ಮಂಗಳವಾರ, ಸೆಪ್ಟೆಂಬರ್ 22, 2020
20 °C
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಭರವಸೆ

ಲಿಂಗಧಾಳ: ಗಟಾರ ನಿರ್ಮಾಣಕ್ಕೆ ₹ 50 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಲಿಂಗಧಾಳ ಗ್ರಾಮದಲ್ಲಿ ಗಟಾರ ನಿರ್ಮಾಣಕ್ಕೆ ಸರ್ಕಾರದಿಂದ ₹ 50 ಲಕ್ಷ ಹಾಗೂ ಪ್ರಾಥಮಿಕ ಶಾಲಾ ಕೊಠಡಿಗಳ ದುರಸ್ತಿಗೆ ₹5 ಲಕ್ಷ ನೀಡುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.

ತಾಲ್ಲೂಕಿನ ಲಿಂಗಧಾಳ ಸರ್ಕಾರಿ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್, ಸಮವಸ್ತ್ರ ಹಾಗೂ ದಿನಚರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಲಿಂಗಧಾಳ ಕೆರೆ ಪೂರ್ವಜರು ಗ್ರಾಮಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಅದಕ್ಕೀಗ ಗಟಾರದ ನೀರು ಹರಿಸುತ್ತಿರುವುದು ಖೇದಕರ. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಪುನಶ್ಚೇತನಕ್ಕೆ ಗ್ರಾಮ ಪಂಚಾಯ್ತಿ ಮುಂದಾಗಬೇಕು ಎಂದರು.

ಪಕ್ಷ ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ತದನಂತರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪ್ರಥಮಾದ್ಯತೆ ನೀಡುವುದೇ ಪ್ರತಿಯೊಬ್ಬ ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಶಿಕ್ಷಕರು ಕೇವಲ ಅಂಕ ಗಳಿಕೆಗೆ ಶಿಕ್ಷಣ ನೀಡದೇ ಮೌಲ್ಯಾಧಾರಿತ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಸಾರ್ವಜನಿಕ ಶಿಕ್ಷಣ ಇಲಾಖೆಯು ಪಟ್ಟಣದ ಎಲ್ಲಾ ಶಾಲೆಗಳಿಗೂ ಅಗತ್ಯ ಸೌಲಭ್ಯ ಕಲ್ಪಿಸಿದೆ. ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕೂಡ ಕಂಪ್ಯೂಟರ್ ಒದಗಿಸುತ್ತಿದೆ ಎಂದರು.

ಕ್ಷೇತ್ರ ವ್ಯಾಪ್ತಿಯಲ್ಲಿ 2,080 ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಸೈಕಲ್‍ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಸರ್ಕಾರಿ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮದ ವತಿಯಿಂದ ಸಚಿವರನ್ನು ಸನ್ಮಾನಿಸಿ, ಮನವಿ ಸಲ್ಲಿಸಲಾಯಿತು.

ಲಿಂಗಧಾಳದ ಪ್ರಾಥಮಿಕ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕ ಸಂಘದ ಪದಾಧಿಕಾರಿಗಳು ನೆರೆ ಪೀಡಿತ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ₹5 ಸಾವಿರ ಮೊತ್ತದ ಚೆಕ್‍ನ್ನು ಸಚಿವರಿಗೆ ನೀಡಿದರು.

ಸಮಾರಂಭದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯೆ ವೀರಮ್ಮ ಜ್ಞಾನೋಪಂಥ್‌, ಎಸ್.ಡಿ.ಎಂ.ಸಿ. ಅಧ್ಯಕ್ಷ ವಿ.ಎಸ್. ಹೊಸಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ, ಗದಗ ತಹಶೀಲ್ದಾರ್‌ ಶ್ರೀನಿವಾಸ ಮೂರ್ತಿ, ಶಾಲೆಯ ಮುಖ್ಯ ಶಿಕ್ಷಕಿ ಎಂ.ಎಂ. ಕರ್ಜಗಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಪ್ರದೀಪ ಕುಮಾರ, ಜ್ಞಾನೋಪಂಥ್‌, ಮಂಜುನಾಥ ದಾಟನಾಳ, ಧರ್ಮಪ್ಪ ಚಿಕ್ಕದಾಳ, ರೇಣುಕಾ ದ್ಯಾಮಣ್ಣವರ, ಗ್ರಾಮದ ಹಿರಿಯರಾದ ಯಲ್ಲಪ್ಪ ಚಿಕ್ಕದಾಳ, ಶಶಿಧರ ಹುಬ್ಬಳ್ಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.