ಸೋಮವಾರ, ಜನವರಿ 25, 2021
25 °C
ಗದಗ ಜಿಲ್ಲೆಯಲ್ಲಿ ಮೃತಪ್ರಾಣಿಗಳ ವಿಲೇವಾರಿಗೆ ಇಲ್ಲ ಪ್ರತ್ಯೇಕ ವ್ಯವಸ್ಥೆ

ಸತ್ತ ಪ್ರಾಣಿಗಳಿಗೆ ಗೌರವಯುತ ಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಬೆಂಗಳೂರು, ಚೆನ್ನೈ, ಹೈದರಾಬಾದ್‌ನಂತಹ ಮಹಾನಗರಗಳಲ್ಲಿ ಇರುವಂತೆ ಜಿಲ್ಲಾ ಕೇಂದ್ರಗಳಲ್ಲಿ ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆಂದೇ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಇಲ್ಲ. ಆದರೆ, ಸತ್ತ ಪ್ರಾಣಿಗಳನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವ ಕಕ್ಕುಲತೆ ಬೆಳೆಸಿಕೊಂಡಿರುವ ಮನಸ್ಸುಗಳು ಜೀವಂತವಾಗಿವೆ.

ರಸ್ತೆ ಬದಿಯಲ್ಲಿ ಸತ್ತು ಬಿದ್ದಿರುವ ಪ್ರಾಣಿಗಳು ಸ್ಥಳೀಯ ಸಂಸ್ಥೆಗಳ ಘನತ್ಯಾಜ್ಯ ಘಟಕಗಳಲ್ಲಿ ಮಣ್ಣಾದರೆ; ಮನೆಯಲ್ಲಿ ಸಾಕಿದ ನಾಯಿ, ಬೆಕ್ಕು, ಪಶು– ಪಕ್ಷಿಗಳ ಅಂತ್ಯ ಸಂಸ್ಕಾರ ಮಾಲೀಕಕ ಜಮೀನಿನಲ್ಲೇ ನಡೆಯುತ್ತದೆ. ಸಾಕುಪ್ರಾಣಿಗಳ ಬಗ್ಗೆ ಅತಿಯಾದ ಮೋಹ ಬೆಳೆಸಿಕೊಂಡವರು ಅವುಗಳಿಗೆ ಗೋರಿ ಕಟ್ಟಿಸಿ, ವರ್ಷಕ್ಕೊಮ್ಮೆ ‍ಪೂಜೆಯನ್ನೂ ಮಾಡುತ್ತಾರೆ. ಕೆಲವರು ಪ್ರಾಣಿಗಳನ್ನು ಹೂತು, ಅದರ ಮೇಲೊಂದು ಗಿಡ ನೆಟ್ಟು ನೆನಪನ್ನು ಚಿರಸ್ಥಾಯಿಯಾಗಿಸುತ್ತಾರೆ.

‘ಮೆಟ್ರೊ ಪಾಲಿಟನ್‌ ಸಿಟಿಗಳಲ್ಲಿ ಇರುವಂತೆ ಜಿಲ್ಲೆಯಲ್ಲಿ ಪ್ರಾಣಿಗಳ ಸ್ಮಶಾನ ಇಲ್ಲ. ಜಾನುವಾರುಗಳು ಸತ್ತರೆ ರೈತರು ಅವುಗಳನ್ನು ಕೊಂಡೊಯ್ದು ತಮ್ಮದೇ ಜಮೀನಿನಲ್ಲಿ ಹೂಳುತ್ತಾರೆ. ರಸ್ತೆಯಲ್ಲಿ ಸತ್ತು ಬಿದ್ದಿರುವ ಪ್ರಾಣಿ ಪಕ್ಷಿಗಳು ಸಾಂಕ್ರಾಮಿಕ ರೋಗ ಹರಡುತ್ತವೆ. ಇದನ್ನು ತಪ್ಪಿಸಲು ಸ್ಥಳೀಯ ಸಂಸ್ಥೆಗಳು ಅವುಗಳನ್ನು ಕೊಂಡೊಯ್ದು ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಹೂಳುತ್ತಾರೆ’ ಎನ್ನುತ್ತಾರೆ ಗದುಗಿನ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಗುರುರಾಜ ಮನಗೋಳಿ.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಾಕಿದ ಅಥವಾ ಬೀದಿ ನಾಯಿ, ಹಂದಿ, ಬೆಕ್ಕು, ಕುದುರೆಗಳು ಮೃತಪಟ್ಟಾಗ ಇಲ್ಲಿನ ಪುರಸಭೆಯ ಪೌರಕಾರ್ಮಿಕರು ಅವುಗಳನ್ನು ಪಟ್ಟಣದಿಂದ 2 ಕಿ.ಮೀ. ದೂರದಲ್ಲಿನ ಘನತ್ಯಾಜ್ಯ ಘಟಕಕ್ಕೆ ತೆಗೆದುಕೊಂಡು ಹೋಗಿ ಗುಂಡಿ ತೋಡಿ ಹೂಳುತ್ತಾರೆ.

ಮೊದಲು ಮೃತ ಹಂದಿಗಳಿಗೂ ಪುರಸಭೆ ಪೌರಕಾರ್ಮಿಕರೇ ಮುಕ್ತಿ ಕಾಣಿಸುತ್ತಿದ್ದರು. ಆದರೆ, ಇದೀಗ ಹಂದಿಗಳನ್ನು ಸಾಕಿದ ಮಾಲಿಕರೇ ಬಂದು ಸತ್ತ ಹಂದಿ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.

ಪಟ್ಟಣದ ಯಾವುದೇ ಸ್ಥಳದಲ್ಲಿ ಯಾವುದೇ ಪ್ರಾಣಿ ಸತ್ತರೂ ಕೂಡಲೇ ಪುರಸಭೆ ಸಿಬ್ಬಂದಿ ಅದನ್ನು ಸಾಗಿಸುವ ಉತ್ತಮ ವ್ಯವಸ್ಥೆ ಇದೆ. ಆದರೆ, ಪ್ರಾಣಿಗಳನ್ನು ಹೂಳಲೆಂದೇ ಪ್ರತ್ಯೇಕ ಸ್ಮಶಾನದ ವ್ಯವಸ್ಥೆ ಇಲ್ಲ. ಕೆಲವರು ಸತ್ತ ಬೆಕ್ಕುಗಳನ್ನು ಹೂಳದೆ ರಸ್ತೆ ಬದಿಗೆ ಎಸೆದು ಹೋಗುತ್ತಾರೆ. ಇಂತಹ ಘಟನೆಗಳು ಗಮನಕ್ಕೆ ಬಂದಾಗ ಮತ್ತೆ ಪುರಸಭೆಯವರೇ ಅವುಗಳ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಇನ್ನು ಪ್ರೀತಿಯ ಜಾನುವಾರುಗಳು ಮೃತಪಟ್ಟಾಗ ರೈತರೇ ಅವುಗಳನ್ನು ತಮ್ಮ ಹೊಲದಲ್ಲಿ ಹೂಳುವ ಪದ್ಧತಿ ಈಗಲೂ ಇದೆ.

‘ಪಟ್ಟಣದಲ್ಲಿ ಪ್ರಾಣಿಗಳು ಮೃತಪಟ್ಟ ಸುದ್ದಿ ಬಂದ ತಕ್ಷಣ ಪೌರಕಾರ್ಮಿಕರು ಹೋಗಿ ಅವುಗಳನ್ನು ತಂದು ಘನತ್ಯಾಜ್ಯ ಘಟಕದಲ್ಲಿ ಗುಂಡಿ ತೋಡಿ ಹೂಳುತ್ತಾರೆ. ಇದರಿಂದಾಗಿ ದುರ್ವಾಸನೆಯೂ ಬರುವುದಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳುತ್ತಾರೆ.

ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧವಿರುತ್ತಿತ್ತು. ಹೀಗಾಗಿ ಊರ ದನಗಳನ್ನು ಮೇಯಿಸಲು ಗೋಮಾಳ ಮೀಸಲಿಡುವುದರ ಜೊತೆಗೆ ಸಾಕಿದ ಪ್ರಾಣಿಗಳು ಸತ್ತರೆ ಅವುಗಳನ್ನು ಹೊಲಗಳಲ್ಲಿ, ಊರ ಹೊರಗೆ ಹೂಳುತ್ತಿದ್ದರು.

