ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ: ಶಿವನಾಮ ಜಪಿಸಿದ ಭಕ್ತರು

ವಿವಿಧ ಈಶ್ವರ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ, ಪ್ರಸಾದ ವಿತರಣೆ
Published 8 ಮಾರ್ಚ್ 2024, 16:14 IST
Last Updated 8 ಮಾರ್ಚ್ 2024, 16:14 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ತಾಲ್ಲೂಕಿನಾದ್ಯಂತ ಶಿವನ ದೇವಸ್ಥಾನದಲ್ಲಿ ಶಿವನ ಪೂಜೆ ಕಳೆಗಟ್ಟಿತ್ತು. ಇಲ್ಲಿನ ಸೋಮೇಶ್ವರ ದೇವಸ್ಥಾನದಲ್ಲಿ ನಸುಕಿನ ಜಾವದಿಂದಲೇ ವಿಶೇಷ ಪೂಜೆ, ಹೋವ, ಹವನ, ಅಲಂಕಾರಗಳು ನಡೆದವು.

ಅದರಂತೆ ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗಾಗಿ ಬಂದಿರುವ ಬೃಹತ್ ಶಿವಲಿಂಗಗಳ ಪೂಜೆ ಸಾಂಗವಾಗಿ ನಡೆಯಿತು.

ಲಕ್ಷ್ಮೇಶ್ವರದ ಅಗಡಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿವಲಿಂಗಗಳನ್ನು ತೊಳೆದು ಪೂಜೆ ನೆರವೇರಿಸಿದರು. ಅಲ್ಲದೆ ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರಿಯನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಊರಿನ ಭಕ್ತರು ಮುಕ್ತಿಮಂದಿರಕ್ಕೆ ಆಗಮಿಸಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಶಿವನ ದೇವಸ್ಥಾನಗಳಲ್ಲಿ ಜಾಗರಣೆ ನಡೆಯಿತು.

ಸೋಮೇಶ್ವರನಿಗೆ ಕ್ಷೀರಾಭಿಷೇಕ

ನರೇಗಲ್: ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ವಿಶೇಷ ಪೂಜೆ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಜರುಗಿದವು. ಭಕ್ತರು ಈಶ್ವರನ ಆರಾಧನೆಯಲ್ಲಿ ಮಿಂದೆದ್ದರು. ಶಿವನ ಪೂಜೆಗಾಗಿ ಭಕ್ತರು ಬಿಲ್ವಪತ್ರೆ, ಹೂವೂ, ವಿವಿಧ ಹಣ್ಣು ಅರ್ಪಿಸಿ ದರ್ಶನ ಪಡೆದರು.

ಈ ವೇಳೆ ಅರ್ಚಕ ಕೃಷ್ಣಾ ಗ್ರಾಮಪುರೋಹಿತ ಮಾತನಾಡಿ, ಶಿವ ಪೂಜೆ, ಶಿವ ಮಂತ್ರಗಳ ಪಠಣೆಯಿಂದ ರೋಗ, ಭಯ, ಸಂಕಷ್ಟ, ಸಮಸ್ಯೆಗಳು ದೂರವಾಗುತ್ತವೆ. ನಿಯಮಿತವಾದ ಪಠಣವು ವ್ಯಕ್ತಿಯ ಯಶಸ್ಸು ಮತ್ತು ಸಿದ್ಧಿಯನ್ನು ಪಡೆಯುವುದಕ್ಕೆ ಸಹಾಯ ಮಾಡುತ್ತವೆ ಎಂದರು.

ಇದೇ ಸಂದರ್ಭದಲ್ಲಿ 11 ಜನ ಋತ್ವಿಜರು ರುದ್ರ ಪಠಿಸುತ್ತ ಸೋಮೇಶ್ವರನಿಗೆ ಕ್ಷೀರಾಭಿಷೇಕ ಹಾಗೂ ಜಲಾಭೀಷೇಕ ಸಲ್ಲಿಸಿದರು. ವಿಶ್ವನಾಥಭಟ್ ಗ್ರಾಮಪುರೊಹಿತ, ಎ.ಜಿ.ಕುಲಕರ್ಣಿ, ಶಂಕರಾವ ಕುಲಕರ್ಣಿ, ಎಸ್.ಎಚ್.ಕುಲಕರ್ಣಿ, ಶೇಷಗೀರಿರಾವ್ ಕುಲಕರ್ಣಿ, ಸಂಜೀವ್ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಅಜಿತ್ ಕುಲಕರ್ಣಿ, ಮಂಜುನಾಥ ಗ್ರಾಮಪುರೋಹಿತ, ಡಾ.ಎನ್.ಎಲ್.ಗ್ರಾಮಪುರೋಹಿತ, ಕಿರಣ ದೇಸಾಯಿ, ನಾಗರಾಜ ನಾಡಗೇರ, ಗಿರೀಶ ಕುಲಕರ್ಣಿ, ರಾಮಕೃಷ್ಣ ಸದರಜೋಶಿ ಇದ್ದರು.

ಬಿಲ್ವಪತ್ರಿ, ಎಕ್ಕಿ ಹೂವಿನ ಸಿಂಗಾರ

ಮುಂಡರಗಿ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಪಟ್ಟಣದ ವಿವಿಧ ಶಿವಾಲಯಗಳಲ್ಲಿ ಭಕ್ತರು ಭಕ್ತಿ ಹಾಗೂ ಶ್ರದ್ಧೆಯಿಂದ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಎಲ್ಲ ಶಿವಾಲಯಗಳಲ್ಲಿ ಮುಂಜಾನೆಯಿಂದ ಸಂಜೆಯವರೆಗೂ ಭಕ್ತ ಸಮೂಹದಿಂದ ತುಂಬಿ ತುಳುಕುತ್ತಿದ್ದವು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿರುವ ಶಿವಾಲಯ, ಅನ್ನದಾನೀಶ್ವರ ವಸತಿ ನಿಲಯದಲ್ಲಿರುವ ಈಶ್ವರ, ವೀರಭದ್ರೇಶ್ವರ ದೇವಸ್ಥಾನಲ್ಲಿರುವ ಶಿವಲಿಂಗ, ಕನಕಪ್ಪನ ಗುಡ್ಡದ ಮೇಲಿರುವ ಮಲ್ಲಿಕಾರ್ಜುನ ದೇವಸ್ಥಾನ, ಕನ್ನಿಕಾಪರಮೇಶ್ವರಿ ದೇವಸ್ಥಾನ, ಕೋಟೆ ಭಾಗದ ಈಶ್ವರ ದೇವಾಲಯ, ಮಂಜುನಾಥ ದೇವಸ್ಥಾನ ಮೊದಲಾದ ಭಾಗಗಳಲ್ಲಿ ಮಕ್ಕಳು ಮತ್ತು ಮಹಿಳೆಯರು ಸರದಿಯಲ್ಲಿ ನಿಂತು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀಜಗದ್ಗುರು ಅನ್ನದಾನೀಶ್ವರ ಮಠದ ಶಿವಾಲಯದಲ್ಲಿ ಶಿವನ ದರ್ಶನ ಪಡೆದುಕೊಳ್ಳಲು ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬಹುತೇಕ ಶಿವಾರಾಧಕರು ಮುಂಜಾನೆಯಿಂದ ಸಂಜೆವರೆಗೂ ಉಪವಾಸವಿದ್ದು, ಶಿವನಾಮ ಸ್ಮರಣೆಯಲ್ಲಿ ನಿರತರಾಗಿದ್ದರು. ಶಿವನಿಗೆ ಪ್ರಿಯವಾದ ಬಿಲ್ವಪತ್ರಿ, ಬಿಳಿಎಕ್ಕದ ಹೂವು, ಮಲ್ಲಿಗೆ, ದಾಸವಾಳ, ಕನಕಾಂಬರ ಮೊದಲಾದ ಹೂಪತ್ರಿಗಳಿಂದ ಭಕ್ತರು ಶಿವನನ್ನು ಅಲಂಕರಿಸಿದ್ದರು.

ಉತ್ತರಾಣಿ ಧೂಪ, ಕರ್ಪೂರದಾರತಿ, ಮಹಾಮಂಗಳಾರತಿ ಬೆಳಗಿದರು. ಅಳ್ಳಿಟ್ಟು, ತಂಬಿಟ್ಟು, ಎಳ್ಳಿನ ಉಂಡೆ, ಉಸುಳಿ, ವಿವಿಧ ಹಣ್ಣು ಹಂಪಲುಗಳ ನೈವೇದ್ಯ ಅರ್ಪಿಸಿದರು. ಸಂಜೆ ಕೆಲವು ದೇವಸ್ಥಾನಗಳಲ್ಲಿ ಇಡೀ ರಾತ್ರಿ ಭಜನೆ, ಕೀರ್ತನೆ, ಶಿವನಾಮ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಗ್ರಾಮೀಣ ವರದಿ: ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ವಿಠಲಾಪುರ ಮಹಾರಸಲಿಂಗೇಶ್ವರ ದೇವಾಲಯ, ಬಿದರಳ್ಳಿ ಸೋಮೇಶ್ವರ ದೇವಸ್ಥಾನ, ಡಂಬಳದ ದೊಡ್ಡಬಸವೇಶ್ವರ, ಸೋಮನಾಥೇಶ್ವರ ದೇವಸ್ಥಾನಗಳಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಜಾಗರಣೆ ಮಾಡಿದರು. ವಿವಿಧೆಡೆ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾಲಕಾಲೇಶ್ವರನಿಗೆ ವಿಶೇಷ ಪೂಜೆ

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಶಿವನ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜೆ ಅಭಿಷೇಕದಂತ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಪಟ್ಟಣದ ವಿರೂಪಾಕ್ಷೇಶ್ವರ ಮಾರ್ಕಂಡೇಶ್ವರ ಹಾಗೂ ರಾಮಲಿಂಗೇಶ್ವರ ದೇವಸ್ಥಾನಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು.

ಸಮೀಪದ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಶಿವನಾಮ ಜಪಿಸುವ ಮೂಲಕ ಪೂಜೆ ಸಲ್ಲಿಸಿ ಶಿವನಿಗೆ ಪ್ರಿಯವಾದ ಬಿಲ್ವಪತ್ರಿ ಸಮರ್ಪಿಸಿದರು. ಸಮೀಪದ ಶಾಂತಗೇರಿ ಗ್ರಾಮದ ಶಾಂತೇಶ್ವರ ಸೂಡಿ ಗ್ರಾಮದ ಶಿವಚಿದಂಬರೇಶ್ವರ ದೇವಸ್ಥಾನಗಳಲ್ಲಿ ಬೆಳಗಿನ ಜಾವ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಹಲವು ಕಡೆಗಳಲ್ಲಿ ಶಿವರಾತ್ರಿ ಪ್ರಯುಕ್ತ ಇಡೀ ರಾತ್ರಿ ಭಜನೆ ಆಯೋಜಿಸಲಾಗಿತ್ತು. ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣದಲ್ಲಿ ದ್ರಾಕ್ಷಿ ಸೇಬು ಬಾಳೆಹಣ್ಣು ಕಲ್ಲಂಗಡಿ ಕರಬೂಜ ಖರ್ಜೂರ ಹಣ್ಣುಗಳ ಮಾರಾಟ ಹೆಚ್ಚಾಗಿ ಕಂಡು ಬಂದಿತು.

ಸೂಡಿ: ಸಮೀಪದ ಸೂಡಿ ಗ್ರಾಮದಲ್ಲಿ ಶುಕ್ರವಾರ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ವಿ.ಜಿ.ಶೆಟ್ಟರ ನೇತೃತ್ವದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. 250 ಜನ ಮುತ್ತೈದೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ವಿ.ಜಿ.ಶೆಟ್ಟರ ಬಿ.ಎಸ್.ಶೀಲವಂತರ ಈರಣ್ಣ ಪಟ್ಟಣಶೆಟ್ಟರ ನಿಂಗಪ್ಪ ಕಾಶಪ್ಪನವರ ರಮೇಶಗೌಡ ಪಾಟೀಲ ಪ್ರಕಾಶ ಕುಬಸದ ಈಶಣ್ಣ ರೋಣದ ಪ್ರಶಾಂತ ಸೂಡಿ ಚನ್ನಪ್ಪ ನೂಲ್ವಿ ಶಿವಪ್ಪ ಅಮರಗಟ್ಟಿ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT