ಸಮ್ಮಿಶ್ರ ಕೃಷಿಗೆ ಒಲಿದ ಪದವೀಧರ ಯುವಕ

ಭಾನುವಾರ, ಜೂಲೈ 21, 2019
28 °C
ವಿವಿಧ ಬಗೆಯ ಹಣ್ಣಿನ ಮರಗಳ ಜೊತೆ ಅಂತರ ಬೆಳೆಯಾಗಿ ಶೇಂಗಾ, ತರಕಾರಿ ಬೆಳೆದ ರೈತ

ಸಮ್ಮಿಶ್ರ ಕೃಷಿಗೆ ಒಲಿದ ಪದವೀಧರ ಯುವಕ

Published:
Updated:
Prajavani

ಲಕ್ಷ್ಮೇಶ್ವರ: ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು’ ಎಂಬ ನಾಣ್ಣುಡಿಯಂತೆ ಬಿಎ ಪದವಿವರೆಗೂ ಓದಿದ್ದರೂ, ಸಹ ಲಕ್ಷ್ಮೇಶ್ವರದ ಯುವ ರೈತ ಮೋಹನ ಬಸವಣ್ಣೆಪ್ಪ ನಂದೆಣ್ಣವರ ಅವರಿಗೆ ಒಕ್ಕಲುತನದ ಮೇಲೆ ಬಹಳ ಪ್ರೀತಿ. ಸಮೀಪದ ಹರದಗಟ್ಟಿ-ಕೊಂಡಿಕೊಪ್ಪ ಗ್ರಾಮಗಳ ಮಧ್ಯದಲ್ಲಿ ಮೂರು ಎಕರೆ ತೋಟ ಮಾಡುತ್ತಿದ್ದು ಅಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತ ಸಮ್ಮಿಶ್ರ ಕೃಷಿಯಲ್ಲಿ ನಿರತರಾಗಿದ್ದಾರೆ. ಅದರಲ್ಲೇ ಸಮಾಧಾನ ಕಂಡಿದ್ದಾರೆ ಕೂಡಾ.

ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿರುವ ಮೋಹನರ ತಂದೆ ಬಸವಣ್ಣೆಪ್ಪ ಕೂಡಾ ಒಕ್ಕಲುತನದಲ್ಲಿ ಖುಷಿ ಕಂಡವರು. ಹಾಗಾಗಿಯೇ ಅವರೇ ಮಗನಿಗೆ ತೋಟ ಕೊಡಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮೋಹನ ಸಮ್ಮಿಶ್ರ ಕೃಷಿಯಲ್ಲಿ ತೊಡಗಿಕೊಂಡಿದ್ದು, ಹಲವು ಬಗೆಯ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ.

100 ಆಪೂಸು ಮಾವಿನ ಗಿಡಗಳೊಂದಿಗೆ 250 ಸಾಗವಾನಿ, 50 ತೆಂಗಿನ ಮರ, 70 ಚಿಕ್ಕು, 80 ಪೇರಲ ಹಾಗೂ 45 ಕರಿಬೇವು ಗಿಡಗಳನ್ನು ಬೆಳೆಸಿದ್ದಾರೆ. ಇದಕ್ಕಾಗಿ ಅಂದಾಜು ₹5-6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಎರಡು ಕೊಳವೆ ಬಾವಿಗಳಿಂದ ಬೆಳೆಗಳಿಗೆ ನೀರುಣಿಸುತ್ತಾರೆ.

’ಪ್ರತಿವರ್ಷ ಮಾವಿನ ಫಸಲಿನಿಂದ ₹80 ಸಾವಿರ, ಚಿಕ್ಕು ಗಿಡಗಳಿಂದ ₹30 ಸಾವಿರ, ಕರಿಬೇವಿನಿಂದ ₹12 ಸಾವಿರ ಹಾಗೂ ತೆಂಗಿನ ಮರಗಳಿಂದ ₹20 ಸಾವಿರ ರೂಪಾಯಿ ವರಮಾನ ಪಡೆಯುತ್ತಿದ್ದೇನೆ‘ ಎಂದು ಅವರು ಹೇಳುತ್ತಾರೆ.

ಇನ್ನು ತೋಟದಲ್ಲಿ ಅಂತರ ಬೆಳೆಯಾಗಿ ಶೇಂಗಾ, ತರಕಾರಿ ಬೆಳೆದು ಅದರಿಂದಲೂ ಉತ್ತಮ ಆದಾಯ ಗಳಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶದ ಫೈಟರ್ ಜಾತಿಗೆ ಸೇರಿದ 100 ಕೋಳಿಗಳನ್ನು ಸಾಕಿದ್ದಾರೆ. ಮಾರುಕಟ್ಟೆಯಲ್ಲಿ ಇವುಗಳಿಗೆ ಭಾರಿ ಬೇಡಿಕೆ ಮತ್ತು ಬೆಲೆ ಇದ್ದು, ಇವುಗಳಿಂದಲೂ ಮೋಹನರಿಗೆ ಕೈ ತುಂಬಾ ಹಣ ಬರುತ್ತಿದೆ. ಅಲ್ಲದೆ ಎರಡು ಟಗರುಗಳನ್ನು ಸಾಕುತ್ತಿದ್ದಾರೆ. ಎತ್ತುಗಳೆಂದರೆ ಇವರಿಗೆ ವಿಶೇಷ ಪ್ರೇಮ. ತೋಟದಲ್ಲಿ ಎರಡು ಎತ್ತುಗಳನ್ನು ಸಾಕಿದ್ದು, ದಿನಾಲೂ ತಪ್ಪದೆ ತಾವೇ ಅವುಗಳ ಚಾಕರಿ ಮಾಡುತ್ತಾರೆ.

‘ಕೆಲಸಕ್ಕೆ ಬಿಡುವು ಸಿಕ್ಕಾಗ ಮಗನ ತೋಟಕ್ಕೆ ಬಂದು ಹೋಗುತ್ತೇನೆ. ಇಲ್ಲಿಗೆ ಬಂದಾಗ ಮನಸ್ಸು ಶಾಂತವಾಗುತ್ತದೆ’ ಎಂದು ಮೋಹನ ಅವರ ತಂದೆ ಬಸವಣ್ಣೆಪ್ಪ ನಂದೆಣ್ಣವರ ಹರ್ಷ ವ್ಯಕ್ತಪಡಿಸುತ್ತಾರೆ.

*
ನನಗೆ ಒಕ್ಕಲುತನ ಮಾಡುವುದೆಂದರೆ ಬಹಳ ಖುಷಿ. ದಿನವೂ ತೋಟದಲ್ಲಿ ಕೆಲಸ ಮಾಡುತ್ತೇನೆ
– ಮೋಹನ, ಯುವ ರೈತ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !