ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನ, ನಮ್ಮ ಧ್ವನಿ: ತೈಲ ಬೆಲೆ ಏರಿಕೆ; ಪರ್ಯಾಯ ಮಾರ್ಗದತ್ತ ಒಲವು

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಳಿತ– ಕಂಗಾಲಾದ ಶ್ರೀಸಾಮಾನ್ಯ
Last Updated 7 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಗದಗ: ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕ ಹಾಗೂ ರಾಜ್ಯ ಸರ್ಕಾರ ಮಾರಾಟ ತೆರಿಗೆ ಇಳಿಕೆ ಮಾಡಿರುವುದರಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ತುಸು ತಗ್ಗಿದೆ. ಆದರೆ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಇಂಧನ ದರದಲ್ಲಿ ಆದ ಸತತ ಏರಿಕೆ ಕಂಡು ಬೆಚ್ಚಿ ಬಿದ್ದಿರುವ ವಾಹನ ಸವಾರರು ಈಗ ಬೈಕ್‌ ಅಥವಾ ಕಾರುಗಳನ್ನು ಹೊರಕ್ಕೆ ತೆಗೆಯಬೇಕಾದರೂ ನೂರು ಬಾರಿ ಯೋಚಿಸುತ್ತಿದ್ದಾರೆ. ಕೆಲವರು ಪೆಟ್ರೋಲ್‌, ಡೀಸೆಲ್‌ ಚಾಲಿತ ವಾಹನಗಳ ಸಹವಾಸವೇ ಬೇಡವೆಂದು ಬ್ಯಾಟರಿ ಚಾಲಿತ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ದಿನಬಳಕೆ ವಸ್ತುಗಳ ಬೆಲೆಗಳ ಏರಿಳಿತದ ಮೇಲೆ ಇಂಧನ ದರ ನೇರ ಪ್ರಭಾವ ಬೀರುತ್ತದೆ. 18 ತಿಂಗಳಿಂದ ಇಂಧನ ದರ ನಿರಂತರವಾಗಿ ಏರುತ್ತಾ ಸಾಗಿದ್ದರಿಂದ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಇದರಿಂದ ಬಡವರು ಮತ್ತು ಮಧ್ಯಮವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂದರ್ಭದಲ್ಲಿ ಅನೇಕರು ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಯೋಚಿಸಿದರು. ಒಂದು ಬಾರಿ ದೊಡ್ಡ ಮೊತ್ತ ವಿನಿಯೋಗಿಸಿ, ದಿನನಿತ್ಯದ ನಿರ್ವಹಣೆಗೆ ಕಡಿಮೆ ವೆಚ್ಚ ಬೇಡುವ ಬ್ಯಾಟರಿ ಚಾಲಿತ ವಾಹನಗಳನ್ನು ಕೊಳ್ಳುವತ್ತ ಮನಸ್ಸು ಮಾಡಿದ್ದಾರೆ.

ಗದಗ ನಗರದಲ್ಲಿ ಎಲೆಕ್ಟ್ರಿಕ್‌ ಬೈಕ್‌ಗಳ ಮಾರಾಟ ಮಳಿಗೆಗಳು ಆರಂಭಗೊಂಡಿದ್ದು, ಬುಕಿಂಗ್‌ಗಳು ಉತ್ತಮವಾಗಿದೆ. ನಗರ ಪ್ರದೇಶದವರಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದ ಜನರು ಕೂಡ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಕೊಳ್ಳುತ್ತಿದ್ದಾರೆ.

‘₹74 ಸಾವಿರ ವಿನಿಯೋಗಿಸಿ ಬ್ಯಾಟರಿ ಚಾಲಿತ ಹಿರೋ ಆಕ್ಸಿಮಾ ಬೈಕ್ ಖರೀದಿ ಮಾಡಿದ್ದೇನೆ. ಬ್ಯಾಟರಿ ಚಾರ್ಜ್‌ ಮಾಡಲು ಎರಡು ಯುನಿಟ್‍ಗೆ ₹10 ವೆಚ್ಚವಾಗುತ್ತದೆ. ಇದರಿಂದ ಕನಿಷ್ಠ 60ರಿಂದ 70 ಕಿ.ಮೀ ಸಂಚಾರ ಮಾಡಬಹುದು. 10 ಕಿ.ಮೀ ಮುಂಚಿತವಾಗಿ ಬ್ಯಾಟರ್ ಚಾರ್ಜ್‌ ಖಾಲಿಯಾಗಲಿದೆ ಸೂಚನೆ ನೀಡುವುದು ಸೇರಿದಂತೆ ಹಲವು ವೈಶಿಷ್ಟತೆಯನ್ನು ವಿದ್ಯುತ್ ಚಾಲಿತ ಬೈಕ್ ಹೊಂದಿದೆ’ ಎನ್ನುತ್ತಾರೆ ಡಂಬಳ ಗ್ರಾಮದ ಬಸವರಡ್ಡಿ ಬಂಡಿಹಾಳ.

‘ಇಂಧನ ದರ ಏರಿಕೆಯಿಂದಾಗಿ ಅನೇಕರು ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ, ಸಿಎನ್‌ಜಿ ಕಾರು ಖರೀದಿಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಇವುಗಳ ಬಳಕೆಯಿಂದ ಹಣ ಉಳಿತಾಯದ ಜತೆಗೆ ಪರಿಸರ ಸ್ನೇಹಿ ವಾಹನ ಬಳಸಿದಂತೆಯೂ ಆಗುತ್ತದೆ’ ಎನ್ನುತ್ತಾರೆ ಸಿಎನ್‌ಜಿ ಕಾರು ಮಾಲೀಕ ಮಲ್ಲಿಕಾರ್ಜುನ ಗೌಡಣ್ಣವರ.

ಡೀಸೆಲ್ ದರ ಏರಿಕೆ, ಕೃಷಿ ಖರ್ಚು ಹೆಚ್ಚಳ

ಮುಳಗುಂದ: ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಳದ ಜತೆಗೆ ಕೃಷಿ ಚಟುವಟಿಕೆಗಳ ಖರ್ಚು ಕೂಡ ದುಬಾರಿಯಾಗಿದೆ.

ಹೊಲ ಹಸನು ಮಾಡುವುದರಿಂದ ಹಿಡಿದು ಬಿತ್ತಿ, ಕಳೆ ತೆಗೆದು, ಬೆಳೆ ಕಟಾವು ಸೇರಿದಂತೆ ಒಕ್ಕಣೆ ಮಾಡುವುದು ಕೂಡ ಯಂತ್ರಗಳಿಂದಲೇ ನಡೆಯುತ್ತಿದೆ. ಹೀಗಾಗಿ ರೈತರು ಡೀಸೆಲ್ ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ ಡೀಸೆಲ್ ದರ ಏರಿಕೆ ಆಗುತ್ತಿರುವ ಪರಿಣಾಮ ಕೃಷಿ ಚಟುವಟಿಕೆ ವೆಚ್ಚ ಹೆಚ್ಚಾಗಿದೆ.

ಆದರೆ ರೈತನ ಬೆಳೆಗೆ ಸೂಕ್ತ ಬೆಲೆ ಸಿಗದಾಗಿದ್ದು ಕೃಷಿ ಕಾರ್ಯಕ್ಕೆ ಪರ್ಯಾಯ ಮಾರ್ಗವಿಲ್ಲದೇ ನಷ್ಟ ಅನುಭವಿಸುವಂತಾಗಿದೆ. ಪೆಟ್ರೋಲ್ ದರ ಏರಿಕೆಯಿಂದಾಗಿ ಕೂಲಿ ಕಾರ್ಮಿಕರು ಹಾಗೂ ಸ್ವಉದ್ಯೋಗಿಗಳಿಗೆ ಹೊರೆಯಾಗುತ್ತಿದೆ. ದೂರದ ಊರಿಗೆ ಕೂಲಿ ಕೆಲಸಕ್ಕೆ ಬೈಕ್ ಬಳಸುತ್ತಿದ್ದ ಕಾರ್ಮಿಕರು ದುಡಿಮೆಯ ಅರ್ಧ ಹಣವನ್ನು ಪೆಟ್ರೋಲ್‌ಗೆ ಖರ್ಚು ಮಾಡಬೇಕಿದೆ.

‘ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ದಿನಬಳಕೆ ವಸ್ತುಗಳ ಬೆಲೆ ಸಹ ಏರಿಕೆಯಾಗಿದ್ದು ಸಾಮಾನ್ಯ ಮತ್ತು ಮದ್ಯಮ ವರ್ಗದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಬೆಲೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕು’ ಎನ್ನುತ್ತಾರೆ ಗ್ರಾಮದ ಬಿ.ವಿ.ಸುಂಕಾಪೂರ.

ಸ್ವಂತ ವಾಹನ ಬಳಕೆ ಕಡಿಮೆ ಮಾಡುತ್ತಿರುವ ಜನರು

ಗಜೇಂದ್ರಗಡ: ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ತೈಲ ಬೆಲೆ ಏರಿಕೆಯಿಂದ ಜನರು ಸ್ವಂತ ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡದೆ ದೂರದ ಊರುಗಳಿಗೆ ಬಸ್, ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.

ಪ್ರತಿದಿನ ಬೇರೆ ಊರುಗಳಿಗೆ ಕಚೇರಿಗೆ ಹೋಗುವ ನೌಕರರು ತಮ್ಮ ಸ್ವಂತ ವಾಹನಗಳನ್ನು ಬಳಕೆ ಮಾಡದೆ, ಹೊಂದಾಣಿಕೆಯೊಂದಿಗೆ ಸಹೋದ್ಯೋಗಿಗಳ ವಾಹನಗಳಲ್ಲಿ ಅಥವಾ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಈ ಮೊದಲು ವಾರಕ್ಕಾಗುವಷ್ಟು ಪೆಟ್ರೋಲ್, ಡೀಸೆಲ್ ಹಾಕಿಸುತ್ತಿದ್ದ ಜನರು ಬೆಲೆ ಏರಿಕೆಯಿಂದ ವಾರಕ್ಕಾಗುವಷ್ಟು ಇಂಧನ ಹಾಕಿಸಲು ಆಗದೆ, ಅವಶ್ಯಕತೆ ಇದ್ದಾಗ ಎರಡಮೂರು ದಿನಗಳಿಗೊಮ್ಮೆ ಇಂಧನ ಹಾಕಿಸುತ್ತಿದ್ದಾರೆ. ಇದರಿಂದ ಬಂಕ್‌ಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ.

ತೈಲ ಬೆಲೆ ಏರಿಕೆಯಿಂದ ರೈತರು ಟ್ರಾಕ್ಟರ್‌ಗಳ ಮೂಲಕ ಉಳುಮೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿಸುವುದು ದುಬಾರಿಯಾಗಿದ್ದು, ಕೃಷಿ ಮಾಡುವುದು ಕಷ್ಟಕರವಾಗಿದೆ ಎಂಬ ಮಾತುಗಳು ರೈತರಿಂದ ಕೇಳಿ ಬರುತ್ತಿವೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು, ಬದುಕು ನಡೆಸುವುದು ದುಸ್ತರವಾಗಿದೆ. ಇಂತಹ ಸ್ಥಿತಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೆ ಸರ್ಕಾರಗಳು ಮೇಲಿನ ಸುಂಕ ಕಡಿಮೆ ಮಾಡಿ ಜನಸಾಮಾನ್ಯರ ನೆರವಿಗೆ ಬರುವ ಬದಲು ಮೊಂಡುತನ ಪ್ರದರ್ಶಿಸುತ್ತಿರುವುದು ದುರದೃಷ್ಟಕರ ಎನ್ನುತ್ತಾರೆ ಕರವೇ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್.ಸೋಂಪುರ.

ನಿತ್ಯ ಜೀವನದಲ್ಲಿ ಬದಲಾವಣೆ

ರೋಣ: ತೈಲ ದರ ಏರಿಕೆ ಆಗುತ್ತಿರುವ ಕಾರಣದಿಂದ ಪಟ್ಟಣದಲ್ಲಿ ಸೈಕಲ್‌ ಬಳಕೆ ಮಾಡುವವರು ಹಾಗೂ ಎಲೆಕ್ಟ್ರಿಕ್ ಬೈಕ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೇ ಅಲ್ಲದೆ ದೀಪಾವಳಿ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟಿಗಳ ಖರೀದಿಯೂ ಜೋರಾಗಿ ನಡೆದಿದೆ.

ಜನರು ಜಾಸ್ತಿ ಇದ್ದಾಗ ಮಾತ್ರ ರೈತರು ಟ್ರಾಕ್ಟರ್‌ ಮೂಲಕ ಹೊಲಕ್ಕೆ ಹೋಗುತ್ತಿದ್ದಾರೆ. ಉಳಿದ ಸಂದರ್ಭದಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಜನರ ನಿತ್ಯ ಜೀವನದಲ್ಲಿ ಬದಲಾವಣೆಗಳು ಕಂಡು ಬರುತ್ತಿವೆ.

ಸರ್ಕಾರಿ ಬಸ್‌ ಅವಲಂಬಿಸಿದ ಜನರು

ನರೇಗಲ್:‌ ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿರುವ ಕಾರಣದಿಂದ ಜನರು ಸರ್ಕಾರಿ ಸಾರಿಗೆ ವಾಹನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಿದ್ದಾರೆ. ಅದರಲ್ಲೂ ಪಟ್ಟಣದ ಶಾಲಾ ಕಾಲೇಜಿಗೆ ದಿನವೂ ಬರುವ ಶಿಕ್ಷಕರು, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಪಟ್ಟಣ ಪಂಚಾಯ್ತಿ, ರೈತ ಸಂಪರ್ಕ ಕೇಂದ್ರ ಸೇರಿದಂತೆ ಖಾಸಗಿ ಅಂಗ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಈಗ ಸಂಪೂರ್ಣವಾಗಿ ಸರ್ಕಾರಿ ಸಾರಿಗೆ ವಾಹನಗಳ ಮೇಲೆ ಅವಲಂಬನೆಯಾಗಿದ್ದಾರೆ.

ರೈತರು ಸಣ್ಣಪುಟ್ಟ ಕೆಲಸಕ್ಕೂ ಬೈಕ್‌ ತೆಗದುಕೊಂಡು ಹೊಲಕ್ಕೆ ಹೋಗುತ್ತಿದ್ದವರು ಈಗ ಸಮೀಪದ ಹೊಲಗಳಿಗೆ ನಡೆದುಕೊಂಡು ದೂರದ ಹೊಲಗಳಿಗೆ ಮಾತ್ರ ವಾಹನದ ಮೂಲಕ ಹೋಗುತ್ತಿದ್ದಾರೆ.

‘ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ ಪರಿಣಾಮದಿಂದ ಬಡ ಹಾಗೂ ಮಧ್ಯಮ ವರ್ಗದವರ ಜನರು ಪರಿತಪಿಸುವಂತಾಗಿದೆ. ಆರೋಗ್ಯ ಹಾಗೂ ಇತರೆ ತುರ್ತು ಕೆಲಸಕ್ಕೆ ಹೋಗಬೇಕಾದರೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯರಾಜ್ಯ ಘಟಕದ ಉಪಾಧ್ಯಕ್ಷ ಮೈಲಾರಪ್ಪ ವೀ. ಚಳ್ಳಮರದ.

‘ತೈಲ ದರ ಏರಿಕೆಯಿಂದ ರೈತರು ಒಂದು ಎಕರೆ ರಂಟೆ ಹೊಡೆಯಲು, ಹೊಲ ಹರಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಹಾಲಕೆರೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎ.ಸಿ.ಪಾಟೀಲ.

ದರ ಏರಿಕೆ ಬಿಸಿ: ಕಾಲ್ನಡಿಗೆಯತ್ತ ಒಲವು

ನರಗುಂದ: ಪೆಟ್ರೋಲ್- ಡೀಸೆಲ್ ದರ ಏರಿಕೆ ಬಿಸಿ ಪಟ್ಟಣ ಹಾಗೂ ತಾಲ್ಲೂಕಿನ ಜನರಿಗೆ ತಟ್ಟಿದೆ. ಇದರಿಂದ ಕೆಲವರು ತಮ್ಮ ದ್ವಿಚಕ್ರ ವಾಹನಗಳನ್ನು ಮನೆಯಲ್ಲಿ ಬಿಟ್ಟು ಸಣ್ಣಪುಟ್ಟ ಕೆಲಸಗಳಿಗೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ‌

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯ ಕೆಲವು ನೌಕರರು ತಮ್ಮ ವಾಹನಗಳನ್ನು ಮನೆಯಲ್ಲೇ ಬಿಟ್ಟು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಬೈಕ್‌ಗಳಲ್ಲಿ ಸಂಚರಿಸುವವರು ಬೈಕ್‌ ಪೂಲಿಂಗ್‌ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಅರ್ಧ ಕಿ.ಮೀ.ಗೂ ಬೈಕ್ ಬಳಸುತ್ತಿದ್ದವರು ಕಾಲ್ನಡಿಗೆ ಮೂಲಕ ತಮ್ಮ ಕಚೇರಿ ಕೆಲಸಗಳಿಗೆ ತೆರಳುತ್ತಿರುವ ದೃಶ್ಯಗಳು ಕೂಡ ಕಾಣಸಿಗುತ್ತವೆ.

ಜತೆಗೆ ಕೆಲವರು ಪೆಟ್ರೋಲ್ ಚಾಲಿತ ವಾಹನ ಮಾರಾಟ ಮಾಡಿ, ಬ್ಯಾಟರಿ ಚಾಲಿತ ಬೈಕ್ ಖರೀದಿ ಮಾಡುತ್ತಿದ್ದಾರೆ. ಈಗ ಅವುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಬೈಕ್ ವ್ಯಾಪಾರಸ್ಥರು ಹೇಳುತ್ತಾರೆ.

‘ನಿತ್ಯ ಒಂದು ಲೀಟರ್ ಪೆಟ್ರೋಲ್‌ಗೆ ₹100 ಕೊಡೋಕೆ ನಮ್ಮಂತಹ ಖಾಸಗಿ ಶಾಲಾ ಶಿಕ್ಷಕರಿಗೆ ಆಗಲ್ಲ. ಆದ್ದರಿಂದ ಬೈಕ್ ಬಿಟ್ಟು ಬಸ್‌ಗೆ ಬರುತ್ತಿರುವೆ’ ಎಂದು ಪಟ್ಟಣದ ಖಾಸಗಿ ಶಾಲಾ ಶಿಕ್ಷಕ, ಸುರೇಬಾನದ ಡಿ.ಬಿ.ಪಾಟೀಲ ಹೇಳಿದರು.

ವಿದ್ಯುತ್‍ ಚಾಲಿತ ವಾಹನಗಳತ್ತ ಜನತೆ

ಲಕ್ಷ್ಮೇಶ್ವರ: ದಿನದಿಂದ ದಿನಕ್ಕೆ ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚುತ್ತಲೇ ಇದ್ದು ಜನರು ವಿದ್ಯುತ್‍ಚಾಲಿತ ಮತ್ತು ಎಲ್‌ಪಿಜಿ ವಾಹನಗಳತ್ತ ಚಿತ್ತ ಹರಿಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಅಲ್ಪಮಟ್ಟಿಗೆ ಕಡಿಮೆ ಮಾಡಿದೆ. ಆದರೆ ಇದು ಜನರಿಗೆ ತೃಪ್ತಿ ತಂದಿಲ್ಲ. ಪೆಟ್ರೋಲ್ ರೇಟ್ ಹೆಚ್ಚಾಗುತ್ತಿರುವುದರಿಂದ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಲಕ್ಷ್ಮೇಶ್ವರ ಶಿವಾ-ಇ- ಮೋಟಾರ್ಸ್‍ನ ಶಿವಾನಂದ ಮುಳಗುಂದ ಹೇಳುತ್ತಾರೆ.

‘ಪೆಟ್ರೋಲ್ ದರ ಹೆಚ್ಚಾಗುತ್ತಿರುವುದರಿಂದ ಬೈಕ್ ಬಳಕೆಯನ್ನು ಕಡಿಮೆ ಮಾಡುತ್ತಿದ್ದೇನೆ’ ಎನ್ನುತ್ತಾರೆ ರಾಮಣ್ಣ ಲಮಾಣಿ ಶಿಗ್ಲಿ.

ಸರ್ಕಾರ ಇಂಧನ ಬೆಲೆ ಬಹಳಷ್ಟು ಕಡಿಮೆ. ಆದರೆ, ಇದರಿಂದ ಬಡ ಗ್ರಾಹಕರಿಗೆ ಉಪಯೋಗ ಆಗುವುದಿಲ್ಲ’ ಎಂದು ವಕೀಲ ಬಿ.ಎಸ್. ಬಾಳೇಶ್ವರಮಠ ಹೇಳಿದರು.

***

ಡೀಸೆಲ್ ದರ ಏರಿಕೆಯಿಂದ ಕೃಷಿ ಕೆಲಸದ ಖರ್ಚು ಶೇ 50ರಷ್ಟು ಹೆಚ್ಚಳವಾಗಿದೆ. ಆದರೆ ಫಸಲಿಗೆ ಸೂಕ್ತ ದರ ಸಿಗುತ್ತಿಲ್ಲ. ಸರ್ಕಾರ ಇದನ್ನೂ ಏರಿಕೆ ಮಾಡಬೇಕು.

- ಡಿ.ಜಿ.ಯಳವತ್ತಿ, ಮುಳಗುಂದ

***

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನರು ವಸ್ತುಗಳನ್ನು ಖರೀದಿಸಲಾಗದೇ ಒದ್ದಾಡುತ್ತಿದ್ದಾರೆ. ಕಾಯಕ ಮಾಡಿಕೊಂಡು ಜೀವನ ನಡೆಸಲು ಪರದಾಡುತ್ತಿದ್ದಾರೆ.

- ಮಿಥುನ್‌ ಜಿ. ಪಾಟೀಲ, ಉಪಾಧ್ಯಕ್ಷ ರೋಣ ಪುರಸಭೆ

***

ತೈಲ ದರ ಏರಿಕೆ ಮಾಡಿರುವ ಕಾರಣದಿಂದಾಗಿ ಜನರ ಆರ್ಥಿಕ ಸಮಸ್ಯೆ ಬಿಗಡಾಯಿಸಿದೆ. ಇದರಿಂದಾಗಿ ಜನ ಸಾಮಾನ್ಯರ ನೆಮ್ಮದಿ ದೂರಾಗಿದೆ

- ಮಂಜುಳಾ ರೇವಡಿ, ನರೇಗಲ್‌ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ

***

ಪೆಟ್ರೋಲ್, ಡಿಸೇಲ್‍ ದರ ಜತೆಗೆ ಅಡುಗೆ ಅನಿಲದ ಬೆಲೆಯನ್ನೂಕಡಿಮೆ ಮಾಡಬೇಕಿತ್ತು.

- ಪದ್ಮನಾಭ ಶೆಟ್ಟಿ, ಹೋಟೆಲ್‌ ಉದ್ಯಮಿ, ಲಕ್ಷ್ಮೇಶ್ವರ

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಚಂದ್ರಶೇಖರ ಭಜಂತ್ರಿ, ಶ್ರೀಶೈಲ ಎಂ. ಕುಂಬಾರ, ಡಾ. ಬಸವರಾಜ ಹಲಕುರ್ಕಿ, ಚಂದ್ರು ರಾಥೋಡ್‌, ಲಕ್ಷ್ಮಣ ಎಚ್ ದೊಡ್ಡಮನಿ, ನಾಗರಾಜ ಎಸ್‌.ಹಣಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT