನ್ವಯ ಜಿಲ್ಲೆಯಲ್ಲಿ ಈವರೆಗೆ 15 ಕೆರೆಗಳ ಅಭಿವೃದ್ಧಿಯಾಗಿದೆ. ಜಿಲ್ಲೆಯ ವಿವಿಧೆಡೆ ಅಭಿವೃದ್ಧಿ ಪಡಿಸಲಾಗಿರುವ 15 ಕೆರೆಗಳ ಅಂಗಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜ ಹಾರಲಿದೆ.

ಏಪ್ರಿಲ್‌ 23ರಂದು ನಡೆದ ಪಂಚಾಯತ್‌ ರಾಜ್‌ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಅಮೃತ ಸರೋವರ ಮಿಷನ್‌’ಗೆ ಚಾಲನೆ ನೀಡಿದ್ದರು. ಈ ಯೋಜನೆ ಅನ್ವಯ ಹೊಸ ಕೆರೆಗಳ ನಿರ್ಮಾಣ, ಇರುವ ಕೆರೆಗಳ ದುರಸ್ತಿಗೊಳಿಸಿ ನೈಸರ್ಗಿಕ ಜಲಮೂಲಗಳ ಸಂರಕ್ಷಣೆ ಗುರಿ ಹೊಂದಲಾಗಿದೆ. ಈ ಯೋಜನೆ 2023ರ ಆ.15ರವರೆಗೆ ಜಾರಿಯಲ್ಲಿರಲಿದೆ.

‘ಗದಗ ಜಿಲ್ಲೆಯಲ್ಲಿ 75 ಕೆರೆಗಳ ಅಭಿವೃದ್ಧಿಗೆ ಗುರಿ ನೀಡಲಾಗಿದೆ. ಅದರಂತೆ ಈಗಾಗಲೇ, ಜಿಲ್ಲೆಯಲ್ಲಿ 112 ಕೆರೆಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 15 ಕೆರೆಗಳನ್ನು ಅಭಿವೃದ್ಧಿಗೊಳಿಸಿ, ಶೇ 20ರಷ್ಟು ಗುರಿ ಸಾಧನೆ ಮಾಡಲಾಗಿದೆ. ಯೋಜನೆ ಅಡಿಯಲ್ಲಿ ಕಾಯಕಲ್ಪಗೊಂಡ ಅಮೃತ ಸರೋವರದ ಅಂಗಳದಲ್ಲಿ ಆ.15ರಂದು ರಾಷ್ಟ್ರ ಧ್ವಜ ಹಾರಿಸುವ ವ್ಯವಸ್ಥೆ ಮಾಡಲಾಗಿದೆ. ಆಯಾ ಭಾಗದಲ್ಲಿನ ಸ್ವಾತಂತ್ರ್ಯ ಹೋರಾಟಗಾರರು, ಸ್ಥಳೀಯ ಮುಖಂಡರನ್ನು ಜತೆಗೆ ಸೇರಿಸಿಕೊಂಡು ಧ್ವಜಾರೋಹಣ ಮಾಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುಶೀಲಾ ಬಿ. ತಿಳಿಸಿದ್ದಾರೆ. 

‘ಅಮೃತ ಸರೋವರ ಯೋಜನೆ ಅಡಿಯಲ್ಲಿ ಕೆರೆಗಳ ಸರ್ವೆ, ಕೆರೆಯ ಅಕ್ಕಪಕ್ಕದಲ್ಲಿರುವ ಗಿಡಗಳನ್ನು ತೆಗೆಸುವುದು, ಹೂಳೆತ್ತಿಸುವುದು, ಕೆರೆ ಏರಿ ದುರಸ್ತಿ, ಕೆರೆ ಪಕ್ಕದಲ್ಲಿ ಖಾಲಿ ಜಾಗವಿದ್ದರೆ ಗಿಡಗಳನ್ನು ಬೆಳೆಸಬಹುದಾಗಿದೆ. ಅಮೃತ ಸರೋವರ ಕಾಮಗಾರಿಯನ್ನು ನರೇಗಾ ಯೋಜನೆ, ಕೆರೆಗಳ ಸೌಂದರ್ಯೀಕರಣಕ್ಕೆ ಸಿಎಸ್‌ಆರ್‌ ಅನುದಾನ, ಸಾರ್ವಜನಿಕರ ದೇಣಿಗೆ, ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನಡೆಸಬಹುದಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಿಷನ್ ಅಮೃತ ಸರೋವರ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 15 ಕೆರೆಗಳನ್ನು ಪುನಶ್ವೇತನಗೊಳಿಸಿ ಆ.15ರಂದು ‘ಅಮೃತ ಸರೋವರ’ಗಳೆಂದು ಘೋಷಿಸಲಾಗುವುದು ಡಾ.ಸುಶೀಲಾ ಬಿ., ಜಿಲ್ಲಾ ಪಂಚಾಯ್ತಿ ಸಿಇಒ

ಅಮೃತ ಸರೋವರ ಪೋರ್ಟಲ್‌ನಲ್ಲಿ ಗದಗ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ರೋಣ ಹಾಗೂ ಶಿರಹಟ್ಟಿ ತಾಲ್ಲೂಕು ಸೇರಿದಂತೆ ಒಟ್ಟು 82 ಕೆರೆಗಳ ಮಾಹಿತಿ ಅಪ್‌ಲೋಡ್‌ ಮಾಡಲಾಗಿದೆ. ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಬಸವರಾಜ್ ಅಡವಿಮಠ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.