ಮುಕ್ತಿಧಾಮಕ್ಕೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಸೋಮವಾರ, ಮೇ 27, 2019
28 °C

ಮುಕ್ತಿಧಾಮಕ್ಕೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

Published:
Updated:
Prajavani

ಗದಗ: ಇಲ್ಲಿನ ಬೆಟಗೇರಿಯಲ್ಲಿರುವ ಸರ್ವ ಧರ್ಮೀಯರ ಮುಕ್ತಿಧಾಮವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಎತ್ತ ನೋಡಿದರೂ ಹಚ್ಚ ಹಸಿರುಮಯ ವಾತಾವರಣ ಕಣ್ಮನ ಸೆಳೆಯುತ್ತದೆ. ಇತ್ತೀಚೆಗೆ ಇಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಧ್ವನಿವರ್ಧಕ ಸೌಲಭ್ಯ ಅಳವಡಿಸಲಾಗಿದೆ. 

ಎರಡು ವರ್ಷಗಳ ಹಿಂದೆ ಪಾಳು ಬಿದ್ದಿದ್ದ ಮುಕ್ತಿಧಾಮ, ಈಗ ಸುಂದರ ತಾಣವಾಗಿ ಬದಲಾಗಿದೆ. 22 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮುಕ್ತಿಧಾಮವನ್ನು ಜಿಲ್ಲಾಡಳಿತ, ಮುಕ್ತಿಧಾಮ ನಿರ್ವಹಣಾ ಸಮಿತಿ, ಲೋಕೋಪಯೋಗಿ ಇಲಾಖೆ ಹಾಗೂ ನಿರ್ಮಿತಿ ಕೇಂದ್ರಗಳ ಸಹಯೋಗದಲ್ಲಿ ಸುಮಾರು ₹ 4.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯ ಪ್ರಯತ್ನದಿಂದ ಮುಕ್ತಿಧಾಮ ಹಸಿರು ಹೊದಿಕೆಯಿಂದ ಕಂಗೊಳಿಸುತ್ತಿದೆ.

ಮುಕ್ತಿಧಾಮದ ಮುಖ್ಯ ರಸ್ತೆ ಹಾಗೂ ಸಂಪರ್ಕ ರಸ್ತೆಗಳ ಎರಡು ಬದಿಯಲ್ಲಿ ಬೇವು, ಹುಣಸೆ, ಹೊಂಗೆ ಸೇರಿದಂತೆ ವಿವಿಧ ಬಗೆಯ 3 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಲಾಗುತ್ತಿದೆ. ಈಗಾಗಲೇ ಗಿಡಗಳು ಸುಮಾರು 7 ರಿಂದ 8 ಅಡಿ ಎತ್ತರದವರೆಗೆ ಬೆಳೆದಿವೆ. ಮಕ್ತಿಧಾಮದಲ್ಲಿರುವ ಮೂರು ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆಗೆ ಇದ್ದು, ಸಸಿಗಳಿಗೆ ಇದರಿಂದ ನೀರುಣಿಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಸಸ್ಯಪಾಲನೆಗಾಗಿ ಇಬ್ಬರು ಹಾಗೂ ಮುಕ್ತಿಧಾಮ ಸಮಿತಿಯಿಂದ ಮೂವರು ಸಿಬ್ಬಂದಿ ನೇಮಕ ಮಾಡಲಾಗಿದೆ. ಇದರ ಫಲವಾಗಿ ಬೇಸಿಗೆಯಲ್ಲಿ ಮರುಭೂಮಿಯಂತೆ ಕಾಣುತ್ತಿದ್ದ ಈ ಪರಿಸರದಲ್ಲಿ ಹಸಿರು ಹೊನ್ನು ಮಿನುಗುತ್ತಿದೆ.

ಸಿಸಿಟಿವಿ ಕ್ಯಾಮೆರಾ ಕಣ್ಗಾವಲು: ಮುಕ್ತಿಧಾಮದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನ, ರಸ್ತೆಗಳ ಇಕ್ಕೆಲಗಳಲ್ಲಿ ಆಕರ್ಷಕ ಕಲ್ಲು ಬೆಂಚುಗಳನ್ನು ಹಾಕಲಾಗಿದೆ. ಆದರೆ, ಕೆಲವು ತಿಂಗಳುಗಳ ಹಿಂದೆ ಕಿಡಿಗೇಡಿಗಳು ಕಲ್ಲಿನ ಆಸನಗಳನ್ನು ಮುರಿದಿದ್ದರು. ಮೃತರ ಅಂತ್ಯ ಸಂಸ್ಕಾರದಲ್ಲಿ ಬಳಸುವ ಹೂವಿನ ಹಾರ, ಮೃತರ ಬಟ್ಟೆ, ಹಾಸಿಗೆ ಸೇರಿ ಇತರೆ ಕಸವನ್ನು ಸ್ಮಶಾನದ ಆವರಣದಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಹಾಗೂ ಭದ್ರತೆಯ ದೃಷ್ಟಿಯಿಂದ ಇತ್ತೀಚೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ.

ಮುಕ್ತಿಧಾಮದ ಮುಖ್ಯದ್ವಾರ, ಚಿತಾಗಾರ, ಒಳ ಭಾಗದ ಮುಖ್ಯ ರಸ್ತೆ ಹಾಗೂ ಬಲ ಭಾಗದಲ್ಲಿನ ಉದ್ಯಾನ ಸೇರಿದಂತೆ ಮೊದಲ ಹಂತದಲ್ಲಿ ನಾಲ್ಕು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮುಕ್ತಿಧಾಮದ ನಿರ್ವಹಣಾ ಸಮಿತಿಯ ಸದಸ್ಯರು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !