ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಲಪತಿ ಹುದ್ದೆ ಅಧಿಕಾರವಲ್ಲ; ಜವಾಬ್ದಾರಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿ.ವಿ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ಅಭಿಮತ
Published 25 ಮೇ 2024, 14:20 IST
Last Updated 25 ಮೇ 2024, 14:20 IST
ಅಕ್ಷರ ಗಾತ್ರ

ಗದಗ: ‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿಯಾಗಿ ವಿ.ವಿಯನ್ನು ಕಳೆದ ನಾಲ್ಕು ವರ್ಷಗಳಲ್ಲಿ ಗುಣಾತ್ಮಕವಾಗಿ ನಾಲ್ಕು ಪಟ್ಟು ಹೆಚ್ಚಿಗೆ ಬೆಳೆಸಿದ ತೃಪ್ತಿ ಇದೆ’ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌. ಚಟಪಲ್ಲಿ ತಿಳಿಸಿದರು.

ನಾಗಾವಿ ಸಮೀಪದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ವಿ.ವಿಯಲ್ಲಿ ಕೆಲಸ ಮಾಡುವ 200 ಮಂದಿಯ ಪರಿಶ್ರಮದಿಂದಾಗಿ ಇಂದು 10 ವರ್ಷಗಳ ಕೆಲಸ ಏಳು ವರ್ಷಗಳಲ್ಲಿ ಆಗಿದೆ. ವಿ.ವಿಯು ಈ ಮಟ್ಟಕ್ಕೆ ಬೆಳೆಯಲು ಎಲ್ಲರ ಪರಿಶ್ರಮ, ತಂಡ ಮನೋಭಾವ ಮತ್ತು ಪರಸ್ಪರಾವಂಬಲನೆಯನ್ನು ಜಾಗೃತಿಗೊಳಿಸಿದ್ದೇ ಕಾರಣ’ ಎಂದು ತಿಳಿಸಿದರು.

‘ನಾಲ್ಕು ವರ್ಷಗಳ ಹಿಂದೆ ಇಲ್ಲಿಗೆ ಬಂದಾಗ ಕುಲಪತಿ ಸ್ಥಾನವನ್ನು ಅಧಿಕಾರ ಎಂದು ಭಾವಿಸಲಿಲ್ಲ. ಜವಾಬ್ದಾರಿ ಎಂದು ಪರಿಗಣಿಸಿದೆ. ವಿ.ವಿ ಸ್ಥಾಪನೆಯ ಉದ್ದೇಶ, ಗುರಿಗೆ ಅನುಗುಣವಾಗಿ ಕಾರ್ಯಯೋಜನೆಗಳನ್ನು ರೂಪಿಸಿ, ಅದರ ಬೆಳವಣಿಗೆಗೆ ಶ್ರಮಿಸಿದೆ’ ಎಂದು ಹೇಳಿದರು.

‘ವಿಶ್ವವಿದ್ಯಾಲಯ ಸ್ಥಾಪನೆಯ ಕನಸು ಬಿತ್ತಿದ ಸಚಿವ ಎಚ್‌.ಕೆ.ಪಾಟೀಲರು, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಒಂದು ದಿನವೂ ನಮ್ಮ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಕುಲಪತಿ ಅಂದರೇನು ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿ, ನನ್ನನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡರು’ ಎಂದರು.

ಕುಲಪತಿಯಾಗಿ ಕೆಲಸ ಮಾಡಲು ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಸಿ.ಸಿ.ಪಾಟೀಲ, ಕೆ.ಎಸ್‌.ಈಶ್ವರಪ್ಪ ಅವರನ್ನು ಸ್ಮರಿಸಿದ ಅವರು, ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಮತ್ತು ಸಂತ ರಾಜಕಾರಣಿ ಡಿ.ಆರ್‌.ಪಾಟೀಲ ಗದುಗಿನ ನೆಲದಲ್ಲಿ ನನಗೆ ಸ್ಫೂರ್ತಿ ತುಂಬಿದವರು ಎಂದು ನೆನಪಿಸಿಕೊಂಡರು.

ನಿವೃತ್ತ ಐಎಎಸ್ ಅಧಿಕಾರಿ ಡಾ. ಅಶೋಕ್ ದಳವಾಯಿ ಮಾತನಾಡಿ, ‘ವಿಚಾರ, ಸಿದ್ಧಾಂತಗಳು ಬೇರೆ ಬೇರೆ ಆದರೂ ಗ್ರಾಮೀಣಾಭಿವೃದ್ಧಿಯ ಗುರಿ, ಆಶಯಕ್ಕೆ ತಕ್ಕಂತೆ ವಿ.ವಿಯನ್ನು ಬೆಳೆಸಿದ ಕುಲಪತಿ ಪ್ರೊ.ವಿಷ್ಣುಕಾಂತ ಚಟಪಲ್ಲಿ ಅವರ ಕಾರ್ಯದಕ್ಷತೆ ಸ್ಮರಣೀಯ. ನಾನು ಅವರನ್ನು ಭೇಟಿಯಾದ ಪ್ರತಿ ಸಂದರ್ಭದಲ್ಲೂ  ವಿ.ವಿಯ ಬೆಳವಣಿಗೆ ಬಗ್ಗೆ ಚರ್ಚಿಸುತ್ತಿದ್ದರು. ನಮ್ಮದು ಅತ್ಯಂತ ನಿಕಟ ಸಂಬಂಧ’ ಎಂದು ತಿಳಿಸಿದರು.

ನಿಕಟಪೂರ್ವ ಕುಲಸಚಿವ ಪ್ರೊ. ಬಸವರಾಜ್ ಎಲ್. ಲಕ್ಕಣ್ಣವರ, ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ಅವರ ಜತೆಗಿನ ತಮ್ಮ ಒಡನಾಟ, ಅನುಭವಗಳನ್ನು ರಸವತ್ತಾಗಿ ವಿವರಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌., ಶಿಕ್ಷಣ ತಜ್ಞೆ ವಂದಿತಾ ಚಟಪಲ್ಲಿ, ಜಾನಪದ ವಿವಿ ಕುಲಪತಿ ಪ್ರೊ. ಟಿ.ಎಂ.ಭಾಸ್ಕರ್‌, ಪ್ರಗತಿಪರ ರೈತ ಅಬ್ದುಲ್ ಖಾದರ್ ನಡಕಟ್ಟಿನ ಮಾತನಾಡಿದರು.

ಕುಲಸಚಿವ ಪ್ರೊ. ಸುರೇಶ ವಿ.ನಾಡಗೌಡರ, ಪ್ರಶಾಂತ ಜೆ.ಸಿ. ಹಾಗೂ ರೈತರು, ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT