ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಲಭ್ಯ ವಂಚಿತ ಮುಳಗುಂದ ಬಸ್ ನಿಲ್ದಾಣ

ಚಂದ್ರಶೇಖರ್ ಭಜಂತ್ರಿ
Published 15 ಜನವರಿ 2024, 4:45 IST
Last Updated 15 ಜನವರಿ 2024, 4:45 IST
ಅಕ್ಷರ ಗಾತ್ರ

ಮುಳಗುಂದ: ಇಲ್ಲಿನ ಬಸ್ ನಿಲ್ಧಾಣದಲ್ಲಿ ಎರಡು ವರ್ಷಗಳಿಂದ ಮೂಲಸೌಲಭ್ಯಗಳ ಕೊರತೆ ಎದುರಾಗಿದ್ದು, ಸಕಾಲಕ್ಕೆ ಸೌಲಭ್ಯ ಒದಗಿಸುವಲ್ಲಿ ಸಾರಿಗೆ ಸಂಸ್ಥೆ ಗದಗ ವಿಭಾಗವು ನಿರ್ಲಕ್ಷ್ಯ ವಹಿಸಿದೆ.

2018ರಲ್ಲಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ₹1.82 ಕೋಟಿ ಅನುದಾನ ಬಳಸಿಕೊಂಡು 32 ಗುಂಟೆ ವಿಸ್ತೀರ್ಣ ಜಾಗದಲ್ಲಿ ಹೊಸದಾಗಿ ಬಸ್ ನಿಲ್ಧಾಣ ನಿರ್ಮಿಸಿತ್ತು. ಹೊಸದರಲ್ಲಿ ಬಸ್ ಪ್ಲಾಟ್‌ಫಾರ್ಮ್‌, ನಿಯಂತ್ರಣಾಧಿಕಾರಿ ಕೊಠಡಿ, ಮಹಿಳಾ ನಿರೀಕ್ಷಣಾ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯಗಳು ಹಾಗೂ 1 ಉಪಾಹಾರ ಗೃಹ, 8 ವಾಣಿಜ್ಯ ಮಳಿಗಳು ಸೇರಿದಂತೆ 30 ಪ್ರಯಾಣಿಕರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆದರೆ, ಎರಡು ವರ್ಷಗಳಿಂದ ಸೌಲಭ್ಯಗಳು ಒಂದೊಂದಾಗಿ ಬಂದ್‌ ಆಗಿವೆ. ಆವರಣದಲ್ಲಿನ ಕೊಳವೆಬಾವಿ ಕೆಟ್ಟಿದ್ದು, ದುರಸ್ತಿ ಕಾರ್ಯ ನಡೆದಿಲ್ಲ. ಇದರಿಂದ ನೀರು ಪೂರೈಕೆ ನಿಂತಿದೆ. ಪಟ್ಟಣ ಪಂಚಾಯ್ತಿಯವರು ತಾತ್ಕಾಲಿಕವಾಗಿ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ ಶೌಚಾಲಯಕ್ಕೆ ಸಮರ್ಪಕ ನೀರು ದೊರಕುತ್ತಿಲ್ಲ. ಪರಿಣಾಮ ಸ್ವಚ್ಛತೆ, ನಿರ್ವಹಣೆಗೆ ಸಮಸ್ಯೆ ಎದುರಾಗಿದೆ.

ಶೌಚ ಹಾಗೂ ಮೂತ್ರ ವಿಸರ್ಜನೆಯ ಕಮೋಡ್‍ಗಳು ಮುರಿದಿವೆ. ಪೈಪ್‌ಗಳು ಒಡೆದಿವೆ. ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಇಡೀ ವಾತಾವರಣ ದುರ್ನಾತ ಬೀರುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಶೌಚಗೃಹಕ್ಕೆ ಹೋಗವ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯದ್ವಾರದ ಬಳಿ ಕಾಲುವೆಯಲ್ಲಿ ಕಸದ ರಾಶಿ ಬಿದ್ದಿದೆ. ಆವರಣದಲ್ಲಿ ಎಲ್ಲೆಂದರಲ್ಲಿ ಅಡಕಿ–ಎಲೆ, ಗುಟ್ಕಾ ಉಗಿದು ಗಲೀಜು ಉಂಟಾಗಿದೆ.

ನಿಲ್ಧಾಣದ ಸ್ವಚ್ಛತೆ ಮತ್ತು ಶೌಚಾಲಯಗಳ ನಿರ್ವಹಣೆಗೆ ಇರುವ ಕಾರ್ಮಿಕನಿಗೆ ರಕ್ಷಾ ಕವಚಗಳನ್ನ ಒದಗಿಸಿಲ್ಲ. ಕೈಯಲ್ಲೇ ಕೆಲಸ ನಡೆಯುತ್ತಿದೆ.

‘ಸ್ವಚ್ಛತೆಗಾಗಿ ಪ್ರತಿ ತಿಂಗಳಿಗೆ ₹1 ಸಾವಿರ ಗೌರವಧನ ಕೊಡುತ್ತಾರೆ. ಇಷ್ಟು ಕಡಿಮೆ ಪಗಾರದಲ್ಲಿ ಏನು ಮಾಡಲು ಸಾಧ್ಯವೋ ಅಷ್ಟು ಕೆಲಸ ಮಾಡುತ್ತಿದ್ದೇನೆ. ನಾಲ್ಕು ತಿಂಗಳಿಂದ ಆ ಒಂದು ಸಾವಿರ ಪಗಾರವೂ ಬಂದಿಲ್ಲ’ ಎಂದು ಸ್ವಚ್ಛತಾ ಸಿಬ್ಬಂದಿ ಫಕ್ಕಿರೇಶ ದೊಡ್ಡಮನಿ ಅಳಲು ತೋಡಿಕೊಂಡರು.

ಲಕ್ಷ್ಮೇಶ್ವರ, ಗದಗ, ಹುಬ್ಬಳ್ಳಿ, ಶಿರಹಟ್ಟಿ ಸೇರಿದಂತೆ ಪ್ರಮುಖ ನಗರಗಳಿಗೆ ಈ ನಿಲ್ಧಾಣದ ಮೂಲಕ ನಿತ್ಯ ನೂರಕ್ಕೂ ಹೆಚ್ಚು ಬಸ್‍ಗಳು ಸಂಚರಿಸುತ್ತವೆ. ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಆದರೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಮಾಡಿಲ್ಲ. ಕೇವಲ 30 ಜನರು ಮಾತ್ರ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಹೀಗಾಗಿ ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಳ್ಳಬೇಕು. ಅದರಲ್ಲೂ ಮಹಿಳಾ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಕೆಲವರು ನಿಲ್ಧಾಣವನ್ನು ಹರಟೆ ಕಟ್ಟೆಯಾಗಿ ಮಾಡಿಕೊಂಡಿದ್ದು, ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

ಇಲ್ಲಿನ ನಿಯಂತ್ರಣಾಧಿಕಾರಿ ಕೊಠಡಿಯಲ್ಲಿ ಕುಳಿತುಕೊಳ್ಳಲು ಸಹ ಕುರ್ಚಿ ವ್ಯವಸ್ಥೆ ಇಲ್ಲದಾಗಿದೆ. ಬಸ್‌ನ ಹರಿದ ಸೀಟ್‍ಗಳು ಕುಳಿತುಕೊಳ್ಳಲು ಆಸರೆ ಆಗಿವೆ. ಆವರಣದಲ್ಲಿ 50ಕ್ಕೂ ಹೆಚ್ಚು ಟ್ಯೂಬ್ ಲೈಟ್ ಹಾಕಿದ್ದು, ಬಹುತೇಕ ಲೈಟ್‍ಗಳು ಉರಿಯುವುದಿಲ್ಲ. ಸಂಜೆ ಆಗುತ್ತಿದ್ದಂತೆ ಕತ್ತಲು ಆವರಿಸುವ ಪರಿಣಾಮ ರಾತ್ರಿ ಹೊತ್ತು ಬಸ್‌ಗಾಗಿ ಕಾಯುವ ಒಬ್ಬಂಟಿ ಮಹಿಳೆಯರಿಗೆ ಭಯದ ವಾತಾವರಣ ಸೃಷ್ಟಿಸಿದೆ.

ಲೈಟ್ ಬದಲಿಸುವಂತೆ ಹಲವು ಭಾರಿ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಕ್ರಮ ಕೈಗೊಂಡಿಲ್ಲ. ನಿರ್ದಿಷ್ಟ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸುವುದರಿಂದ ಬಸ್ ನಿಲುಗಡೆಗೂ ತೀವ್ರ ಸಮಸ್ಯೆ ಎದುರಾಗಿದೆ.

ಅಗತ್ಯ ಸೌಲಭ್ಯಗಳ ಕೊರತೆ ಈ ನಿಲ್ಧಾಣದಲ್ಲಿ ಎದ್ದು ಕಾಣುತ್ತಿದೆ. ಇದರಿಂದ ಇಲ್ಲಿಗೆ ಬರುವ ಪ್ರಯಾಣಿಕರಿಗೆ ತಾಪತ್ರಯ ತಪ್ಪುತ್ತಿಲ್ಲ. ಸರ್ಕಾರದ ಶಕ್ತಿ ಯೋಜನೆ ಜಾರಿ ಆದಾಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮೂಲಸೌಲಭ್ಯಗಳನ್ನ ಒದಗಿಸಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.

ಕೊಳವೆ ಬಾವಿ ಕೆಟ್ಟು ಮೂರು ವರ್ಷವಾಗಿದೆ. ಸಾರಿಗೆ ಸಂಸ್ಥೆಯವರು ದುರಸ್ತಿ ಕಾರ್ಯ ಮಾಡುತ್ತಿಲ್ಲ. ನೀರಿನ ಪೂರೈಕೆ ಇಲ್ಲದೆ ಶೌಚಾಲಯ ಸ್ವಚ್ಛತೆ ಕಾಣುತ್ತಿಲ್ಲ. ಆವರಣದಲ್ಲಿನ ಗಿಡಗಳು ಒಣಗುತ್ತಿವೆ. ಈಗಿರುವ ಆಸನಗಳು ಕಡಿಮೆ ಇದ್ದು ಶಕ್ತಿ ಯೋಜನೆ ಜಾರಿ ಆದಾಗಿನಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ ಸಮಪರ್ಕಕ ಆಸನಗಳ ವ್ಯವಸ್ಥೆ ಮಾಡಬೇಕುಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು.
ಮಂಜು ಕುಂಬಾರ, ಯುವ ಮುಖಂಡ.
ನಿಲ್ಧಾಣದ ಒಳಗೆ ವಿದ್ಯುತ್ ಬಲ್ಬ್‌ಗಳು ಹಾಳಾಗಿ ವರ್ಷವೇ ಆಗಿದ್ದು ರಿಪೇರಿ ಕೆಲಸ ನಡೆದಿಲ್ಲ. ಹೊಸ ಬಲ್ಬ್‌ ಅಳವಡಿಕೆ ಕೊಳವೆಬಾವಿ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿಕೊಟ್ಟರು ಸಾರಿಗೆ ಸಂಸ್ಥೆ ನಿರ್ಲಕ್ಷ್ಯ ವಹಿಸಿದೆ
ಬಸವರಾಜ ಕರಿಗಾರ, ರೈತ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ
ನಿಲ್ಧಾಣದಲ್ಲಿನ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ನೀರಿನ ಸಮಸ್ಯೆ ವಿದ್ಯುತ್ ಬಲ್ಬ್‌ ಅಳವಡಿಕೆ ಶೌಚಾಲಯಗಳ ದುರಸ್ತಿ ಕಾರ್ಯಕ್ಕೆ ಕೂಡಲೇ ಸೂಚಿಸಲಾಗುವುದು
ಮಾರ್ತಾಂಡಪ್ಪ ಸುಂಕದ, ಪ್ರಭಾರಿ ಎಇಇ, ಸಾರಿಗೆ ಸಂಸ್ಥೆ ಗದಗ ವಿಭಾಗ
ಮುಳಗುಂದ ಬಸ್ ನಿಲ್ಧಾಣ ಮೂತ್ರಾಲಯದ ಕಮೋಡ್ ಗಳ ಪೈಪ್ ಒಡೆದಿರುವುದು
ಮುಳಗುಂದ ಬಸ್ ನಿಲ್ಧಾಣ ಮೂತ್ರಾಲಯದ ಕಮೋಡ್ ಗಳ ಪೈಪ್ ಒಡೆದಿರುವುದು
ನಿಲ್ಧಾಣದಲ್ಲಿ ಆಸನಗಳಿಲ್ಲ ಹೀಗಾಗಿ ಬಸ್ ಗಾಗಿ ಹೊರಗೆ ನೆಲದ ಮೇಲೆ ಕುಳಿತ ಪ್ರಯಾಣಿಕರು
ನಿಲ್ಧಾಣದಲ್ಲಿ ಆಸನಗಳಿಲ್ಲ ಹೀಗಾಗಿ ಬಸ್ ಗಾಗಿ ಹೊರಗೆ ನೆಲದ ಮೇಲೆ ಕುಳಿತ ಪ್ರಯಾಣಿಕರು
ನಿಲ್ಧಾಣದ ಆವರಣದಲ್ಲಿ ಕಸ ಬೆಳೆದು ಅದರ ಮಧ್ಯೆ ಕೊಳವೆ ಬಾವಿ ಮುಚ್ಚಿರುವುದು
ನಿಲ್ಧಾಣದ ಆವರಣದಲ್ಲಿ ಕಸ ಬೆಳೆದು ಅದರ ಮಧ್ಯೆ ಕೊಳವೆ ಬಾವಿ ಮುಚ್ಚಿರುವುದು
ನಿಲ್ಧಾಣದ ನಿಯಂತ್ರಣಾಧಿಕಾರಿ ಕುಳಿತುಕೊಳ್ಳಲು ಖುರ್ಚಿ ಇಲ್ಲದೆ ಹರಿದ ಸಿಟ್ ಬಳಸಿರುವುದು
ನಿಲ್ಧಾಣದ ನಿಯಂತ್ರಣಾಧಿಕಾರಿ ಕುಳಿತುಕೊಳ್ಳಲು ಖುರ್ಚಿ ಇಲ್ಲದೆ ಹರಿದ ಸಿಟ್ ಬಳಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT