ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗಳಿಗೆ ಅವಕಾಶ ನೀಡಿ: ಸಂಸದ ಒತ್ತಾಯ

4ನೇ ಬ್ಲಾಕ್‌ ಅನ್ನು ವನ್ಯಜೀವಿಧಾಮ ವ್ಯಾಪ್ತಿಯಿಂದ ಕೈಬಿಡಿ
Last Updated 4 ಸೆಪ್ಟೆಂಬರ್ 2020, 16:12 IST
ಅಕ್ಷರ ಗಾತ್ರ

ಗದಗ: ‘ಕಪ್ಪತ್ತಗುಡ್ಡ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯದ ಕ್ಷೇತ್ರವನ್ನು ನಿಯಂತ್ರಿಸಿ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿ ಸಂಸದ ಶಿವಕುಮಾರ ಉದಾಸಿ ಅವರು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಹಾಗೂ ರಾಜ್ಯದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್‌ ಅವರಿಗೆ ಪತ್ರ ಬರೆದಿದ್ದಾರೆ.

ಈ ವಿಚಾರವಾಗಿ ಸಂಸದ ಶಿವಕುಮಾರ ಉದಾಸಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಅರಣ್ಯ ಇಲಾಖೆಯು ಕಪ್ಪತ್ತಗುಡ್ಡ ವನ್ಯಜೀವಿಧಾಮದ ಸುತ್ತಲೂ ಇರುವ 574.01 ಚ.ಕಿ.ಮೀ. ಕ್ಷೇತ್ರವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂಬ ವಿಷಯ ತಿಳಿದಿದ್ದರಿಂದ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಫೆಬ್ರುವರಿಯಲ್ಲಿಯೇ ಪತ್ರ ಬರೆದಿದ್ದೆ’ ಎಂದು ಅವರು ತಿಳಿಸಿದರು.

‘ಹಿಂದುಳಿದ ತಾಲ್ಲೂಕುಗಳು ಎಂಬ ಹಣೆಪಟ್ಟಿ ಹೊಂದಿರುವ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಈ ಪ್ರದೇಶ ಬರುತ್ತದೆ. ಅಲ್ಲದೇ, ಈಗ ಗುರುತಿಸಿರುವ 4ನೇ ಬ್ಲಾಕ್‌ ಕಪ್ಪತ್ತಗುಡ್ಡದಿಂದ ತುಂಬ ದೂರ ಇದೆ. ಈ ಕಾರಣಕ್ಕಾಗಿ ಅಲ್ಲಿ ಕ್ರಷರ್‌ಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಕೋರಿದ್ದೇನೆ. ವನ್ಯಜೀವಿಧಾಮ ಹಾಗೂ ಪರಿಸರ ಸೂಕ್ಷ್ಮ ವಲಯದ ಬ್ಲಾಕ್‌ಗಳನ್ನು ಗುರುತಿಸುವಾಗ ಕಾಡನ್ನು ಭಾಗಗಳಾಗಿ ವಿಂಗಡಿಸುವ ಬದಲು ಕಪ್ಪತ್ತಗುಡ್ಡಕ್ಕೆ ಹೊಂದಿಕೊಂಡಿರುವ ಎಲ್ಲ ಪ್ರದೇಶಗಳನ್ನೂ ಇಡಿಯಾಗಿ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು ಎಂಬುದು ನನ್ನ ಭಾವನೆ. ಪ್ರತಿ ಬ್ಲಾಕ್‌ಗಳ ನಡುವೆ ತುಂಬ ಅಂತರವಿರುವುದರಿಂದ ಅಭಿವೃದ್ಧಿಗೆ ತೊಡಕಾಗುತ್ತದೆ’ ಎಂದು ಅವರು ಹೇಳಿದರು.

‘ಈಗ ಗುರುತಿಸಿರುವ 4ನೇ ಬ್ಲಾಕ್‌ನಲ್ಲಿ ಮೊದಲಿನಿಂದಲೂ ಕ್ರಷರ್‌ಗಳು ಕಾರ್ಯಾಚರಿಸುತ್ತಿವೆ. ಹಾಗಾಗಿ, 4ನೇ ಬ್ಲಾಕ್‌ ಅನ್ನು ವನ್ಯಜೀವಿಧಾಮ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಕೋರಿದ್ದೇನೆ.‌ ಅಲ್ಲಿ ಕ್ರಷರ್‌ಗಳು ನಡೆಯುತ್ತಿದ್ದರಿಂದ ಸ್ಥಳೀಯರಿಗೆ ಉದ್ಯೋಗವಕಾಶ ಸಿಕ್ಕಿತ್ತು. ಅರಣ್ಯ ನಾಶ ಮಾಡಬೇಕು ಎಂಬ ಉದ್ದೇಶ ನಮ್ಮದಲ್ಲ. ಕೋವಿಡ್‌–19ನಿಂದಾಗಿ ಈಗ ಎಲ್ಲ ಕಡೆ ಉದ್ಯೋಗ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಸಿಗುತ್ತದೆ ಎಂಬ ಕಾಳಜಿ ಇದರ ಹಿಂದಿದೆ’ ಎಂದು ಅವರು ಹೇಳಿದರು.

‘ಕೇಂದ್ರ ಸರ್ಕಾರ ಈಗ ಹೊಸ ಪರಿಸರ ನೀತಿಯನ್ನು ಪ್ರಕಟಿಸಿದ್ದು, ಅದರೊಳಗೆ ನನ್ನ ಮನವಿಗೆ ಒಪ್ಪಿಗೆ ಸಿಗುತ್ತದೆಯೋ ಇಲ್ಲವೋ ಎಂಬುದು ತಿಳಿದಿಲ್ಲ. ಮುಂದೆ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT