ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಡಗುಂದಿಕೊಪ್ಪ | ಪರವಾನಗಿ ಪಡೆಯದೆ ಕಾಂಕ್ರೀಟ್‌ ಘಟಕ ಸ್ಥಾಪನೆ; ಆರೋಪ

ಚಂದ್ರು ಎಂ. ರಾಥೋಡ್‌
Published 9 ಜೂನ್ 2024, 5:50 IST
Last Updated 9 ಜೂನ್ 2024, 5:50 IST
ಅಕ್ಷರ ಗಾತ್ರ

ನರೇಗಲ್:‌ ಹೋಬಳಿ ವ್ಯಾಪ್ತಿಯ ನಿಡಗುಂದಿ ಗ್ರಾಮ ಪಂಚಾಯ್ತಿಗೆ ಒಳಪಡುವ ನಿಡಗುಂದಿಕೊಪ್ಪ ಗ್ರಾಮದ ಸರ್ವೇ ನಂಬರ್‌ 160/1 ಹೊಲದಲ್ಲಿ ಖಾಸಗಿ ಕಂಪನಿಯವರು ಪರವಾನಗಿ ಪಡೆಯದೇ ಕಾಂಕ್ರೀಟ್‌ ಹಾಗೂ ಮಿಕ್ಸರ್‌ ಮಷಿನ್ ಘಟಕ ಸ್ಥಾಪನೆ ಮಾಡಿದ್ದು, ಈವರೆಗೆ ಯಾವುದೇ ಇಲಾಖೆಯಿಂದ ಎನ್.‌ಒ.ಸಿ ಪಡೆಯದೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿರುವ ಆರೋಪ ಕೇಳಿಬಂದಿದೆ.

ವಾಣಿಜ್ಯ ಬಳಕೆಗಾಗಿ ಕೃಷಿ ಭೂಮಿ ಬಳಕೆ ಮಾಡುತ್ತಿರುವ ಕಾರಣ ನಿಡಗುಂದಿ ಗ್ರಾಮ ಪಂಚಾಯ್ತಿಯಿಂದ ಪರವಾನಗಿ ಪಡೆಯುವಂತೆ ಹಾಗೂ ಭೂ ಪರಿವರ್ತನೆಯ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಮೂರು ನೋಟಿಸ್‌ ನೀಡದರೂ ಪ್ರತಿಕ್ರಿಯೆ ನೀಡಿಲ್ಲ. ರಾಜಾ ರೋಷವಾಗಿ ಕಾಮಗಾರಿ ನಡೆಸಿದ್ದಾರೆ. ಅಧಿಕಾರಿಗಳು, ಗ್ರಾಮ ಪಂಚಾಯ್ತಿಯ ಚುನಾಯಿತ ಜನಪ್ರತಿನಿಧಿಗಳ ಮಾತಿಗೂ ಬೆಲೆ ಕೊಡದೆ ಕೃಷಿ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ನಡೆಸಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ಲಕ್ಷಾಂತರ ರೂಪಾಯಿ ತೆರಿಗೆ ತಪ್ಪಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

‘ನಿಡಗುಂದಿ ಗ್ರಾಮ ಪಂಚಾಯ್ತಿ ವತಿಯಿಂದ ಪಿಡಿಒ, ಅಧ್ಯಕ್ಷರು ಸಹಿ ಮಾಡಿರುವ ನೋಟಿಸ್‌ಗಳನ್ನು ಏಪ್ರಿಲ್ 5, ಏ.23 ಹಾಗೂ ಮೇ 16ರಂದು ಹಾಲಕೆರೆ ಮಾರ್ಗದ ರಸ್ತೆ ಪಕ್ಕದ ಹೊಲದಲ್ಲಿ ಸ್ಥಾಪಿಸಿರುವ ಕಮಲ್‌ ಕಂಪನಿಯ ಘಟಕಕ್ಕೆ ನೀಡಲಾಗಿದೆ. 7 ದಿನಗಳ ಒಳಗೆ ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯ್ತಿಗೆ ನೀಡಿ, ಪರವಾನಗಿ ಪಡೆಯುವಂತೆ ಹಾಗೂ ಪರವಾನಗಿ ಪಡೆಯದಿದ್ದಲ್ಲಿ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದೆಂಬ ಎಚ್ಚರಿಕೆಯನ್ನು ಪ್ರತಿ ಬಾರಿ ನೀಡಲಾಗಿದೆ. ನೋಟಿಸ್‌ಗಳನ್ನು ಸ್ವೀಕರಿಸುತ್ತಿರುವ ಕಂಪನಿಯವರು ಅಗತ್ಯ ದಾಖಲೆಗಳನ್ನು ಒದಗಿಸಿ ಅನುಮತಿ ಪಡೆಯಲು ಮುಂದಾಗುತ್ತಿಲ್ಲ’ ಎಂದು ಗ್ರಾಮ ಪಂಚಾಯ್ತಿ ಅಧಿಕಾರಿಯೊಬ್ಬರು ತಿಳಿಸಿದರು.

‘ಅನುಮತಿ ಪಡೆಯದೆ, ಅದರಲ್ಲೂ ರಸ್ತೆ ಪಕ್ಕದಲ್ಲೇ ಘಟಕ ಸ್ಥಾಪನೆ ಮಾಡಿದ್ದಾರೆ. ಇದರಿಂದಾಗಿ ಸುತ್ತ ಇರುವ ಹೊಲಗಳಿಗೆ ಘಟಕದ ದೂಳು ಬೀಳುತ್ತದೆ. ಬೆಳೆಗಳಿಗೆ ಹಾನಿಯಾಗುತ್ತಿದೆ. ಆದ್ದರಿಂದ, ತಾಲ್ಲೂಕು ಆಡಳಿತವು  ಕಂಪನಿಯ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕು’ ಎಂದು ಕರ್ನಾಟಕ ಅಭಿವೃದ್ದಿ ವೇದಿಕೆ ಅಧ್ಯಕ್ಷ ವಿನಾಯಕ ಜರತಾರಿ ಆಗ್ರಹಿಸಿದರು.

ಬಹು ರಾಷ್ಟ್ರೀಯ ಪವನ ವಿದ್ಯುತ್‌ ಕಂಪನಿಯವರು ವಿವಿಧ ಮಾರ್ಗಗಳ ಮೂಲಕ ನರೇಗಲ್‌ ಹೋಬಳಿಯ ಅನೇಕ ಗ್ರಾಮಗಳ ಕೃಷಿ ಭೂಮಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಂಬಗಳನ್ನು ಅಳವಡಿಸುತ್ತಿದೆ. ಇದಕ್ಕಾಗಿ ಕಾಂಕ್ರೀಟ್‌ ಉತ್ಪಾದನೆ ಮಾಡಿ‌, ಮಿಕ್ಸ್‌ ಮಾಡಿ ಸರಬರಾಜು ಮಾಡುವ ಘಟಕವನ್ನು ನಿಡಗುಂದಿಕೊಪ್ಪದ ಹೊಲದಲ್ಲಿ ಸ್ಥಾಪಿಸಲಾಗಿದೆ. ಖಾಸಗಿ ಕಂಪನಿಯವರು ಕಾನೂನಾತ್ಮಕವಾಗಿ ಅನುಮತಿ ಪಡೆಯದೆ, ದಲ್ಲಾಳಿಗಳ ಮೂಲಕ ಕಾರ್ಯ ನಡೆಸುತ್ತಿದ್ದಾರೆ. ಆಯಾ ಗ್ರಾಮದ ಮುಖಂಡರು, ಪ್ರಮುಖರನ್ನು ವಿಶ್ವಾಸಕ್ಕೆ ಪಡೆದು, ಹೊಲದ ಮಾಲೀಕರಿಗೆ ಹಣ ಕೊಟ್ಟು ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.

ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ, ವಾಣಿಜ್ಯ ಕೆಲಸಕ್ಕೆ ಬಳಕೆ ಮಾಡಲು ಭೂ ಪರಿವರ್ತನೆ ಮಾಡಿಸಲು ಮುಂದಾಗುತ್ತಿಲ್ಲ. ಆ ಭಾಗದಲ್ಲಿ ಕೆಲಸ ಮುಗಿದ ನಂತರ, ಇಂತಹ ಘಟಕವನ್ನು ಕಂಪನಿಯವರು ಬೇರೆ ಕಡೆ ಸ್ಥಾ‍ಪಿಸುತ್ತಾರೆ. ಕಾಂಕ್ರೀಟ್‌ ಹಾಗೂ ಗರಸಿನಿಂದ ಕೃಷಿ ಭೂಮಿ ಏನನ್ನೂ ಬೆಳೆಯದ ಪರಿಸ್ಥಿತಿಗೆ ತಲುಪುತ್ತದೆ ಎಂಬುದು ರೈತರ ಆತಂಕ.

ನಿಡಗುಂದಿಕೊಪ್ಪದ ಹೊಲದಲ್ಲಿ ಘಟಕ ಸ್ಥಾಪನೆ ಕುರಿತು ಪರಿಶೀಲನೆ ನಡೆಸಲಾಗುವುದು. ಪರವಾನಗಿ ಪಡೆಯದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಕಿರಣಕುಮಾರ ಜಿ. ಕುಲಕರ್ಣಿ, ತಹಶೀಲ್ದಾರ್‌, ಗಜೇಂದ್ರಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT