ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ

ಸದ್ದಿಲ್ಲದೇ ಪೈಪೋಟಿ ನೀಡುತ್ತಿರುವ ಜೆಡಿಎಸ್‌ ಅಭ್ಯರ್ಥಿ ಎಚ್.ಎಂ.ನಾಯಕ
Published 8 ಮೇ 2023, 6:28 IST
Last Updated 8 ಮೇ 2023, 6:28 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಮತದಾನಕ್ಕೆ ಎರಡೇ ದಿನಗಳು ಬಾಕಿ ಉಳಿದಿದ್ದು ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. ಶಿರಹಟ್ಟಿ ಮೀಸಲು ಕ್ಷೇತ್ರದಿಂದ 14 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಅವರಲ್ಲಿ ಏಳು ಜನ ಪಕ್ಷದ ಅಭ್ಯರ್ಥಿಗಳಾಗಿದ್ದರೆ ಉಳಿದವರು ಪಕ್ಷೇತರರು.

ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ಪೈಪೋಟಿ ಇದ್ದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ಪರಿಶಿಷ್ಟ ಜಾತಿ, ಲಂಬಾಣಿ, ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿದ್ದು, ಲಿಂಗಾಯತರ ಮತಗಳೇ ನಿರ್ಣಾಯಕ. ಒಬಿಸಿ ಮತದಾರರು ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಹಂಚಿ ಹೋಗುವ ಸಂಭವ ಹೆಚ್ಚಾಗಿದೆ.

ಕೇಂದ್ರ ಮತ್ತು ರಾಜ್ಯದ ಮುಖಂಡರು ಬಂದು ಹೋದ ಮೇಲೆ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಸಿದೆ. ಅಭ್ಯರ್ಥಿ ಡಾ.ಚಂದ್ರು ಲಮಾಣಿ ಪರವಾಗಿ ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ ಬೆಂಬಲಿಗರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿ ಮತಯಾಚನೆ ನಡೆಸುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ವಿಶೇಷವಾಗಿ ಕಾಂಗ್ರೆಸ್‍ನ ಸಾಂಪ್ರದಾಯಿಕ ಪರಿಶಿಷ್ಟ ಜಾತಿ, ಕುರುಬ ಮತ್ತು ಮುಸ್ಲಿಂ ಮತಗಳನ್ನು ಕಸಿಯುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ ಲಿಂಗಾಯತ ಸಮಾಜದ ಕೆಲ ಮತಗಳೂ ಅವರ ಕಡೆ ವಾಲುತ್ತಿವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಇನ್ನೊಂದು ವಿಶೇಷವೆಂದರೆ ಹಿಂದೆ ಚುನಾಚಣೆಯಲ್ಲಿ ಸ್ಪರ್ಧಿಸಿದ್ದ ಪೂರ್ಣಾಜಿ ಖರಾಟೆ, ಸೊಸೆಯನ್ನು ಕಣಕ್ಕಿಳಿಸಿದ್ದ ಸಣ್ಣವೀರಪ್ಪ ಹಳ್ಳೆಪ್ಪನವರ, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ, ಕುರುಬ ಸಮಾಜದ ವಿ.ಜಿ. ಪಡಿಗೇರಿ, ಸತೀಶಗೌಡ ಪಾಟೀಲರು ರಾಮಕೃಷ್ಣ ದೊಡ್ಡಮನಿ ಗೆಲುವಿನ ಹಾದಿ ಸುಗಮಗೊಳಿಸುವ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಬಿಂಬಿಸುತ್ತ ಮತ ಕೇಳುತ್ತಿದ್ದಾರೆ. ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲೂ ಪ್ರಚಾರ ನಡೆಸಿದ್ದಾರೆ. ಪರಿಶಿಷ್ಟ ಜಾತಿ, ಕುರುಬ, ಮುಸ್ಲಿಂ ಮತದಾರರನ್ನೇ ಇವರು ನೆಚ್ಚಿದ್ದಾರೆ. ಆದರೆ ಈ ಬಾರಿ ಕುರುಬ ಸಮಾಜದ ಕೆಲವೊಂದಿಷ್ಟು ಮತಗಳು ಕೈ ತಪ್ಪುವ ಭಯ ಅವರನ್ನು ಕಾಡುತ್ತಿದೆ.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕ್ಷೇತ್ರದ 16 ಸಾವಿರ ರೈತರ ಸಾಲಮನ್ನಾ ಮಾಡಿದ್ದರು. ಜೆಡಿಎಸ್ ಅಭ್ಯರ್ಥಿ ಎಚ್.ಎಂ. ನಾಯಕ ಅವರು ಸಾಲಮನ್ನಾ ಆಗಿರುವ ರೈತರ ಪಟ್ಟಿ ಹಿಡಿದುಕೊಂಡು ಸದ್ದಿಲ್ಲದೆ ಪ್ರಚಾರದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT