ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣಾಭಿವೃದ್ಧಿ ವಿ.ವಿ ನಾಲ್ಕನೇ ಘಟಿಕೋತ್ಸವ

244 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ; ಚಿನ್ನದ ಪದಕ ವಿಜೇತರಲ್ಲಿ ವಿದ್ಯಾರ್ಥಿನಿಯರ ಮೇಲುಗೈ
Published 5 ಮಾರ್ಚ್ 2024, 15:37 IST
Last Updated 5 ಮಾರ್ಚ್ 2024, 15:37 IST
ಅಕ್ಷರ ಗಾತ್ರ

ಗದಗ: ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನ  ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವ ಸಮಾರಂಭ ಬುಧವಾರ ಬೆಳಿಗ್ಗೆ 11.30ಕ್ಕೆ ನಡೆಯಲಿದೆ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗ್ರಾಮೀಣಾಭಿವೃದ್ಧಿಯೇ ನಮ್ಮ ಸಂಕಲ್ಪ ಘೋಷವಾಕ್ಯದ ಅಡಿ ನಡೆಯುವ ನಾಲ್ಕನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಗ್ರಾಮೀಣಾಭಿವೃದ್ಧಿ  ಸಚಿವ ಪ್ರಿಯಾಂಕ್‌ ಖರ್ಗೆ, ಕೇಂದ್ರ ಪಂಚಾಯತ್‌ರಾಜ್ ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಟಿ.ಆರ್.ರಘುನಂದನ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ 10 ವಿವಿಧ ಸ್ನಾತಕೋತ್ತರ ಕಾರ್ಯಕ್ರಮಗಳ 239 ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ ಕಾರ್ಯಕ್ರಮದ ಐವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪದವಿ ಪ್ರದಾನ ಮಾಡಲಾಗುವುದು. ಅದರಲ್ಲಿ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ 11 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಎರಡು ಮತ್ತು ಮೂರನೇ ರ‍್ಯಾಂಕ್‌ಗಳಿಸಿದ ತಲಾ 10 ಮಂದಿ ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.

244 ಮಂದಿ ವಿದ್ಯಾರ್ಥಿಗಳ ಪೈಕಿ 121 ಮಂದಿ ಯುವಕರು, 123 ಮಂದಿ ಯುವತಿಯರು ಪದವಿ ಪಡೆದುಕೊಳ್ಳಲಿದ್ದಾರೆ. ಎಂಎಸ್‌ಸಿ, ಎಂಪಿಎಚ್‌ ಹಾಗೂ ಎಂಬಿಎ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದಿರುವ ವಿದ್ಯಾರ್ಥಿನಿಯರೇ ಅತ್ಯಧಿಕ ಅಂಕ ಗಳಿಸುವ ಮೂಲಕ ಮೊದಲ ಮೂರು ಸ್ಥಾನ ಗಳಿಸಿದ್ದಾರೆ ಎಂದು ತಿಳಿಸಿದರು.

ಪಂಜಾಬ್ ಪ್ರಾಂತ್ಯದಿಂದ ಕರ್ನಾಟಕಕ್ಕೆ ಬಂದು ಕನ್ನಡ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಅಚ್ಚ ಕನ್ನಡಿಗರಾಗಿ ಗುರುತಿಸಿಕೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರದ ವಿಕೇಂದ್ರೀಕರಣ ಹಾಗೂ ಅದರ ನೀತಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಿ. ನಾರಾಯಣಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್‌ ಹಾಗೂ ‘ಗ್ರಾಮೀಣಾಭಿವೃದ್ಧಿ ಚೇತನ’ ಬಿರುದು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಕುಲಸಚಿವ ಡಾ. ಸುರೇಶ ನಾಡಗೌಡರ, ವಾರ್ತಾಧಿಕಾರಿ ವಸಂತ ಬಿ. ಮಡ್ಲೂರ ಇದ್ದರು.

ಘಟಿಕೋತ್ಸವ ಎಂಬುದು ವಿದ್ಯಾರ್ಥಿಗಳಿಗೆ ಹಬ್ಬವಿದ್ದಂತೆ. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಲವು ಪದವಿ ಪ್ರದಾನ ಮಾಡುವ ಮೂಲಕ ವಿದ್ಯಾರ್ಥಿಗಳ ಸಂಭ್ರಮ ಇಮ್ಮಡಿಗೊಳಿಸಲಿದೆ

-ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ಕುಲಪತಿ

11 ಮಂದಿಗೆ ಚಿನ್ನದ ಪದಕ ಪ್ರದಾನ

ಬುಧವಾರ ನಡೆಯುವ ಘಟಿಕೋತ್ಸವ ಸಮಾರಂಭದಲ್ಲಿ 10 ವಿವಿಧ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ 11 ಮಂದಿ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಚಿನ್ನದ ಪದಕ ಪ್ರದಾನ ಮಾಡುವರು. 11 ಮಂದಿ ಚಿನ್ನದ ಪದಕ ವಿಜೇತರಲ್ಲಿ ಏಳು ಮಂದಿ ವಿದ್ಯಾರ್ಥಿನಿಯರು ನಾಲ್ಕು ಮಂದಿ ವಿದ್ಯಾರ್ಥಿಗಳು ಇದ್ದಾರೆ.  ಎಂಬಿಎ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದ ಓಜಸ್ವಿ ಮಲ್ಲಾಡದ ಎಂಎ ಆರ್‌ಡಿಪಿಆರ್‌ ವಿಭಾಗದಲ್ಲಿ ರ‍್ಯಾಂಕ್‌ ಪಡೆದ ಲಿಂಗರಾಜು ಎಚ್‌.ಎಂ. ಎಂಎ ಸಾರ್ವಜನಿಕ ಆಡಳಿತದಲ್ಲಿ ಭೀಮಪ್ಪ ಚಲವಾದಿ ಎಂಎಸ್‌ಸಿ ಜಿಯೊಇನ್ಫಾರ್ಮಾಟಿಕ್ಸ್‌ ವಿಭಾಗದ ಯಲ್ಲಲಿಂಗ ಹೊಸಮನಿ ಎಂಎಸ್‌ಸಿ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ನಿಶಾ ಎಂ. ಎಂಪಿಎಚ್‌ ವಿಭಾಗದಲ್ಲಿ ಶರಾನ್‌ ಅನಾ ಥಾಮಸ್‌ ಎಂಎಸ್‌ಡಬ್ಲ್ಯು ವಿಭಾಗದಲ್ಲಿ ಅಕ್ಷತಾ ಶನಿಕೊಪ್ಪ ಮತ್ತು ಕೀರ್ತಿ ಗಮನಗಟ್ಟಿ ಎಂಎ ಅಭಿವೃದ್ಧಿ ಅರ್ಥಶಾಸ್ತ್ರ ವಿಭಾಗದಲ್ಲಿ ಜಗದೀಶ್‌ ಎನ್‌.ಬಳಿಗಾರ್‌ ಎಂಕಾಂ ವಿಭಾಗದಲ್ಲಿ ಲತಾ ಕಡಾರ್‌ ಎಂಎಸ್‌ಸಿ ಕಂಪ್ಯೂಟರ್‌ ಸೈನ್ಸ್‌ ವಿಣಾಗದಲ್ಲಿ ಪವಿತ್ರಾ ಶೇಟ್‌ ಮೊದಲ ರ‍್ಯಾಂಕ್‌ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT