ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಲೋಕಸಭಾ: ಚುನಾವಣಾ ಪ್ರಚಾರ– ‘ಕಮಲ’ ಮುಂದೆ; ‘ಕೈ’ ಹಿಂದೆ

ಒಂದು ಸುತ್ತಿನ ಪ್ರಚಾರ ಮುಗಿಸಿದ ಬೊಮ್ಮಾಯಿ; ಜೆಡಿಎಸ್‌ ನಾಯಕರಿಗಿಲ್ಲ ಆಹ್ವಾನ
Published 20 ಮಾರ್ಚ್ 2024, 6:57 IST
Last Updated 20 ಮಾರ್ಚ್ 2024, 6:57 IST
ಅಕ್ಷರ ಗಾತ್ರ

ಗದಗ: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಹಾವೇರಿ ಗದಗ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದೆ. ಚುನಾವಣೆಗೆ ದಿನಾಂಕ ನಿಗದಿಯಾದರೂ ಕ್ಷೇತ್ರದಲ್ಲಿ ಅದರ ಕಾವು ಮಾತ್ರ ಇನ್ನೂ ಏರಿಲ್ಲ.

ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಕಾಂಗ್ರೆಸ್‌ ಪಕ್ಷವು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಅಭ್ಯರ್ಥಿಯನ್ನಾಗಿ ಅಖೈರುಗೊಳಿಸಿತ್ತು. ಮಾರ್ಚ್‌ 8ರಂದೇ ಹೆಸರು ಘೋಷಣೆಯಾದರೂ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಅವರು ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗದಗ, ರೋಣ ಮತ್ತು ಶಿರಹಟ್ಟಿ ವಿಧಾನಸಭಾ ಕ್ಷೇತ್ರಗಳಿಗೆ ಇದುವರೆಗೆ ಕಾಲಿಟ್ಟಿಲ್ಲ. ಅವರು ಸದ್ಯ ಹಾವೇರಿ ಜಿಲ್ಲೆಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಮನೆ ಮನೆಗೆ ಭೇಟಿ ನೀಡಿ ಜನಸಂಪರ್ಕ ಮಾಡುತ್ತಿದ್ದಾರೆ. ಜತೆಗೆ ಲಿಂಗಾಯತ ಮಠಗಳ ಸ್ವಾಮೀಜಿಗಳನ್ನು ಭೇಟಿಯಾಗಿ, ಸಮುದಾಯದ ಜನರ ಮತಾಶೀರ್ವಾದ ದೊರಕಿಸಿಕೊಡುವಂತೆ ಬೇಡುತ್ತಿದ್ದಾರೆ.

ಇತ್ತ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಈಗಾಗಲೇ ಹಾವೇರಿ ಲೋಕಸಭಾ ವ್ಯಾಪ್ತಿಗೆ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರ ಮಾಡಿ ಮುಗಿಸಿದ್ದಾರೆ. ಮಾರ್ಚ್‌ 18ರಂದು ಜಿಲ್ಲೆಯ ಗಜೇಂದ್ರಗಡ, ಗದಗ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಸಿದ್ದಾರೆ. ಲಕ್ಷ್ಮೇಶ್ವರದಲ್ಲಿ ಭರ್ಜರಿ ರೋಡ್‌ ಶೋ ಕೂಡ ಮಾಡಿದ್ದಾರೆ. ಇಷ್ಟೇ ಅಲ್ಲದೇ ಜಿಲ್ಲೆಯ ಪ್ರಭಾವಿ ನಾಯಕರು ಹಾಗೂ ಬೊಮ್ಮಾಯಿ ಅವರ ಅತ್ಯಾಪ್ತರಾದ ಶಾಸಕ ಸಿ.ಸಿ.ಪಾಟೀಲ, ಮಾಜಿ ಶಾಸಕ ಕಳಕಪ್ಪ ಬಂಡಿ ಜತೆಗೂಡಿ ಚುನಾವಣೆ ಗೆಲುವಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ತಂತ್ರಗಳ ಕುರಿತಾಗಿ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ.

‘ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ 15 ಸಾವಿರ ಮತಗಳ ಅಂತದ ಗೆಲುವು ತಂದು ಕೊಡುವ ಭರವಸೆಯನ್ನು ಗದಗ ಜಿಲ್ಲೆಯ ಬಿಜೆಪಿ ಜೋಡೆತ್ತುಗಳು(ಸಿ.ಸಿ.ಪಾಟೀಲ, ಕಳಕಪ್ಪ ಬಂಡಿ) ಬೊಮ್ಮಾಯಿ ಅವರಿಗೆ ಮಾತು ಕೊಟ್ಟಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಸವರಾಜ ಬೊಮ್ಮಾಯಿ 
ಬಸವರಾಜ ಬೊಮ್ಮಾಯಿ 
ಆನಂದಸ್ವಾಮಿ ಗಡ್ಡದೇವರಮಠ
ಆನಂದಸ್ವಾಮಿ ಗಡ್ಡದೇವರಮಠ
ವೆಂಕನಗೌಡ ಆರ್. ಗೋವಿಂದಗೌಡ್ರ
ವೆಂಕನಗೌಡ ಆರ್. ಗೋವಿಂದಗೌಡ್ರ

‘ಮೇಲೆ ಬಿದ್ದು ಹೋಗಲು ಸಾಧ್ಯವಿಲ್ಲ’

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಆದರೆ ಹಾವೇರಿ– ಗದಗ ಜಿಲ್ಲೆಯಲ್ಲಿ ‘ಮೈತ್ರಿ’ ಮಾತಿಗಷ್ಟೇ ಸೀಮಿತವಾಗಿರುವಂತೆ ಕಾಣಿಸುತ್ತಿದೆ ಎಂದು ಜಿಲ್ಲಾ ಜೆಡಿಎಸ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರ್ಚ್‌ 18ರಂದು ಗದಗ ಜಿಲ್ಲೆಗೆ ಭೇಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಜಿಲ್ಲೆಯ ಯಾವೊಬ್ಬ ಜೆಡಿಎಸ್‌ ನಾಯಕರ ಜತೆಗೆ ವೇದಿಕೆ ಹಂಚಿಕೊಳ್ಳಲಿಲ್ಲ. ಬಿಜೆಪಿಯವರು ಕೂಡ ಜಿಲ್ಲಾ ಜೆಡಿಎಸ್‌ ಘಟಕವನ್ನು ಸಂಪರ್ಕಿಸಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿರಲಿಲ್ಲ. ‘ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ಮೈತ್ರಿ ಧರ್ಮ ಪಾಲಿಸುವಂತೆ ನಮಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದರೆ ಗದಗ ಜಿಲ್ಲೆಯ ಬಿಜೆಪಿ ನಾಯಕರು ನಮ್ಮನ್ನು ಪ್ರಚಾರಕ್ಕೆ ಕರೆದಿಲ್ಲ. ಹಾಗಾಗಿ ನಾವಾಗಿಯೇ ಮೇಲೆ ಬಿದ್ದು ಹೋಗುವುದು ಸರಿಯಲ್ಲ ಅಂತ ಸುಮ್ಮನಿದ್ದೇವೆ’ ಎಂದು ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ ಅವರನ್ನು ಈ ಕುರಿತಾಗಿ ಒಮ್ಮೆ ಸಂಪರ್ಕಿಸಲಾಗಿತ್ತು. ಅದಕ್ಕೆ ಅವರು ಜೆಡಿಎಸ್‌ ನಾಯಕರು ಕಾರ್ಯಕರ್ತರ ಜತೆಗೂಡಿ ಪ್ರಚಾರ ನಡೆಸುವಂತೆ ಬಿಜೆಪಿ ವರಿಷ್ಠರಿಂದ ಇನ್ನೂ ನಿರ್ದೇಶನ ಬಂದಿಲ್ಲ ಅಂತ ಹೇಳಿದರು’ ಎಂದು ವೆಂಕನಗೌಡ್ರ ತಿಳಿಸಿದರು.

ಮ್ಯಾಕಲಝರಿಗೆ ಹನುಮಪ್ಪನಿಗೆ ಮೊದಲ ಪೂಜೆ

ಗಜೇಂದ್ರಗಡ ತಾಲ್ಲೂಕಿನ ಮ್ಯಾಕಲಝರಿ ಗ್ರಾಮದಲ್ಲಿರುವ ಹನುಮಪ್ಪನಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರೆ  ಚುನಾವಣೆಯಲ್ಲಿ ಗೆಲುವು ಗ್ಯಾರಂಟಿ ಎಂಬುದು ಈ ಭಾಗದ ರಾಜಕೀಯ ನಾಯಕರ ನಂಬಿಕೆ. ಆ ನಂಬಿಕೆ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಆನಂದಸ್ವಾಮಿ ಗಡ್ಡದೇವರಮಠ ಅವರಿಗೂ ಇದೆ ಎಂಬುದು ಗೊತ್ತಾಗಿದೆ. ಮಾರ್ಚ್‌ 18ರಂದು ಗಜೇಂದ್ರಗಡಕ್ಕೆ ಬಂದಿದ್ದ ಬೊಮ್ಮಾಯಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾಕಲಝರಿಗೆ ಭೇಟಿ ನೀಡಿ ಹನುಮಪ್ಪನಿಗೆ ಪೂಜೆ ಸಲ್ಲಿಸಿದರು. ಅದೇರೀತಿ ಈ ಭಾಗದಲ್ಲಿರುವ ಆನಂದಸ್ವಾಮಿ ಗಡ್ಡದೇವರಮಠ ಅವರ ಅಭಿಮಾನಿಗಳು ಹನುಮಪ್ಪನಿಗೆ ಪೂಜೆ ಸಲ್ಲಿಸಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಲಿ ಎಂದು ಬೇಡಿಕೊಂಡು ಚುನಾವಣಾ ಪ್ರಚಾರ ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT