ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ; ಫಲಿತಾಂಶ ಸುಧಾರಣೆಗೆ ಸೋಲಿನ ವಿಶ್ಲೇಷಣೆ

ಸಿದ್ಧತೆ ಪೂರ್ಣ– ಕೋವಿಡ್‌ ಮಾರ್ಗಸೂಚಿಗಳ ಪಾಲನೆ
Last Updated 19 ಜುಲೈ 2021, 10:53 IST
ಅಕ್ಷರ ಗಾತ್ರ

ಗದಗ: ಜುಲೈ 19 ಮತ್ತು 22ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಜಿಲ್ಲೆಯ ಶಿಕ್ಷಣ ಇಲಾಖೆ ಅಗತ್ಯದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲೆಯ 16,216 ಮಂದಿ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯಲಿದ್ದಾರೆ.

ಕಳೆದ ವರ್ಷ 60 ಇದ್ದಿದ್ದು, ಕೋವಿಡ್‌–19 ಕಾರಣದಿಂದಾಗಿ ಈ ವರ್ಷ ಪರೀಕ್ಷಾ ಕೇಂದ್ರಗಳ ಸಂಖ್ಯೆ 103ಕ್ಕೆ ಏರಿಕೆಯಾಗಿದೆ. ಒಂದು ಸಾಮಾನ್ಯ ಕೊಠಡಿಯಲ್ಲಿ 12 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಡೆಸ್ಕ್‌ನ ನಡುವೆ ಆರು ಅಡಿ ಅಂತರ ಇರಲಿದ್ದು, ಒಂದು ಡೆಸ್ಕ್‌ಗೆ ಒಬ್ಬರು ವಿದ್ಯಾರ್ಥಿ ಇರಲಿದ್ದಾರೆ. ಈ ಬಾರಿ ಬಹುತೇಕವಾಗಿ ಮಕ್ಕಳು ಓದಿದ ಶಾಲೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.

ಸುರಕ್ಷತೆ ಆದ್ಯತೆ: ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳು ಸಾಧಾರಣ ಕಾಟನ್‌ ಬಟ್ಟೆ ಅಥವಾ ಸರ್ಜಿಕಲ್‌ ಮಾಸ್ಕ್‌ಗಳನ್ನು ಧರಿಸಿ ಬರುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಕುಡಿಯುವ ನೀರು ಮನೆಯಿಂದಲೇ ತರುವಂತೆ ತಿಳಿಸಲಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಕೋವಿಡ್‌ ಆರೈಕೆ ಕೇಂದ್ರದಲ್ಲೇ ಪರೀಕ್ಷೆ ಬರೆಸಲು ಕ್ರಮವಹಿಸಲಾಗಿದೆ. ಪ್ರತಿ ಕೇಂದ್ರದಲ್ಲೂ ಶಂಕಿತ ಮಕ್ಕಳಿಗಾಗಿ ಒಂದು ಕೊಠಡಿಯನ್ನು ಕಾಯ್ದಿರಿಸಲಾಗಿದೆ. ಅದೇರೀತಿ, ಮುಂಜಾಗ್ರತಾ ಕ್ರಮವಾಗಿ ಪ್ರತಿ ತಾಲ್ಲೂಕಿನಲ್ಲಿ ಎರಡು ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಸ್ಯಾನಿಟೈಸ್‌ ಮಾಡಲಾಗಿದೆ. ಕನಿಷ್ಠ ಒಂದು ಡೋಸ್‌ ಲಸಿಕೆ ಹಾಕಿಸಿಕೊಂಡಿರುವ ಸಿಬ್ಬಂದಿಯನ್ನು ಪರೀಕ್ಷಾ ಕೆಲಸಕ್ಕೆ ನಿಯೋಜಿಸಲಾಗಿದೆ.

ಬದಲಾದ ಪರೀಕ್ಷಾ ಪದ್ಧತಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿ ಬದಲಾಗಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗಿದೆ. ಮೊದಲ ಪರೀಕ್ಷೆ ಭಾಷೆಗಳಿಗೆ ಸಂಬಂಧಿಸಿದ್ದಾಗಿರಲಿದೆ. ಮೂರು ಭಾಷೆಗಳನ್ನು ಸೇರಿಸಿ ಒಂದು ಪ್ರಶ್ನೆಪತ್ರಿಕೆಇರಲಿದೆ. ಒಂದು ವಿಷಯಕ್ಕೆ 40ರಂತೆ ಒಟ್ಟು 120 ಪ್ರಶ್ನೆಗಳು ಇರಲಿದ್ದು, ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸಲು 3 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಅದೇರೀತಿಯಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ 120 ಪ್ರಶ್ನೆಗಳ ಪರೀಕ್ಷೆ ನಡಯಲಿದೆ. ಇವೆಲ್ಲವೂ ಬಹುಆಯ್ಕೆ ಪ್ರಶ್ನೆಗಳಾಗಿರುತ್ತವೆ.

‘10 ರಿಂದ 15 ಮಕ್ಕಳ ಚಿಕ್ಕ ಗುಂಪುಗಳನ್ನು ಮಾಡಿ ಅದಕ್ಕೆ ಒಬ್ಬೊಬ್ಬ ಶಿಕ್ಷಕರನ್ನು ಮೆಂಟರ್‌ ಆಗಿ ನೇಮಿಸಿದ್ದೆವು. ಸ್ವಯಂ ಕಲಿಕಾ ಸಾಮಗ್ರಿ ಕೊಟ್ಟು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಲಾಗಿದೆ. ಈ ಬಾರಿ ಮಕ್ಕಳಿಗೆ ಹೆಚ್ಚಿನ ಒತ್ತಡ ಹೇರಿಲ್ಲ. ಆದರೆ, ಅವರು ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದೇವೆ’ ಎಂದು ಡಿಡಿಪಿಐ ಬಸವಲಿಂಗಪ್ಪ ತಿಳಿಸಿದ್ದಾರೆ.

ಫಲಿತಾಂಶ ಸುಧಾರಣೆಗೆ ಕ್ರಮ
‘ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಆಗಲಿಕ್ಕೆ ಕಾರಣ ಏನು ಎಂಬುದರ ವಿಮರ್ಶೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಫಲಿತಾಂಶ ಕಡಿಮೆ ಆಗಲು ಆಯಾ ಶಾಲೆಗಳ ದೌರ್ಬಲ್ಯಗಳನ್ನು ತಿಳಿದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ತಿಳಿಸಿದ್ದಾರೆ.

‘ಈ ಬಾರಿ ಫಲಿತಾಂಶ ಸುಧಾರಣೆಗೆ ನಾವು ಗೆಲುವಿನ ವಿಶ್ಲೇಷಣೆ ಬದಲು ಸೋಲಿಗೆ ಕಾರಣವಾಗಿರುವ ಅಂಶಗಳ ಕುರಿತು ವಿಶ್ಲೇಷಣೆ ಮಾಡಿದ್ದೇವೆ. ಒಂದು ಶಾಲೆ ಕಳೆದ ವರ್ಷ ಶೇ 60 ಫಲಿತಾಂಶ ಪಡೆದಿದ್ದರೆ, ಉಳಿದ ಶೇ 40 ಫಲಿತಾಂಶ ಯಾಕೆ ಬರಲಿಲ್ಲ ಎಂದು ವಿಶ್ಲೇಷಣೆ ಮಾಡುವಂತೆ ಸೂಚಿಸಲಾಗಿದೆ’ ಎಂದು ಅವರು ಹೇಳಿದರು.

ಹೊಸ ಪರೀಕ್ಷಾ ಪದ್ಧತಿ ಬದಲಾವಣೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದೇವೆ. ಒಎಂಆರ್‌ ಶೀಟ್‌ನಲ್ಲೂ ತರಬೇತಿ ನೀಡಿದ್ದೇವೆ. ನಿರಂತರವಾಗಿ ಮಕ್ಕಳಿಗೆ ತರಗತಿಗಳನ್ನು ನಡೆಸಿ, ಪರೀಕ್ಷೆಗೆ ಸಿದ್ಧಗೊಳಿಸಿದ್ದೇವೆ
ಬಸವಲಿಂಗಪ್ಪ ಜಿ.ಎಂ., ಡಿಡಿಪಿಐ

ಅಂಕಿ ಅಂಶ
16,216:
ಪರೀಕ್ಷೆ ಬರೆಯಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ
103:ಒಟ್ಟು ಪರೀಕ್ಷಾ ಕೇಂದ್ರಗಳು
3,168:ಪರೀಕ್ಷೆ ನಿರ್ವಹಣೆಗೆ ನೇಮಕಗೊಂಡಿರುವ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT