ಭಾನುವಾರ, ಏಪ್ರಿಲ್ 18, 2021
32 °C
ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ

ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶವಿಲ್ಲ: ಅರಣ್ಯ ಸಚಿವ ಅರವಿಂದ ಲಿಂಬಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡರಗಿ: ಕಪ್ಪತಗುಡ್ಡದ ನಿರ್ಬಂಧಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಕಲ್ಲು ಒಡೆಯುವುದನ್ನೇ ಕುಲಕಸುಬು ಮಾಡಿಕೊಂಡಿರುವ ವಡ್ಡರು, ಭೋವಿ ಸಮಾಜದವರು ಬೇರೆಡೆಗೆ ಕಲ್ಲು ಒಡೆಯಲು ನಿಯಮಾನುಸಾರ ಅನುಮತಿ ನೀಡಲಾಗುವುದು’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಭೋವಿ ಸಮಾಜ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರರ 849ನೇ ಜಯಂತಿ ಹಾಗೂ ಜಿಲ್ಲಾ ಭೋವಿ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ‘ಮಾನವ ಸಂಪನ್ಮೂಲವನ್ನು ಬಳಸಿ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಭೋವಿ ಸಮಾಜದ ಸಂಘ ಸಂಸ್ಥೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅನುಮತಿ ಪಡೆದ ಸಂಘ, ಸಂಸ್ಥೆಗಳಿಗೆ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡಬಾರದು’ ಎಂದು ತಿಳಿಸಿದರು.

‘ಇಂದು ಭೋವಿ ಸಮಾಜ ಅಚ್ಚುಕಟ್ಟಾಗಿ ಸಂಘಟಿತವಾಗುತ್ತಿದೆ. ಸಮಾಜ ಸಂಘಟನೆಯಾದರೆ ಎಲ್ಲರಿಗೂ ಬಲ ಬರುತ್ತದೆ. ಆದ್ದರಿಂದ ಸಮಾಜ ಬಾಂಧವರು ಎಲ್ಲರೂ ಒಂದಾಗಬೇಕು. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳಬೇಕು’ ಎಂದು ಸುನೀಲ ವಲ್ಯಾಪೂರ ಹೇಳಿದರು.

ಮಾಜಿ ಸಚಿವ ಶಿವರಾಜ ತಂಗಡಗಿ, ‘ಭೋವಿ ಸಮಾಜದವರು ತಲತಲಾಂತರದಿಂದ ಕಲ್ಲು ಒಡೆಯುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಆದ್ದರಿಂದ ಸರ್ಕಾರ ರಾಜ್ಯದಾದ್ಯಂತ ತಾಲ್ಲೂಕುವಾರು ಕಲ್ಲುಗಣಿಗಾರಿಕೆಗೆ ಅವರಿಗೆ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ಸಿದ್ಧರಾಮೇಶ್ವರ ಸಂಸ್ಥಾನಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭೋವಿ ಸಮಾಜದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರವಿ ಗುಂಜಿಕರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಈರಣ್ಣ ನಾಡಗೌಡರ, ಸದಸ್ಯೆ ಶೋಭಾ ಮೇಟಿ, ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಉಪಾಧ್ಯಕ್ಷ ಶಿವಣ್ಣ ಚಿಕ್ಕಣ್ಣವರ, ಕೆ.ವಿ. ಹಂಚಿನಾಳ, ಹೇಮಗಿರಿಶ ಹಾವಿನಾಳ, ಯಲ್ಲಪ್ಪ ಹೂಲಗೇರಿ, ರಾಮು ಕಲಾಲ, ಡಾ. ಎಚ್. ರವಿ ಮಾಕಳೆ, ಓದುಗಂಗಪ್ಪ, ಎಚ್. ಆನಂದಪ್ಪ, ಹುಚ್ಚಪ್ಪ ಸುಂದಕದ, ಈರಪ್ಪ ಬಂಡಿವಡ್ಡರ, ಡಾ. ಬಸವರಾಜ ಬಳ್ಳಾರಿ, ಚಿನ್ನಪ್ಪ ವಡ್ಡಟ್ಟಿ, ಪರಶುರಾಮ ಕರಡಿಕೊಳ್ಳ, ಡಾ. ಆರ್.ಎಚ್. ಜಂಗಣವಾರಿ, ಮಂಜುಳ ವಡೇಕರ್, ಕೆ.ವಿ. ಆನಂದ ಗೊಡಬಿ ಇದ್ದರು.

ಸಚಿವ ಪಾಟೀಲ ಭರವಸೆ
‘ನಿರ್ಬಂಧಿತ ಅರಣ್ಯ ಪ್ರದೇಶ ಹೊರತು ಪಡಿಸಿ ಸರ್ಕಾರದ ನಿಯಮಾನುಸಾರ ರಾಜ್ಯದ ಯಾವುದೇ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಕೆ.ಪಿ.ಎಸ್.ಸಿ.ಯಲ್ಲಿ ಭೋವಿ ಸಮಾಜದ ಒಬ್ಬರಿಗೆ ಸದಸ್ಯತ್ವ ನೀಡುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು