ಸೋಮವಾರ, ಅಕ್ಟೋಬರ್ 26, 2020
28 °C
ಕೊಳಕು ಜಾಗದಲ್ಲಿ ಹದಗೆಡುತ್ತಿರುವ ಆರೋಗ್ಯ, ಬೀದಿ ಬದಿಯಲ್ಲೇ ಮಾಂಸ ಮಾರಾಟ

ಗದಗ: ತ್ರಿಶಂಕು ಸ್ಥಿತಿಯಲ್ಲಿ ಜವಳಿ ಗಲ್ಲಿ ಜನ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಓಣಿ ತುಂಬೆಲ್ಲಾ ಸೊಳ್ಳೆ– ನೊಣಗಳ ಹಾವಳಿ, ಗಬ್ಬೆದ್ದು ನಾರುವ ಚರಂಡಿ ತ್ಯಾಜ್ಯ, ಪ್ರತಿಕ್ಷಣವೂ ಉಸಿರುಗಟ್ಟಿಸುವ ವಾತಾವರಣ... ಇಷ್ಟೆಲ್ಲಾ ಕಷ್ಟಗಳನ್ನು ಅವುಡುಗಚ್ಚಿ ಸಹಿಸಿಕೊಂಡು ನಿರ್ಭಾವುಕರಾಗಿ ಜೀವನ ಸಾಗಿಸುತ್ತಿದ್ದಾರೆ ಇಲ್ಲಿನ ಜವಳಿ ಗಲ್ಲಿ ಶ್ರೀಸಾಮಾನ್ಯರು.

ಆರು ತಿಂಗಳಿನಿಂದ ಕುಂಟುತ್ತ ಸಾಗಿರುವ ರಾಜ ಕಾಲುವೆ ಕಾಮಗಾರಿಯು ಗಲ್ಲಿಯ ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಉಬ್ಬು–ತಗ್ಗಿನಿಂದ ಕೂಡಿರುವ ಮಣ್ಣಿನ ರಸ್ತೆ ಮಳೆ ಬಂದರೆ ಸಂಪೂರ್ಣ ಮುಳುಗುತ್ತದೆ. ಚರಂಡಿ ಉಕ್ಕಿ ಹರಿಯುತ್ತದೆ. ಮಳೆ ನಿಂತ ನಂತರ ತ್ಯಾಜ್ಯದ ದುರ್ನಾತ ಓಣಿಯಲ್ಲೆಲ್ಲಾ ಅಡರಿಕೊಳ್ಳುತ್ತದೆ.

ಮೊನ್ನೆಮೊನ್ನೆಯಷ್ಟೇ ವ್ಯಕ್ತಿಯೊಬ್ಬರು ಕಾಲು ಜಾರಿ ಚರಂಡಿ ಒಳಕ್ಕೆ ಬಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಡುವ ಮಕ್ಕಳು ಬಾಯ್ತೆರೆದಿರುವ ಚರಂಡಿಗೆ ಬೀಳದಂತೆ ಕಾಯುವುದೇ ಪೋಷಕರಿಗೆ ಒಂದು ಕಾಯಕವಾಗಿದೆ. ಇಷ್ಟೆಲ್ಲಾ ಕಷ್ಟಗಳನ್ನು ಓಣಿಯ ಜನರು ಎದುರಿಸುತ್ತಿದ್ದರೂ ಯಾರೊಬ್ಬರೂ ಅವರ ಕಷ್ಟ ನಿವಾರಿಸುವ ಉಸಾಬರಿಗೆ ಹೋಗಿಲ್ಲ.

‘ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಜವಳಿ ಓಣಿಯಲ್ಲಿ ನಾನಾ ರೀತಿಯ ಸಮಸ್ಯೆಗಳು ಎದುರಾಗಿವೆ. ಭೂಲೋಕದಲ್ಲೇ ನಮಗೆ ನರಕ ದರ್ಶನ ಆಗುತ್ತಿದೆ. ಯಮ ಸ್ವರೂಪಿ ಸೊಳ್ಳೆಗಳು ಮಕ್ಕಳ ರಕ್ತವನ್ನು ನಿತ್ಯವೂ ಹೀರುತ್ತಿವೆ. ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ವೃದ್ಧರು ನರಳುತ್ತಿದ್ದಾರೆ. ಮಲ–ಮೂತ್ರ, ಪ್ಲಾಸ್ಟಿಕ್‌ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿಕೊಂಡಿದೆ. ರೋಗ–ರುಜಿನಗಳು ಜಾಸ್ತಿಯಾಗಿವೆ. ವ್ಯಾಪಾರ ವಹಿವಾಟು ಮಕಾಡೆ ಮಲಗಿದೆ’ ಎನ್ನುತ್ತಾರೆ ಓಣಿಯ ನಿವಾಸಿ ಸಲೀಂ ಆರ್‌. ಬೋದ್ಲೆಖಾನ್‌.

‘ಎರಡು ಮೂರು ತಿಂಗಳಲ್ಲಿ ಚರಂಡಿ ಕಾಮಗಾರಿ ಮುಗಿಸಿಕೊಡುವುದಾಗಿ ಗುತ್ತಿಗೆದಾರರು ಹೇಳಿದ್ದರು. ಆದರೆ, ಕೆಲಸ ಇನ್ನೂ ಮುಗಿದಿಲ್ಲ. ಚರಂಡಿ ನಿರ್ಮಾಣಕ್ಕಾಗಿ ನಮ್ಮ ಮನೆಯ ಮುಂಭಾಗವನ್ನೇ ಕಿತ್ತುಹಾಕಿದ್ದಾರೆ. ಅಡಿಪಾಯ ಅಲುಗಾಡುತ್ತಿದೆ. ಮಳೆಯಿಂದಾಗಿ ಕುಸಿದು ಬಿದ್ದಿರುವ ಮನೆಗೆ ಹೋಗಲು ಈಗ ದಾರಿ ಕೂಡ ಇಲ್ಲದಾಗಿದೆ. ಮನೆ ರಿಪೇರಿ ಮಾಡಿಸಿಕೊಳ್ಳುವುದಕ್ಕೂ ಹಣ ಸಾಲುತ್ತಿಲ್ಲ. ಪರಿಹಾರ ನೀಡುವುದಾಗಿ ಹೇಳಿದ್ದ ನಗರಸಭೆಗೆ ಹೋಗಿ ಕೇಳಿದರೆ ಈ ಬಗ್ಗೆ ಇನ್ನೂ ಸಭೆ ನಡೆದಿಲ್ಲ ಎನ್ನುತ್ತಿದ್ದಾರೆ. ಸ್ವಂತ ಮನೆಯಿದ್ದರೂ ಈಗ ಬೇರೆ ಓಣಿಗೆ ಹೋಗಿ ಬಾಡಿಗೆ ಕಟ್ಟಿ ಜೀವನ ಸಾಗಿಸುವಂತಾಗಿದೆ’ ಎನ್ನುತ್ತಾರೆ ಅವರು.

‘ಜವಳಿ ಗಲ್ಲಿ ಪ್ರದೇಶವು 17, 18 ಮತ್ತು 25ನೇ ವಾರ್ಡ್‌ಗಳಲ್ಲಿ ಹಂಚಿ ಹೋಗಿದೆ. ವಾರ್ಡ್‌ನ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು. ಗುತ್ತಿಗೆದಾರರು ಬಿಲ್‌ ಆಗಿಲ್ಲ ಅಂತ ಹೇಳಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈಗ ಸಿಹಿ ನೀರಿನ ನಳದಲ್ಲಿ ಕೊಳಚೆ ನೀರು ಬರುತ್ತಿದೆ. ಚರಂಡಿ ಕಾಮಗಾರಿ ಬೇಗ ಮುಗಿಸಿದರೆ ಜನರ ಓಡಾಟಕ್ಕೆ ಅನುಕೂಲ ಆಗುತ್ತದೆ. ವ್ಯಾಪಾರ ಕೂಡ ವೃದ್ಧಿಸುತ್ತದೆ’ ಎನ್ನುತ್ತಾರೆ ಇಲ್ಲಿ ಮಾಂಸ, ಮೀನು ಮಾರಾಟ ಮಾಡುವ ವ್ಯಾಪಾರಿಗಳು.

‘ಗಲೀಜು ತುಂಬಿದ ರಸ್ತೆ, ಚರಂಡಿ ಬದಿಯಲ್ಲೇ ಕೋಳಿ ಹಾಗೂ ಕುರಿ ಮಾಂಸ ವ್ಯಾಪಾರ ನಡೆಯುತ್ತಿದೆ. ಕೆಲವು ವ್ಯಾಪಾರಿಗಳು ಕತ್ತರಿಸಿದ ಮಾಂಸವನ್ನು ತಳ್ಳುವ ಗಾಡಿಯ ಮೇಲಿಟ್ಟುಕೊಂಡೇ ಮಾರಾಟ ಮಾಡುತ್ತಿದ್ದಾರೆ. ನೊಣ, ಧೂಳೆಲ್ಲವೂ ಮಾಂಸದ ಮೇಲೆ ಮೆತ್ತಿಕೊಳ್ಳುತ್ತಿದೆ. ನಿತ್ಯವೂ ನೂರಾರು ಜನರು ಅದೇ ಮಾಂಸವನ್ನು ಖರೀದಿಸಿ ಸಾರು, ಪದಾರ್ಥ ಮಾಡಿಕೊಂಡು ತಿನ್ನುತ್ತಿದ್ದಾರೆ. ಹೀಗಾದರೆ ಜನರ ಆರೋಗ್ಯದ ಗತಿಯೇನು? ಗದಗ ನಗರದಲ್ಲಿ ಒಂದು ಸುಸಜ್ಜಿತ ಮಾಂಸ ಮಾರುಕಟ್ಟೆಗೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಕ್ರಮವಹಿಸಬೇಕು’ ಎಂದು ಗ್ರಾಹಕರೊಬ್ಬರು ಆಗ್ರಹಿಸಿದರು.

***********

ಮಳೆ ಆಗಾಗ ಸುರಿಯುತ್ತಿದೆ. ಇದರಿಂದಾಗಿ ಕಾಮಗಾರಿ ವಿಳಂಬವಾಗಿದೆ. ಜನರ ಸಹಕಾರ, ಪೂರಕ ವಾತಾವರಣ ಸಿಕ್ಕರೆ ನವೆಂಬರ್‌ 15ರ ಒಳಗೆ ರಸ್ತೆ ಮತ್ತು ಚರಂಡಿ ಕಾಮಗಾರಿ ಎರಡನ್ನೂ ಮುಗಿಸಲಾಗುವುದು.
ಎಸ್.ಎನ್.ರುದ್ರೇಶ್
ನಗರಸಭೆ ಯೋಜನಾಧಿಕಾರಿ

 

ಕಿಷ್ಕಿಂಧೆಯಂತಿರುವ ಜವಳಿ ಗಲ್ಲಿಯ ಜನರ ಬದುಕಿನಲ್ಲಿ ನೂರಾರು ಕಷ್ಟಗಳು ಇಡಿಕಿರಿದಿವೆ. ಅದಕ್ಕೆ ಮೂಲ ಕಾರಣ ಕುಂಟುತ್ತ ಸಾಗಿರುವ ಕಾಮಗಾರಿ. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಬೇಕು.
ಸಲೀಂ ಆರ್‌. ಬೋದ್ಲೆಖಾನ್‌
ಓಣಿಯ ನಿವಾಸಿ

ಕಾಮಗಾರಿ ನಿಧಾನವಾಗಿರು ವುದರಿಂದ ವೀರನಾರಾಯಣ ದೇವಸ್ಥಾನದ ಕಡೆಗೆ ಹೋಗಲು ತುಂಬ ತೊಂದರೆ ಆಗುತ್ತಿದೆ.ಬೇಗ ಕೆಲಸ ಮುಗಿಸಿದರೆ, ಸುತ್ತಿ ಬಳಸಿ ಅಡ್ಡಾಡುವುದು ತಪ್ಪುತ್ತದೆ.
ರಾಮಣ್ಣ ದೊಡ್ಡಮನಿ
ಸ್ಥಳೀಯ ನಿವಾಸಿ

 

ಮಳೆ ನೆಪವೊಡ್ಡಿ ಕಾಮಗಾರಿ ಮುಂದೂಡಬಾರದು. ಅಂಗಡಿ ವ್ಯಾಪಾರ ಕುಸಿದಿದೆ. ದಿನಗಳು ಕಳೆದಂತೆ ಕಷ್ಟಗಳು ಹೆಚ್ಚಾಗುತ್ತಲೇ ಇವೆ. ರಸ್ತೆ ಮತ್ತು ಚರಂಡಿ ಕಾಮಗಾರಿ ಎರಡನ್ನೂ ಮುಗಿಸಿ ಕೊಡಬೇಕು.
ಮುಮ್ತಾಜ್‌,
ಸ್ಥಳೀಯ ನಿವಾಸಿ

ಗಲ್ಲಿ ತುಂಬೆಲ್ಲಾ ಗಲೀಜು

ಗಂಗಾಪುರ ಪೇಟೆ ಮತ್ತು ಟಾಂಗಾ ಕೂಟ್‌ ರಸ್ತೆ ನಡುವೆ ಜವಳಿ ಗಲ್ಲಿ ಬರುತ್ತದೆ. ಚರಂಡಿ ಕಾಮಗಾರಿ ಮುಗಿಯದೇ ರಸ್ತೆ ಕಾಮಗಾರಿ ಆರಂಭಗೊಳ್ಳುವುದಿಲ್ಲ. ಗಲ್ಲಿ ತುಂಬೆಲ್ಲಾ ಗಲೀಜು ತುಂಬಿಕೊಂಡಿದೆ. ಇಲ್ಲಿನ ನಾಗರಿಕರು ಕೂಡ ‘ನೈರ್ಮಲ್ಯ’ ಪದದ ಅರ್ಥ ಮರೆತಂತೆ ವರ್ತಿಸುತ್ತಿದ್ದಾರೆ. ಮನೆಯ ತ್ಯಾಜ್ಯವನ್ನೆಲ್ಲಾ ತಂದು ಚರಂಡಿಗೆ ಸುರಿಯುತ್ತಾರೆ. ಚರಂಡಿ ಬದಿಯಲ್ಲೇ ಮಕ್ಕಳನ್ನು ಮಲ ವಿಸರ್ಜನೆಗೆ ಕೂರಿಸುತ್ತಾರೆ. ಇಲ್ಲಿನ ನಿವಾಸಿಗಳು ಕೂಡ ಸ್ವಚ್ಛತೆಗೆ ಸ್ವಲ್ಪ ಗಮನ ಕೊಡಬೇಕು ಎಂಬುದು ಗಲ್ಲಿಯ ಪ್ರಜ್ಞಾವಂತ ಜನರ ಅಭಿಪ್ರಾಯವಾಗಿದೆ.

ನವೆಂಬರ್‌ 15ರ ಒಳಗೆ ಪೂರ್ಣ

‘ಜವಳಿ ಗಲ್ಲಿಯ ಚರಂಡಿ ಹಾಗೂ ರಸ್ತೆ ಕಾಮಗಾರಿ ಯೋಜನೆ ಎಂಟು ವರ್ಷಗಳಷ್ಟು ಹಿಂದಿನದ್ದು. ಇದಕ್ಕೆ ಬಿಡುಗಡೆ ಆಗಿದ್ದ ಅನುದಾನ ಕೂಡ ವಾಪಸ್‌ ಹೋಗುವುದರಲ್ಲಿತ್ತು. ಇಲ್ಲಿನ ಮಾಂಸ ವ್ಯಾಪಾರಿಗಳ ಮನವೊಲಿಸಿ ಫೆಬ್ರುವರಿಯಲ್ಲಿ ಕಾಮಗಾರಿ ಆರಂಭಿಸಿದೆವು’ ಎಂದು ನಗರಸಭೆ ಯೋಜನಾಧಿಕಾರಿ ಎಸ್.ಎನ್.ರುದ್ರೇಶ್ ಹೇಳಿದರು.

‘ಸ್ಥಳೀಯರ ಗಲಾಟೆ, ಗದ್ದಲಗಳ ಕಾರಣದಿಂದಾಗಿ ಕೆಲಸ ಆರಂಭವಾಗುವುದೇ ತಡ ಆಯಿತು. ಈಗ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಸ್ಥಳೀಯರ ಸಹಕಾರ ಪಡೆದುಕೊಂಡು ಆದಷ್ಟು ನವೆಂಬರ್‌ 15ರ ಒಳಗೆ ರಸ್ತೆ ಮತ್ತು ಚರಂಡಿ ಕಾಮಗಾರಿ ಎರಡನ್ನೂ ಮುಗಿಸಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.