ನರಗುಂದ: ‘ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯು ರಾಜ್ಯ ಸರ್ಕಾರ ಪ್ರಾಯೋಜಿತ ಗಲಭೆಯಾಗಿದೆ’ ಎಂದು ಶಾಸಕ ಸಿ.ಸಿ.ಪಾಟೀಲ ಆರೋಪಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸ್ ಅನುಮತಿ ಪಡೆದು ಗಣೇಶ ಪ್ರತಿಷ್ಠಾಪನೆ ಮಾಡಿದ ಪ್ರಮುಖ ವ್ಯಕ್ತಿಯನ್ನೇ ಇಲ್ಲಿ ಎ1 ಆರೋಪಿಯನ್ನಾಗಿ ಬಂಧಿಸಲಾಗಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ, ಶಿರಿಯಾ ವ್ಯವಸ್ಥೆ ಇದೆಯೋ ತಿಳಿಯದಾಗಿದೆ’ ಎಂದು ಸರ್ಕಾರದ ವ್ಯವಸ್ಥೆ ವಿರುದ್ಧ ಕಿಡಿಕಾರಿದರು.
‘ಗಣೇಶ ಹಬ್ಬವನ್ನು ಭಯದಿಂದ ಆಚರಿಸುವಂತಹ ಸನ್ನಿವೇಶಗಳು ಕಂಡುಬರುತ್ತಿವೆ. ಮುಸ್ಲಿಮರು ಲಾಂಗ್, ಮಚ್ಚು, ಪೆಟ್ರೋಲ್ ಬಾಂಬ್ ಹಿಡಿದು ದಾಂದಲೆ ಮಾಡಿದ್ದಾರೆ. ಹಿಂದೂಗಳ ಆಸ್ತಿಪಾಸ್ತಿಗಳನ್ನು ಸುಟ್ಟು ಹಾಕಿದ್ದಾರೆ. ಇಷ್ಟೆಲ್ಲಾ ನಡೆದರೂ ಗೃಹ ಸಚಿವ ಜಿ.ಪರಮೇಶ್ವರ ಅವರು ಇದೊಂದು ಸಣ್ಣ ಘಟನೆ ಎಂದಿದ್ದಾರೆ. ಇಷ್ಟೆಲ್ಲಾ ಘಟನೆಗಳಿಗೆ ಮುಖ್ಯಮಂತ್ರಿ ಉತ್ತರಿಸಬೇಕು’ ಎಂದರು.
‘ಚನ್ನಪಟ್ಟಣ ಉಪಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರವು ಗಲಭೆಗೆ ಪ್ರಚೋದನೆ ನೀಡಿದೆ. ಬಂಧನವಾಗಿರುವ ಹಿಂದೂಗಳ ಬಿಡುಗಡೆ ಕೂಡಲೇ ಆಗಬೇಕು. 136 ಕಾಂಗ್ರೆಸ್ ಶಾಸಕರು ಕೇವಲ ಮುಸ್ಲಿಂ ಮತಗಳಿಂದ ಚುನಾಯಿತರಾಗಿಲ್ಲ. ಹಿಂದೂಗಳ ಬಿಡುಗಡೆಗೆ ಕಾಂಗ್ರೆಸ್ ಶಾಸಕರಾರೂ ಧ್ವನಿ ಎತ್ತುತ್ತಿಲ್ಲ. ಘಟನೆಗೆ ಸಂಭಂದಿಸಿದಂತೆ ಉನ್ನತ ಪೋಲಿಸ್ ಅಧಿಕಾರಿಗಳ ತಲೆದಂಡ ಆಗಲೇಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ಹಿಂದೂಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಎಸ್ ಆರ್ ಹಿರೇಮಠ, ಅಜ್ಜಪ್ಪ ಹುಡೇದ, ಎಸ್ ಆರ್ ಪಾಟೀಲ, ಶಿವಾನಂದ ಮುತ್ತವಾಡ, ಮುತ್ತಣ್ಣ ಹಾಗೂ ಪುರಸಭೆಯ ಬಿಜೆಪಿ ಸದಸ್ಯರು ಇದ್ದರು.