ಆದರೆ, ಮಾನವೀಯ ಮೌಲ್ಯಗಳು ಕ್ಷೀಣಿಸಿದಂತೆ ರಸ್ತೆ ಅಪಘಾತ, ವಿದ್ಯುತ್ ಅವಘಡ ಸೇರಿದಂತೆ ಇತರೆ ಕಾರಣಗಳಿಂದ ಸತ್ತ ಪ್ರಾಣಿ-ಪಕ್ಷಿಗಳನ್ನು ಜನರು ನೋಡಿಕೊಂಡು ಹಾಗೆಯೇ ಹೋಗುತ್ತಾರೆ. ಅವುಗಳ ಅಂತ್ಯ ಸಂಸ್ಕಾರಕ್ಕೆ ಮುಂದಾಗುವುದಿಲ್ಲ.

ಗಜೇಂದ್ರಗಡ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಸತ್ತ ಪ್ರಾಣಿಗಳನ್ನು ಹೂಳಲು ಸ್ವಲ್ಪ ಜಾಗ ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ರಸ್ತೆ ಅಪಘಾತಗಳಲ್ಲಿ ಇತರೆ ಕಾರಣಗಳಿಂದ ಸತ್ತ ಪ್ರಾಣಿಗಳನ್ನು ಯಾರೂ ಸಹ ಮುಟ್ಟುವುದಿಲ್ಲ. ಅವುಗಳ ಮೃತದೇಹ ಅಲ್ಲಿಯೇ 3-4 ದಿನಗಳ ಕಾಲ ಬಿದ್ದಿರುತ್ತವೆ. ಅವುಗಳ ಮೇಲೆ ವಾಹನಗಳು ಹರಿದು ಅಲ್ಲಿಯೇ ಅಪ್ಪಚ್ಚಿಯಾಗಿ ಹೋಗುತ್ತವೆ. ಸತ್ತ ಪ್ರಾಣಿಗಳ ಕುರಿತು ಯಾರಾದರೂ ಪುರಸಭೆಯವರಿಗೆ ತಿಳಿಸಿದರೆ ಮಾತ್ರ ಸಿಬ್ಬಂದಿ ಬಂದು ಸತ್ತ ಪ್ರಾಣಿಯನ್ನು ಎಳೆದುಕೊಂಡು ಹೋಗಿ ಊರ ಹೊರಗೆ ಬಿಸಾಕುತ್ತಾರೆ.

‘ಜಾನುವಾರುಗಳ ಅಂತ್ಯ ಸಂಸ್ಕಾರಕ್ಕೆಂದು ಪಶು ಸಂಗೋಪನೆ ಇಲಾಖೆ ಮೂಲಕ ಸ್ಮಶಾನ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೆ, ಕೆಲವು ರೈತರು ಇದರ ಬಗ್ಗೆ ಚರ್ಚಿಸುತ್ತಾರೆ. ಅದು ಸಾಕಾರಗೊಳ್ಳಬೇಕಿದೆ’ ಎಂದು ನರಗುಂದದ ಪಶು ವೈದ್ಯಾಧಿಕಾರಿ ಡಾ.ವೆಂಕಟೇಶ ಎಸ್. ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ನರಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮನುಷ್ಯರ ಅಂತ್ಯಸಂಸ್ಕಾರಕ್ಕೆ ಇರುವ ಸ್ಮಶಾನದ ಹಾಗೆ ಪಶುಗಳಿಗೆ, ಜಾನುವಾರುಗಳ ಅಂತ್ಯ ಸಂಸ್ಕಾರಕ್ಕೆ ಜಾಗ ಇಲ್ಲ. ಸ್ವಂತ ಹೊಲ ಇಲ್ಲದವರು ಸತ್ತ ಪ್ರಾಣಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುತ್ತಾರೆ. ಇದರಿಂದ ಅದು ಅಲ್ಲಿಯೇ ಕೊಳೆತು ದುರ್ವಾಸನೆಯೊಂದಿಗೆ ಅನೇಕ ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. mಆದ್ದರಿಂದ ಜಾನುವಾರುಗಳ ಸ್ಮಶಾನ ನಿರ್ಮಾಣಕ್ಕೆ ಸಾರ್ವಜನಿಕರಿಂದ ಒತ್ತಾಯ ಹೆಚ್ಚಾಗಿದೆ.

‘ಜಾನುವಾರುಗಳಿಗಾಗಿ ಪ್ರತ್ಯೇಕ ಸ್ಮಶಾನ ನಿರ್ಮಿಸಿಲ್ಲ. ರೈತರು ತಮ್ಮ ತಮ್ಮ ಹೊಲದಲ್ಲಿ ಹೂಳುತ್ತಾರೆ. ಪ್ರತ್ಯಕೇ ಸ್ಥಳಕ್ಕೆ ಬೇಡಿಕೆ ಬಂದರೆ ಅದನ್ನು ಆಡಳಿತ ಮಂಡಳಿ ಮೂಲಕ ಚರ್ಚಿಸಿ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಆದರೆ ಸಾರ್ವಜನಿಕವಾಗಿ ಸತ್ತ ಜಾನುವಾರು, ನಾಯಿ, ವಿವಿಧ ಪ್ರಾಣಿಗಳನ್ನು ತ್ಯಾಜ್ಯ ಸಂಗ್ರಹ ಘಟಕದಲ್ಲಿ ಆಳವಾಗಿ ಹೂಳಿ ಅಂತ್ಯ ಸಂಸ್ಕಾರ
ಮಾಡಲಾಗುತ್ತಿದೆ’ ಎಂದು ನರಗುಂದ ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್.ಬ್ಯಾಳಿ ತಿಳಿಸಿದರು.

ಹೊಲ ಇಲ್ಲದವರು ಏನು ಮಾಡಬೇಕು?
‘ಮನುಷ್ಯರು ಸತ್ತ ಮೇಲೆ ಅವರಿಗೆ ಸಿಗುವ ಗೌರವ ಅಪರಿಮಿತ. ಎಲ್ಲ ರೀತಿಯಿಂದಲೂ ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದ್ದ ಜಾನುವಾರುಗಳು ಸತ್ತರೆ ಅವುಗಳನ್ನು ನಮ್ಮ ಹೊಲದಲ್ಲಿ ಹೂಳುತ್ತೇವೆ. ಅದು ನಮ್ಮ ಕರ್ತವ್ಯವು ಹೌದು. ಆದರೆ, ಹೊಲ ಇಲ್ಲದವರು ಏನು ಮಾಡಬೇಕು?, ಬೀದಿ ಜಾನುವಾರುಗಳು ಸತ್ತಾಗ ಅವುಗಳನ್ನು ಹೂಳುವುದಾದರೂ ಎಲ್ಲಿ? ಈ ವಿಚಾರವಾಗಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಅವುಗಳ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು’ ಎಂದು ಆಗ್ರಹಿಸುತ್ತಾರೆ ನರಗುಂದದ ವಾಸು ಚವ್ಹಾಣ.

ಫಲವತ್ತಾದ ಗೊಬ್ಬರ: ರುದ್ರೇಶ್‌
‘ಜಾನುವಾರುಗಳು ಸತ್ತರೆ ರೈತರು ಅವುಗಳನ್ನು ತಮ್ಮದೇ ಜಮೀನುಗಳಲ್ಲಿ ಹೂಳುತ್ತಾರೆ. ಗಿಡ ಮರಗಳ ಪಕ್ಕದಲ್ಲಿ ಹೂತರೆ ಫಲವತ್ತಾದ ಗೊಬ್ಬರ ಆಗುತ್ತದೆ’ ಎನ್ನುತ್ತಾರೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್‌ ಎಸ್‌.ಎನ್‌.

‘ರಸ್ತೆ ಬದಿಯಲ್ಲಿ ಸತ್ತು ಬಿದ್ದಿರುವ ಪ್ರಾಣಿಗಳ ವಿಲೇವಾರಿಗೆ ಘನ ತ್ಯಾಜ್ಯ ನಿರ್ವಹಣೆ ಘಟಕಗಳಲ್ಲಿ ಸ್ವಲ್ಪ ಜಾಗವನ್ನು ಮೀಸಲಿಡಲಾಗಿದೆ. ಅದರ ಜತೆಗೆ ನಗರಸಭೆ ವತಿಯಿಂದ ನೆಟ್ಟಿರುವ ಗಿಡಗಳ ಪಕ್ಕದಲ್ಲಿ ಗುಂಡಿ ತೆಗೆದು ಮಣ್ಣು ಮಾಡುವ ಪದ್ಧತಿಯನ್ನೂ ಅನುಸರಿಸಲಾಗುತ್ತಿದೆ. ಪ್ರಾಣಿಗಳ ದೇಹ ಮಣ್ಣಿನಲ್ಲಿ ಕರಗಿದರೆ ಗಿಡಗಳು ಫಲವತ್ತಾಗಿ ಬೆಳೆಯುತ್ತವೆ’ ಎನ್ನುತ್ತಾರೆ ಅವರು.

ಮಂಗಗಳಿಗೆ ಪ್ರತ್ಯೇಕ ಸ್ಮಶಾನ
ಮಂಗನಿಂದ ಮಾನವ ಎಂಬ ಮಾತಿದೆ. ಅಲ್ಲದೆ ಮಂಗನನ್ನು ಹನುಮಂತನ ಅಪರಾವತಾರ ಎನ್ನಲಾಗುತ್ತದೆ. ಹೀಗಾಗಿ ಗಜೇಂದ್ರಗಡ ತಾಲ್ಲೂಕಿನಲ್ಲಿ ಮಂಗಗಳು ಸತ್ತರೆ ಅವುಗಳ ಮೃತದೇಹಕ್ಕೆ ಹಾರ ಹಾಕಿ ಮೆರವಣಿಗೆ ಮೂಲಕ ಕೊಂಡೊಯ್ದು ಪೂಜೆ ಮಾಡಿ ಶವ ಸಂಸ್ಕಾರ ಮಾಡಲಾಗುತ್ತದೆ. ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಂಗಗಳನ್ನು ಹೂಳಲು ಪ್ರತ್ಯೇಕ ಸ್ಮಶಾನವಿದೆ.

ತಗ್ಗುಗಳಲ್ಲೇ ಮಣ್ಣು
ಮುಂಡರಗಿ ಪಟ್ಟಣದ ಬೀದಿ ಬದಿಯಲ್ಲಿ ಸತ್ತು ಬಿದ್ದಿರುವ ಹಂದಿ ಹಾಗೂ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಪ್ರಭಾವಿ ವ್ಯಕ್ತಿಗಳು ಪುರಸಭೆಯ ಸಿಬ್ಬಂದಿಗೆ ತಿಳಿಸಿದರೆ ಮಾತ್ರ ಅವರು ಬಂದು ಕೊಂಡೊಯ್ಯುತ್ತಾರೆ. ಜನ ಸಾಮಾನ್ಯರು ತಿಳಿಸಿದರೆ ಸಂಜೆ, ನಾಳೆ ಎಂದು ಸತಾಯಿಸುತ್ತಾರೆ ಎಂದು ಸಾರ್ವಜನಿಕರು ದೂರುತ್ತಾರೆ.

ಪಟ್ಟಣದ ಹೆಸರೂರು ರಸ್ತೆಯ ಬಳಿ ಸುಮಾರು ಏಳು ಎಕರೆ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸಲಾಗಿದೆ. ಅಲ್ಲಿ ಒಣ ಹಾಗೂ ಹಸಿ ಕಸದ ವಿಂಗಡನೆಯ ಜೊತೆಗೆ ಸತ್ತ ಪ್ರಾಣಿಗಳನ್ನು ಹೂಳಲು ಬೃಹತ್ ತಗ್ಗುಗಳನ್ನು ನಿರ್ಮಿಸಲಾಗಿದೆ. ಸತ್ತಿರುವ ಪ್ರಾಣಿಗಳನ್ನು ಅದರಲ್ಲಿ ಹಾಕಿ ಮಣ್ಣು ಮುಚ್ಚಲಾಗುತ್ತದೆ. ತಾಲ್ಲೂಕಿನಲ್ಲಿ ಪ್ರಾಣಿ ದಯಾ ಸಂಘಗಳು ಇಲ್ಲ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಶ್ರೀಶೈಲ ಎಸ್‌.ಕುಂಬಾರ, ಬಸವರಾಜ ಹಲಕುರ್ಕಿ, ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್‌.ಹಣಗಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು