ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೋಣ |ವಕ್ಕಣೆ ಯಂತ್ರಗಳ ಹಾವಳಿ: ದಿಕ್ಕುತೋಚದ ಪರಿಸ್ಥಿತಿಯಲ್ಲಿ ಕಾರ್ಮಿಕರು

ಉತ್ತರ ಭಾರತದ ವಕ್ಕಣೆ ಯಂತ್ರಗಳ ಹಾವಳಿಗೆ ಬಸವಳಿದ ಸ್ಥಳೀಯರು
ಉಮೇಶ ಬಸನಗೌಡರ
Published 26 ಜನವರಿ 2024, 5:40 IST
Last Updated 26 ಜನವರಿ 2024, 5:40 IST
ಅಕ್ಷರ ಗಾತ್ರ

ರೋಣ: ತಾಲ್ಲೂಕಿನ ಪ್ರಮುಖ ಬೆಳೆಯಾದ ಕಡಲೆ ವಕ್ಕಣೆ ಪ್ರಾರಂಭವಾಗಿದ್ದು, ಬದಲಾದ ಪರಿಸ್ಥಿಯಲ್ಲಿ ಉತ್ತರ ಭಾರತದ ರಾಜ್ಯಗಳಿಂದ ಪಟ್ಟಣಕ್ಕೆ ಬಂದಿರುವ ಬೃಹತ್ ವಕ್ಕಣೆ ಯಂತ್ರಗಳಿಂದಾಗಿ ಸ್ಥಳೀಯ ಯಂತ್ರಗಳು ಮತ್ತು ಕಾರ್ಮಿಕರು ಅಕ್ಷರಶಃ ಕಂಗಾಲಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದಾದ್ಯಂತ ಸುಗ್ಗಿ ಸಂದರ್ಭದಲ್ಲಿ ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶಗಳಿಂದ ಬರುವ ವಕ್ಕಣೆ ಯಂತ್ರಗಳಿಗೆ ಸ್ಥಳೀಯ ರೈತರು ಮಾರುಹೋಗುತ್ತಿದ್ದು, ಸ್ಥಳೀಯ ಯಂತ್ರಗಳ ಮಾಲೀಕರು ಮತ್ತು ಕಾರ್ಮಿಕರು ನಿರುದ್ಯೋಗಿಗಳಾಗುವಂತೆ ಮಾಡಿದೆ.

ಉತ್ತರದ ರಾಜ್ಯಗಳಿಂದ ಬೃಹತ್ ಯಂತ್ರಗಳ ಜೊತೆಗೆ ಐದರಿಂದ ಎಂಟು ಜನ ತಮ್ಮದೇ ರಾಜ್ಯದ ಕಾರ್ಮಿಕರನ್ನು ಕರೆತಂದು ವಕ್ಕಣೆ ಕೆಲಸದಲ್ಲಿ ತೊಡಗಿಸುವುದರಿಂದ ಸ್ಥಳೀಯ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಜೊತೆಗೆ ರಾಶಿಯ ಸಂದರ್ಭದಲ್ಲಿ ತಳಗಾಳು ಪಡೆದು ವರ್ಷ ಪೂರ್ತಿ ಹೊಟ್ಟೆಹೊರೆಯುತ್ತಿದ್ದವರು ಈಗ ದಿಕ್ಕುತೋಚದ ಪರಿಸ್ಥಿತಿಗೆ ಒಳಗಾಗಿದ್ದು, ಅವರನ್ನು ಭವಿಷ್ಯದ ಚಿಂತೆ ಕಾಡತೊಡಗಿದೆ.

‘ಜಾಗತೀಕರಣದ ಪ್ರಭಾವದ ಬಗ್ಗೆ ಮಾತನಾಡುವವರು ನಮ್ಮದೇ ನೆಲದಲ್ಲಿ ಪರರಾಜ್ಯಗಳಿಂದ ಬಂದು ಸ್ಥಳೀಯರ ಉದ್ಯೋಗ ಕಸಿಯುತ್ತಿರುವ ಬಗ್ಗೆ ಚಕಾರವೆತ್ತದಿರುವುದು ದುರಂತವೆ ಸರಿ. ಈಗಾಗಲೇ ಸ್ಥಳೀಯ ವ್ಯಾಪಾರಗಳನ್ನು ಕಸಿದುಕೊಂಡಿರುವ ಪರರಾಜ್ಯದವರು ಈಗ ಸಣ್ಣಪುಟ್ಟ ಉದ್ಯೋಗಗಳನ್ನು ಆಕ್ರಮಿಸುತ್ತಿದ್ದು ತಕ್ಷಣವೇ ಇದಕ್ಕೆ ತಡೆಯೊಡ್ಡದಿದ್ದಲ್ಲಿ ಮುಂದಿನ ದಿನಗಳಲ್ಲಿ  ಕಷ್ಟವಾಗಲಿದೆ’ ಎನ್ನುತ್ತಾರೆ ಉಪನ್ಯಾಸಕ ಕೆ.ಕೆ.ಹಿರೇಕಲ್ಲಪ್ಪನವರ.

‘50 ಕೆ.ಜಿ. ಚೀಲವೊಂದಕ್ಕೆ ₹100 ಪಡೆಯುವ ಉತ್ತರದ ಯಂತ್ರಗಳ ಮಾಲೀಕರು ಅದರಲ್ಲಿಯೇ ಆಳುಗಳ ವೇತನ ಸರಿದೂಗಿಸುತ್ತಿದ್ದು ರೈತರಿಗೆ ಎದುರಾಗುವ ಆಳುಗಳ ಕೊರತೆಯನ್ನು ನೀಗಿಸುತ್ತಿದ್ದಾರೆ. ಕೆಲವು ದೊಡ್ಡ ರೈತರಿಗೆ ಇದು ಅನುಕೂಲವಾದರೂ ಸ್ಥಳೀಯ ಯಂತ್ರಗಳ ಮಾಲೀಕರು ಮತ್ತು ಕಾರ್ಮಿಕರಿಗೆ ಕಂಟಕವಾಗಿದೆ. ಹೊರರಾಜ್ಯದಿಂದ ಬರುವ ವಕ್ಕಣೆ ಯಂತ್ರಗಳ ಹಾವಳಿಗೆ ಕಡಿವಾಣ ಹಾಕಿ ಸ್ಥಳೀಯ ಒಕ್ಕಣೆ ಯಂತ್ರಗಳಿಗೆ ಅವಕಾಶ ಕಲ್ಪಿಸಿ ಮಾಲೀಕರು ಮತ್ತು ಕಾರ್ಮಿಕರ ಹಿತ ಕಾಯುವಲ್ಲಿ ಸರ್ಕಾರ ಕ್ರಮವಹಿಸಬೇಕು’ ಎಂಬುದು ಸ್ಥಳೀಯ ವಕ್ಕಣೆ ಯಂತ್ರಗಳ ಮಾಲೀಕರು ಮತ್ತು ಕಾರ್ಮಿಕರ ಆಗ್ರಹವಾಗಿದೆ.

ಬೇರೆ ರಾಜ್ಯದವರು ಬಂದ ಮೇಲೆ ನಮ್ಮ ರೈತರು ನಮ್ಮಿಂದ ದೂರವಾಗಿದ್ದು ಹೆಸರು ಮತ್ತು ಕಡಲೆ ರಾಶಿಯ ಸಂದರ್ಭದಲ್ಲಿ ಪ್ರತಿವರ್ಷ ₹60 ರಿಂದ ₹70 ಸಾವಿರ ದುಡಿಯುತ್ತಿದ್ದೆವು. ಈಗ ಅದು ಸಾಧ್ಯವಾಗುತ್ತಿಲ್ಲ
ದೇವಪ್ಪ ಸ್ಥಳೀಯ ವಕ್ಕಣೆ ಯಂತ್ರದ ಮಾಲೀಕ
ರೈತರು ತಳಗಾಳುಗಳಿಂದ ವರ್ಷಪೂರ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಆದರೆ ಈಗ ಮಕ್ಕಳು ಮನೆಯವರ ಹೊಟ್ಟೆಹೊರೆಯುವುದೇ ಸಮಸ್ಯೆಯಾಗಿದೆ
-ಮಲ್ಲವ್ವ ವಕ್ಕಣೆ ಯಂತ್ರ ಅವಲಂಬಿತ ಕಾರ್ಮಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT