ಗುರುವಾರ , ಆಗಸ್ಟ್ 11, 2022
21 °C
ಡಿ.5ರಂದು ಕರವೇಯಿಂದ ಕರ್ನಾಟಕ ಬಂದ್‍ಗೆ ಕರೆ

ಒಡೆದು ಆಳುವ ನೀತಿ ತರವಲ್ಲ; ಅಬ್ಬಿಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಕರ್ನಾಟಕ ರಕ್ಷಣಾ ವೇದಿಕೆ ಡಿ. 5ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಜಿಲ್ಲೆ ಸ್ತಬ್ಧಗೊಳ್ಳಲಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಎಚ್. ಅಬ್ಬಿಗೇರಿ ತಿಳಿಸಿದರು.

‘ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಕನ್ನಡ ಪರ ಸಂಘಟನೆಗಳ ಬಗ್ಗೆ ಶಾಸಕರ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದ್ದು, ಅಂದು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ರಾಜಕೀಯ ಲಾಭಕ್ಕಾಗಿ ಕನ್ನಡ ವಿರೋಧಿ ನೀತಿ ಅನುಸರಿಸುವ ಮರಾಠಿಗರನ್ನು ಓಲೈಸುವ ಉದ್ದೇಶದಿಂದ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದಕ್ಕೆ ನಮ್ಮ ಆಕ್ಷೇಪವಿದೆ. ರಾಜಕೀಯ ಸ್ವಾರ್ಥಕ್ಕಾಗಿ ಒಡೆದು ಆಳುವ ನೀತಿ ಅನುಸರಿಸುವುದು ಸರಿಯಲ್ಲ’ ಎಂದು ಹೇಳಿದರು.

‘ಮಹಾರಾಷ್ಟ್ರದೊಂದಿಗೆ ಗಡಿ ಹಂಚಿ ಕೊಂಡಿರುವ ಕನ್ನಡದ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಎಂಇಎಸ್ ಹಾಗೂ ಎಂಎನ್‍ಎಸ್ ಪುಂಡಾಟಿಕೆ ಮೆರೆಯುತ್ತಿವೆ. ವಿಧಾನಸಭೆ ಚುನಾವಣೆಗೆ ನಿಲ್ಲುವ ಸಂಘಟನೆಗಳ ನಾಯಕರು ಕನ್ನಡಿಗರ ಮತಗಳು ನಮಗೆ ಬೇಡವೇ ಬೇಡ ಎಂಬ ಉದ್ಧಟತನ ಪ್ರದರ್ಶಿಸುತ್ತಾರೆ. ಇದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಸಂಗತಿ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಕ್ಷತ್ರಿಯ ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಬದಲಾಯಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಕರ್ನಾಟಕ ಬಂದ್ ವೇಳೆ ವೈದ್ಯಕೀಯ ಸೇವೆಗಳು, ಔಷಧಿ ಅಂಗಡಿ, ಹಾಲು ಮಾರಾಟ, ದಿನಪತ್ರಿಕೆಗಳ ಸರಬರಾಜಿಗೆ ತೊಂದರೆ ಇರುವುದಿಲ್ಲ. ಜಿಲ್ಲೆಯ ವರ್ತಕರು ಅಂಗಡಿಗಳನ್ನು ಬಂದ್ ಮಾಡಿ, ಬಂದ್‌ ಬೆಂಬಲಿಸಬೇಕು. ಶಾಂತಿಯುತ ಬಂದ್‍ಗೆ ಜಿಲ್ಲಾಡಳಿತ ಅವಕಾಶ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಎಸ್.ಗೋಡಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಂಗನಗೌಡ್ರ ಮಾಲಿಪಾಟೀಲ, ವಿರುಪಾಕ್ಷಿ ಹಿತ್ತಲಮನಿ, ಅಜೀಂ ಖಾಜಿ, ಬಸವರಾಜ ಮೇಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು