ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ; ಮುಂಗಾರು ಬಿತ್ತನೆಗೆ ಹಿನ್ನಡೆ

Published 29 ಮೇ 2023, 23:30 IST
Last Updated 29 ಮೇ 2023, 23:30 IST
ಅಕ್ಷರ ಗಾತ್ರ

ನಾಗರಾಜ ಎಸ್. ಹಣಗಿ

ಲಕ್ಷ್ಮೇಶ್ವರ: ರೈತರಿಗೆ ಮುಂಗಾರು ಪೂರ್ವ ಮಳೆಗಳೇ ಆಧಾರ. ಈ ಮಳೆಗಳು ಸುರಿದರೆ ಮಾತ್ರ ಮುಂಗಾರು ಬಿತ್ತನೆ ಸಾಧ್ಯ. ಆದರೆ ಇನ್ನೂ ಮಳೆ ಆಗಿಲ್ಲ. ಹೀಗಾಗಿ ಹೆಸರು, ಎಳ್ಳು ಬಿತ್ತನೆ ಕಾರ್ಯ ನಡೆಯದೆ ಇರುವುದರಿಂದ ರೈತರಲ್ಲಿ ಆತಂಕ ಮೂಡಿದೆ.

ಕಳೆದ ವರ್ಷ ಇಷ್ಟೊತ್ತಿಗಾಗಲೇ ಉತ್ತಮ ಮಳೆ ಸುರಿದ ಪರಿಣಾಮ ಬಿತ್ತನೆ ಕಾರ್ಯಗಳು ಮುಗಿದು, ಹೆಸರು ಬೆಳೆ ಎಡೆ ಹೊಡೆಯಲು ಬಂದಿತ್ತು. ಆದರೆ ಈ ಬಾರಿ ಹೆಸರು ಬಿತ್ತನೆಯೇ ಆಗಿಲ್ಲ. ವಾಡಿಕೆ ಪ್ರಕಾರ 83.9 ಮಿ.ಮೀ ಮುಂಗಾರು ಪೂರ್ವ ಮಳೆ ಆಗಬೇಕಿತ್ತು. ಆದರೆ ಆಗಿದ್ದು ಕೇವಲ 44.8 ಮಿ.ಮೀ.

ಈ ವೇಳೆಗೆ ಮಾಗಿ ಉಳುಮೆ ಮುಗಿದು ಬಿತ್ತನೆ ಕಾರ್ಯ ಮುಗಿಯಬೇಕಾಗಿತ್ತು. ಆದರೆ ಮಳೆರಾಯ ಮುನಿಸಿಕೊಂಡಿದ್ದು, ಮಾಗಿ ಉಳುಮೆ ಕೆಲಸಗಳೇ ಬಾಕಿ ಉಳಿದಿವೆ. ಜೂನ್ 8ರಂದು ಮುಂಗಾರು ಹಂಗಾಮಿನ ಮೊದಲ ಮಳೆ ಮೃಗಶಿರಾ ಪ್ರವೇಶ ಮಾಡಲಿದ್ದು, ರೈತರು ಈ ಮಳೆ ಮೇಲೆ ಆಶಾಭಾವನೆ ಇಟ್ಟುಕೊಂಡಿದ್ದಾರೆ.

ಈ ವರ್ಷ ಮುಂಗಾರು ಪೂರ್ವ ಮಳೆ ಆಗಿಲ್ಲ. ಈಗಾಗಲೇ ಹೆಸರು ತೊಗರಿ ಬಿತ್ತನೆ ಬೀಜ ತರಿಸಲಾಗಿದೆ. ಆದರೆ ಮಳೆ ಇರದ ಕಾರಣ ಯಾರೂ ಬೀಜ ಖರೀದಿಗೆ ಬರುತ್ತಿಲ್ಲ.
ಚಂದ್ರಶೇಖರ ನರಸಮ್ಮನವರ, ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಲಕ್ಷ್ಮೇಶ್ವರ

ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಒಟ್ಟು 35,670 ಹೆಕ್ಟೇರ್ ಬಿತ್ತನೆ ಪ್ರದೇಶ ಇದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ 10,660 ಹೆಕ್ಟೇರ್ ಗೋವಿನಜೋಳ, 100 ಹೆಕ್ಟೇರ್ ತೊಗರಿ, 100 ಹೆಕ್ಟೇರ್ ಜೋಳ, 3,210 ಹೆಕ್ಟೇರ್ ಹೆಸರು, ಹತ್ತು ಸಾವಿರ ಹೆಕ್ಟೇರ್ ಶೇಂಗಾ, 11,000 ಹೆಕ್ಟೇರ್ ಬಿ.ಟಿ ಹತ್ತಿ, 500 ಹೆಕ್ಟೇರ್‌ನಲ್ಲಿ ಕಬ್ಬು ಬಿತ್ತನೆಗೆ ಕೃಷಿ ಇಲಾಖೆ ಗುರಿ ಹಾಕಿಕೊಂಡಿದೆ. ಆದರೆ ಮುಂಗಾರು ಪೂರ್ವ ಮಳೆ ಕೈಕೊಟ್ಟಿರುವುದರಿಂದ ಈವರೆಗಾದರೂ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ.

ಈ ವರ್ಷ ಅಕ್ಕಡಿ ಕಾಳುಗಳ ಬೆಲೆ ಹೆಚ್ಚಾಗುವ ಸಂಭವ ಇದೆ. ಇವತ್ತಲ್ಲ ನಾಳೆ ಮಳೆ ಆಗುತ್ತದೆ ಎಂದು ರೈತ ಪ್ರತಿದಿನ ಮುಗಿಲಿನತ್ತ ಕಣ್ಣಾಡಿಸುಲೇ ಇದ್ದಾನೆ.

‘ಈ ವರ್ಷ ಕೃತಿಕಾ ಮತ್ತು ರೋಹಿಣಿ ಮಳಿ ಎರಡೂ ಕೈಕೊಟ್ಟಾವು. ರೋಹಿಣಿ ಮಳಿ ಆಗಿದ್ರ ಕಾಳುಕಡಿ ಬಿತ್ತಾಕ ಅನುಕೂಲ ಆಕ್ಕಿತ್ತು. ಈ ಮಳಿಗೆ ಕಂಠಿಶೇಂಗಾ, ಉದ್ದು, ಮಡಿಕೆ, ಹೆಸರು ಬಿತ್ತನೆ ಮಾಡ್ತಿದ್ವಿ. ಆದರ ಈ ವರ್ಷ ಏನೂ ಬಿತ್ತಿಲ್ರೀ’ ಎಂದು ಸಮೀಪದ ಯಳವತ್ತಿ ಗ್ರಾಮದ ರೈತ ಬಾಪೂಗೌಡ ಭರಮಗೌಡ್ರ ಹೇಳಿದರು.

‘ರೋಹಿಣಿ ಮಳಿ ಆದ್ರ ಓಣಿ ತುಂಬ ಕಾಳ ಅಂತಾರಿ. ಇದು ರೈತರಿಗೆ ಭಾಷೆ ಕೊಟ್ಟ ಮಳಿ. ಆದರ ಈ ವರ್ಷ ಆಗಿಲ್ಲ. ಹಿಂಗಾಗಿ ಅಕ್ಕಡಿಕಾಳು ಬೆಳಿಯೋದು ಕಷ್ಟ. ಈವತ್ತ ನಾಳೆ ಮಳಿ ಆದರೂ ಬಿತ್ತಾಕ ಅನುಕೂಲ ಆಕ್ಕೇತ್ರಿ’ ಎಂದು ಲಕ್ಷ್ಮೇಶ್ವರದ ಪ್ರಗತಿಪರ ರೈತ ಬಸಣ್ಣ ಬೆಂಡಿಗೇರಿ ಲಕ್ಷ್ಮೇಶ್ವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT