ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲೆಯಲ್ಲಿ ನಾಳೆಯಿಂದ 5 ದಿನ ಸಂಪೂರ್ಣ ಲಾಕ್‌ಡೌನ್‌: ಸಚಿವ ಸಿ.ಸಿ. ಪಾಟೀಲ

ಜಿಲ್ಲೆಯಲ್ಲಿ ಸೋಂಕು ಪ್ರಮಾಣ ಇಳಿಕೆಯಾಗದಿದ್ದರೆ ಲಾಡ್‌ಡೌನ್‌ ವಿಸ್ತರಣೆ
Last Updated 26 ಮೇ 2021, 3:22 IST
ಅಕ್ಷರ ಗಾತ್ರ

ಗದಗ: ‘ಮೇ 27ರ ಬೆಳಿಗ್ಗೆ 10ರಿಂದ ಜೂನ್‌ 1ರ ಬೆಳಿಗ್ಗೆ 6ರವರೆಗೆ ಜಿಲ್ಲೆಯಾದ್ಯಂತ ಕಠಿಣ ಲಾಕ್‌ಡೌನ್‌ ಜಾರಿಯಾಗಲಿದ್ದು, ಸೋಂಕು ಪ್ರಕರಣಗಳಲ್ಲಿ ಇಳಿಕೆ ಕಂಡುಬರದಿದ್ದರೆ ಲಾಕ್‌ಡೌನ್‌ ವಿಸ್ತರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ವೈದ್ಯರು ಹಾಗೂ ಆರೋಗ್ಯ ಇಲಾಖೆ ಶ್ರಮದಿಂದಾಗಿ ಮೂರು ದಿನಗಳಿಂದ ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಹಾಗಂತ, ಆಸ್ಪತ್ರೆಗೆ ಬರುವವರ ಸಂಖ್ಯೆ ಕಡಿಮೆ ಆಗಿಲ್ಲ’ ಎಂದರು.

‘ಧಾರವಾಡ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ಈಗಾಗಲೇ ಸಂಪೂರ್ಣ ಲಾಕ್‌ಡೌನ್‌ ಘೋಷಣೆಯಾಗಿದ್ದು, ಅಲ್ಲಿನ ಜನರು ಸಾಮಗ್ರಿ ಖರೀದಿಗೆಂದು ಜಿಲ್ಲೆಯ ಗಡಿದಾಟಿ ವಿವಿಧ ಪಟ್ಟಣಗಳಿಗೆ ಬರುತ್ತಿದ್ದಾರೆ. ಇದರಿಂದಾಗಿ, ಸೋಂಕು ಹೆಚ್ಚುವ ಭೀತಿ ಎದುರಾಗಿದೆ. ಈ ಕಾರಣದಿಂದ ಐದು ದಿನಗಳ ಕಾಲ ಜಿಲ್ಲೆಯನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುವುದು’‍ ಎಂದು ತಿಳಿಸಿದರು.

‘ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆ ಹಾಗೂ ಖಾಸಗಿ ಕ್ಲಿನಿಕ್‌ ನಡೆಸುವ ವೈದ್ಯರು ಕೋವಿಡ್‌ ಲಕ್ಷಣ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಬೇಕು. ಆರಂಭದಲ್ಲೇ ಪತ್ತೆ ಹಚ್ಚಿದರೆ ಸೋಂಕು ಹರಡುವುದು ಹಾಗೂ ಸಾವಿನ ಸಾಧ್ಯತೆಯನ್ನು ತಡೆಗಟ್ಟಬಹುದು. ಈ ಕಾರಣದಿಂದ ಎಲ್ಲ ವೈದ್ಯರೂ ಜಾಗರೂಕರಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದರು.

‘ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಮುಲಾಜಿಲ್ಲದೇ ದಂಡ ವಿಧಿಸಲಾಗುವುದು. ಅಂತರ ಜಿಲ್ಲೆ ಓಡಾಟಕ್ಕೆ ನಿರ್ಬಂಧ ಇರಲಿದೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು, ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್‌. ಹಾಗೂ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟರ ಇದ್ದರು.

ಮನೆ ಬಾಗಿಲಿಗೆ ದಿನಸಿ

‘ಐದು ದಿನಗಳ ಕಠಿಣ ಲಾಕ್‌ಡೌನ್‌ ಸಂದರ್ಭದಲ್ಲಿ ದಿನಸಿ ಅಂಗಡಿಗಳನ್ನು ತೆರೆಯುವಂತಿಲ್ಲ. ಅಗತ್ಯ ವಸ್ತುಗಳ
ಹೋಂ ಡೆಲಿವರಿಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ಸಿ.ಸಿ.‍ ಪಾಟೀಲ ತಿಳಿಸಿದರು.

‘ಹಾಲು, ಮೊಸರು ಖರೀದಿಗೆ ಪ್ರತಿದಿನ ಬೆಳಿಗ್ಗೆ 6ರಿಂದ 8ರವರೆಗೆ ಅವಕಾಶಇರಲಿದೆ. ತರಕಾರಿ, ಹೂವು, ಹಣ್ಣುಗಳನ್ನು ನಿಂತು ಮಾರಲು ಅವಕಾಶವಿಲ್ಲ. ವ್ಯಾಪಾರಿಗಳು ತಳ್ಳುಗಾಡಿಗಳ ಮೂಲಕ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಹೋಟೆಲ್‌, ಮದ್ಯ, ಮಾಂಸದ ಅಂಗಡಿಗೂ ನಿರ್ಬಂಧ

ನಗರ, ಪಟ್ಟಣ ಹಾಗೂ ಗ್ರಾಮೀಣ ಪ‍್ರದೇಶಗಳಲ್ಲಿ ಇರುವ ಹೋಟೆಲ್‌ಗಳನ್ನು ತೆರೆಯುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ. ಮೀನು, ಮಾಂಸ ಮಾರಾಟದ ಅಂಗಡಿಗಳು ಕೂಡ ಐದು ದಿನ ಬಂದ್‌ ಆಗಿರುತ್ತವೆ.

ಈ ಬಾರಿ ಹಳ್ಳಿಗಳ ಮೇಲೆ ಹೆಚ್ಚು ನಿಗಾ ವಹಿಸಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಲಾಕ್‌ಡೌನ್‌ ನಿಯಮಗಳು ಉಲ್ಲಂಘನೆ ಆಗಿದ್ದು ಕಂಡು ಬಂದರೆ ಪಿಡಿಒ, ಕಾರ್ಯದರ್ಶಿಯನ್ನೇ ನೇರ ಹೊಣೆ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಬ್ಯಾಂಕ್‌ ಸೇವೆಯೂ ಇಲ್ಲ

ಬ್ಯಾಂಕ್‌, ಅಂಚೆ ಕಚೇರಿ ಸಿಬ್ಬಂದಿ ಕೆಲಸ ನಿರ್ವಹಿಸಲು ಅವಕಾಶ ಇದೆ. ಆದರೆ, ಶಾಖೆಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡುವಂತಿಲ್ಲ. ಪೂರ್ವ ನಿಗದಿತ ಮದುವೆ ನಡೆಸಲು ತಹಶೀಲ್ದಾರ್‌ ಅನುಮತಿ ಪಡೆಯುವುದು ಕಡ್ಡಾಯ. 50 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಜಾತ್ರೆ, ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶ ಇರುವುದಿಲ್ಲ.

***

ಜನರ ಒಳಿತಿಗಾಗಿಯೇ ಕಠಿಣ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕರು ಇದನ್ನು ಅರಿತು ಸಹಕರಿಸಬೇಕು.

-ಸಿ.ಸಿ. ಪಾಟೀಲ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT