ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮತ್ವ ಸಾಧಿಸಲಿ: ಸಿದ್ದರಾಮಯ್ಯ

ಗದುಗಿನ ವೀರನಾರಾಯಣ ಸನ್ನಿಧಿಯಲ್ಲಿ ‘ಕನ್ನಡ ಜ್ಯೋತಿ’ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Published 3 ನವೆಂಬರ್ 2023, 15:36 IST
Last Updated 3 ನವೆಂಬರ್ 2023, 15:36 IST
ಅಕ್ಷರ ಗಾತ್ರ

ಗದಗ: ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ ಸೃಷ್ಟಿಗೆ ಜಾಗ ನೀಡಿದ ಇಲ್ಲಿನ ವೀರನಾರಾಯಣ ದೇವಸ್ಥಾನದಲ್ಲಿ ಶುಕ್ರವಾರ ಕನ್ನಡ ಜ್ಯೋತಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಕನ್ನಡದಲ್ಲೇ ಮಾತನಾಡುವೆ, ಕನ್ನಡದಲ್ಲೇ ಬರೆಯುವೆ, ವ್ಯವಹರಿಸುವೆ ಎಂಬ ಪ್ರತಿಜ್ಞೆಯನ್ನು ಏಳು ಕೋಟಿ ಕನ್ನಡಿಗರೂ ಮಾಡಬೇಕು’ ಎಂದು ಸಾರಿದರು.

‘ಹೆಸರಾಯಿತು ಕರ್ನಾಟಕ; ಉಸಿರಾಗಲಿ ಕನ್ನಡ’ ಎಂಬ ಆಶಯದೊಂದಿಗೆ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾದ ನೆನಪಿನ ‘ಕರ್ನಾಟಕ ಸಂಭ್ರಮ–50’ ಕಾರ್ಯಕ್ರಮಕ್ಕೆ ಈ ಮೂಲಕ ವಿಜೃಂಭಣೆಯ ಚಾಲನೆ ನೀಡಿದರು.

ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ವೀರನಾರಾಯಣ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಂಡಿತು. ಜಾಮಿಯಾ ಮಸೀದಿ, ಕೆ.ಎಚ್‌.ಪಾಟೀಲ ವೃತ್ತ ಮಾರ್ಗವಾಗಿ ಭೂಮರಡ್ಡಿ ವೃತ್ತಕ್ಕೆ ಬಂದಾಗ ‘ಕರ್ನಾಟಕ ಸಂಭ್ರಮ–50’ ಕಾರ್ಯಕ್ರಮದ ಗುರುತಿಗಾಗಿ ಜಿಲ್ಲಾಡಳಿತದಿಂದ ನಿರ್ಮಾಣಗೊಂಡಿರುವ ಸ್ತೂಪವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಿದರು. ಬಳಿಕ ಮೆರವಣಿಗೆಯು ಕಾಟನ್‌ ಸೇಲ್‌ ಸೊಸೈಟಿ ಆವರಣದಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಗಳು, ಕಲಾ ತಂಡಗಳು ಭಾಗವಹಿಸಿದ್ದವು.

ಕಾಟನ್‌ ಸೇಲ್‌ ಸೊಸೈಟಿ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ‘ಕನ್ನಡ ಕಲಿಯದೆಯೂ ಕರ್ನಾಟಕದಲ್ಲಿ ವ್ಯವಹರಿಸಬಹುದು ಎನ್ನುವ ವಾತಾವರಣ ಬದಲು ಮಾಡಬೇಕು. ಕನ್ನಡದ ಸಂಸ್ಕೃತಿ ಜತೆಗೆ ನಮ್ಮೆಲ್ಲರಲ್ಲೂ ಕನ್ನಡತನ ಬೇರೂರಬೇಕು. ಆಗ ಮಾತ್ರ ಕನ್ನಡದ ವಾತಾವರಣ ಇಡೀ ನಾಡಿನಲ್ಲಿ ಪಸರಿಸುತ್ತದೆ’ ಎಂದು ಹೇಳಿದರು.

‘ಈ ನಾಡಿನಲ್ಲಿ ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು. ತಮಿಳುನಾಡು, ಆಂಧ್ರ, ಕೇರಳದಲ್ಲಿ ಅಲ್ಲಿನ ಮಾತೃಭಾಷೆ ಸಾರ್ವಭೌಮತ್ವ ಸಾಧಿಸಿದೆ. ಅಂತೆಯೇ, ನಮ್ಮ ನೆಲ, ಭಾಷೆಯ ಬಗ್ಗೆ ಹೆಮ್ಮೆಪಟ್ಟುಕೊಳ್ಳಬೇಕಾದರೆ ಕನ್ನಡ ನಾಡಿನಲ್ಲೂ ಕನ್ನಡ ವಾತಾವರಣ ನಿರ್ಮಾಣವಾಗಬೇಕು’ ಎಂದರು.

ಚಾರಿತ್ರ್ಯಕ ಕಾರ್ಯಕ್ರಮ: ಸಿಎಂ ಬಣ್ಣನೆ

‘ಐವತ್ತು ವರ್ಷಗಳ ಹಿಂದೆ ಗದಗ ನಗರದಲ್ಲಿ ನಡೆದ ಕರ್ನಾಟಕ ನಾಮಕರಣೋತ್ಸವದ ಸಾರ್ವಜನಿಕ ಸಭೆಗೆ ಮುಖ್ಯಮಂತ್ರಿ ದೇವರಾಜ ಅರಸು ಭಾಗವಹಿಸಿದ್ದರು. ಅಂದು ಸಚಿವರಾಗಿದ್ದ ಕೆ.ಎಚ್‌.ಪಾಟೀಲ ಅವರು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಐವತ್ತು ವರ್ಷಗಳ ಸಂಭ್ರಮದ ಕಾರ್ಯಕ್ರಮದಲ್ಲಿ ಈಗ ಅರಸು ಊರಿನವನಾದ ನಾನು ಮುಖ್ಯಮಂತ್ರಿ ಆಗಿರುವೆ. ಕೆ.ಎಚ್‌.ಪಾಟೀಲ ಅವರ ಮಗ ಎಚ್‌.ಕೆ.ಪಾಟೀಲ ಅವರು ಇತಿಹಾಸ ಮರುಸೃಷ್ಟಿಸಿದ್ದಾರೆ. ಇದೊಂದು ಚಾರಿತ್ರಿಕ ಕಾರ್ಯಕ್ರಮ’ ಎಂದು ಬಣ್ಣಿಸಿದರು.

‘ನಮ್ಮ ರಾಜಕೀಯ ಪ್ರಭುತ್ವ ಸಾಮಾಜಿಕ ಪ್ರಭುತ್ವದ ಮೇಲೆ ನಿಂತಿದೆ. ಎಲ್ಲ ಕನ್ನಡಿಗರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾದಾಗ ಮಾತ್ರ ಸ್ವಾತಂತ್ರ್ಯ ಬಂದಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಕರ್ನಾಟಕ ಸಂಭ್ರಮ ಕಾರ್ಯಕ್ರಮಕ್ಕೆ ಶಕ್ತಿ ತುಂಬಲು ಇಪ್ಪತ್ತು ಮಂದಿ ಸಚಿವರು ಬಂದಿದ್ದೇವೆ. ಕನ್ನಡ ಎಂಬುದು ಶಕ್ತಿ ಮಂತ್ರ. ಕರ್ನಾಟಕ ಎಂಬುದು ಅನುಭವ ಮಂಟಪ ಇದ್ದಂತೆ’ ಎಂದು ಹೇಳಿದರು.

ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು.

[object Object]
ಗದುಗಿನ ವೀರನಾರಾಯಣ ದೇವಸ್ಥಾನದಿಂದ ಕಾಟನ್‌ ಸೇಲ್‌ ಸೊಸೈಟಿ ಆವರಣದವರೆಗೆ ನಡೆದ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಪಾಲ್ಗೊಂಡರು
ಕನ್ನಡ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯಕ್ರಮ ಇದು. ಆ ಜವಾಬ್ದಾರಿಯನ್ನು ಯುವಜನತೆ ಶ್ರದ್ಧೆಯಿಂದ ಮಾಡಬೇಕು.
–ಯು.ಟಿ.ಖಾದರ್‌ ವಿಧಾನಸಭಾಧ್ಯಕ್ಷ
ಕರ್ನಾಟಕ ಸಂಭ್ರಮ ವರ್ಷಪೂರ್ತಿ ನಡೆಯಲಿದೆ. ಬೆಂಗಳೂರಿನಲ್ಲಿ 25 ಅಡಿ ಎತ್ತರದ ಭುವನೇಶ್ವರಿ ಕಂಚಿನ ಪ್ರತಿಮೆ ಸ್ಥಾಪಿಸಲಾಗುವುದು. ಕುಮಾರವ್ಯಾಸ ಭಾರತ’ ಮರು ಮುದ್ರಿಸಿ ಕಡಿಮೆ ಬೆಲೆ ಮಾರಾಟ ಮಾಡಲಾಗುವುದು.
–ಶಿವರಾಜ ತಂಗಡಗಿ ಸಚಿವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಡಿಕೆಶಿಯನ್ನೇ ಮರೆತು ಬಿಟ್ನಲ್ರೀ’

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಪ್ರಾರಂಭಿಸುವ ಮುನ್ನ ವೇದಿಕೆ ಮೇಲಿದ್ದ ಎಲ್ಲ ಸಚಿವರು ಶಾಸಕರ ಹೆಸರು ಪ್ರಸ್ತಾಪ ಮಾಡಿದರು. ಆದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೆಸರನ್ನು ಮರೆತರು. ಆಗ ಸಚಿವ ಬಿ.ಎಸ್‌.ಸುರೇಶ್‌ ಅವರು ಸನ್ನೆ ಮೂಲಕ ನೆನಪಿಸಿದರು. ಬಳಿಕ ಮುಖ್ಯಮಂತ್ರಿ ‘ಹ್ಞಾಂ ಡಿ.ಕೆ.ಶಿವಕುಮಾರ್‌ ಹೆಸರನ್ನೇ ಬಿಟ್ಟು ಬಿಟ್ನಲ್ರೀ’ ಎಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT