ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್:‌ ಹೊಸಹಳ್ಳಿ ರಸ್ತೆ ತುಂಬಾ ಕಸದ ರಾಶಿ!

ಸ್ವಚ್ಛತೆ ಮಾಯ: ಅನೇಕ ಕಡೆ ಚರಂಡಿ ತುಂಬಾ ಹೂಳು
ಚಂದ್ರು ಎಂ. ರಾಥೋಡ್‌
Published : 11 ಸೆಪ್ಟೆಂಬರ್ 2024, 4:35 IST
Last Updated : 11 ಸೆಪ್ಟೆಂಬರ್ 2024, 4:35 IST
ಫಾಲೋ ಮಾಡಿ
Comments

ನರೇಗಲ್:‌ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಮಾಯವಾಗಿದೆ. ಗ್ರಾಮದ ತುಂಬಾ ರಸ್ತೆಯಲ್ಲಿಯೇ ಹಾಗೂ ಮನೆಯ ಮುಂದೆ ತಿಂಗಳಾನುಗಟ್ಟಲೆ ಕಸದ ರಾಶಿ ಬಿದ್ದಿರುತ್ತದೆ. ಚರಂಡಿ ತುಂಬಾ ಹೂಳು ತುಂಬಿರುತ್ತದೆ. ಅನೇಕ ಕಡೆಗಳಲ್ಲಿ ಕೊಳಚೆ ನೀರಿನಿಂದ ದುರ್ವಾಸನೆ ಬೀರುತ್ತಿದೆ. ಮಳೆ ಬಂದರೆ ಹೆಜ್ಜೆ ಇಡದಂತೆ ರಸ್ತೆಗಳು ಜಲಾವೃತಗೊಳ್ಳುತ್ತವೆ. ಇದರ ನಡುವೆಯೇ ವಾಸ ಮಾಡಬೇಕಾದ ಸ್ಥಿತಿಯನ್ನು ಗ್ರಾಮದ ಜನರು ಎದುರಿಸುತ್ತಿದ್ದಾರೆ.

1ನೇ ವಾರ್ಡ್‌ನ ಪರಿಶಿಷ್ಟ ಸಮುದಾಯದವರ ಕಾಲೊನಿಯಲ್ಲಿ ರಸ್ತೆಯಲ್ಲಿಯೇ ಕಸದ ರಾಶಿ ಬಿದ್ದಿದೆ. ಕಸದ ರಾಶಿಯಿಂದ ಸಂಚಾರಕ್ಕೂ ತೊಂದರೆಯಾಗಿದೆ. ಅಷ್ಟೇ ಅಲ್ಲದೆ ತಿಂಗಾಳನುಗಟ್ಟಲೆ ಕಸದ ರಾಶಿ ಅಲ್ಲಿಯೇ ಇರುವ ಕಾರಣ ಕೋಳಿ, ನಾಯಿ ಹಾಗೂ ಇತರ ಪ್ರಾಣಿಗಳು ಕಸವನ್ನು ಓಣಿಯ ತುಂಬಾ ಹರಡುತ್ತವೆ. ಇದರಿಂದ ಸೊಳ್ಳೆಗಳ ಉತ್ಪತ್ತಿಯೂ ಜಾಸ್ತಿಯಾಗಿದೆ. ಸುತ್ತಮುತ್ತಲಿನ ನಿವಾಸಿಗಳು ಕಸದ ರಾಶಿಯ ದುರ್ವಾಸನೆಗೆ ಬೇಸತ್ತಿದ್ದಾರೆ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿಗೆ ಒಳಗಾಗಿದ್ದಾರೆ. ಚರಂಡಿ ನಿರ್ಮಾಣ ಮಾಡದೇ ಇರುವ ಕಾರಣ ಜನರು ಬಳಕೆ ಮಾಡಿದ ನೀರು ರಸ್ತೆಗೆ ಬರುತ್ತದೆ. ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದ ಹತ್ತಿರ ಚರಂಡಿ ಸ್ವಚ್ಛಗೊಳಿಸದೇ ಇರುವ ಕಾರಣ ಹೂಳು ತುಂಬಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿಲ್ಲ, ಪೌಡರ್‌ ಹಾಕಿಲ್ಲ. ಇತರ ವಾರ್ಡ್‌ಗೆ ನೀಡುವ ಕಾಳಜಿಯನ್ನು ನಮ್ಮ ಪರಿಶಿಷ್ಟ ಸಮುದಾಯದವರ ವಾರ್ಡ್‌ಗೆ ನೀಡುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಾನಿಕ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿಗಳಾದ ದ್ಯಾಮಣ್ಣ ಕನಕಪ್ಪ ಮಾದರ, ಹನಮಂತ ಮಾದರ ಆಗ್ರಹಿಸಿದರು.

‘ವಿಪರೀತವಾಗಿ ಸಂಚಾರ ಮಾಡುವ ಟ್ರ್ಯಾಕ್ಟರ್‌ನವರು ರಸ್ತೆಯಲ್ಲಿ ಮಣ್ಣು ಹಾಕಿ ಹೋಗುತ್ತಿರುವ ಕಾರಣ ಸಿಸಿ ರಸ್ತೆ ಮಾಯವಾಗಿದೆ. ಅಲ್ಲಲ್ಲಿ ದೊಡ್ಡಪ್ರಮಾಣದ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದರೆ ಜಾರಿ ಬೀಳುವಂಥ ವಾತಾವರಣ ನಿರ್ಮಾಣವಾಗಿದೆ’ ಎಂದು ಚಂದ್ರು ಮಾದರ, ಬಸವರಾಜ ಯಮನಪ್ಪ ಮಾದರ ದೂರಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಸ್ತೆ ಒಂದು ಕಡೆ ಏರು, ಒಂದು ಕಡೆ ಇಳಿಜಾರು ಆಗಿರುವ ಕಾರಣ ಮಳೆ ಬಂದರೆ ರಸ್ತೆ ತುಂಬಾ ನೀರು ನಿಲ್ಲುತ್ತದೆ. ಜೋರು ಮಳೆ ಬಂದಾಗ ಶಾಲೆಯೊಳಗೆ ನುಗ್ಗುತ್ತದೆ. ಖಾಸಗಿ ವ್ಯಕ್ತಿಗಳು ರಸ್ತೆಯ ಒತ್ತುವರಿ ಹಾಗೂ ಅವರಿಚ್ಛೆಗೆ ತಕ್ಕಂತೆ ರಸ್ತೆಯ ಏರಿಳಿತ ಹೆಚ್ಚಿಸಿರುವ ಕಾರಣ ಮಕ್ಕಳಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಸರಿಪಡಿಸಬೇಕು ಎಂದು ರೋಣಪ್ಪ ಮಾದರ, ಫಕೀರಪ್ಪ ಮಾದರ ಆಗ್ರಹಿಸಿದರು.

ನರೇಗಲ್‌ ಹೋಬಳಿಯ ಹೊಸಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಎದುರಿನ ರಸ್ತೆ
ನರೇಗಲ್‌ ಹೋಬಳಿಯ ಹೊಸಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಎದುರಿನ ರಸ್ತೆ
ಗ್ರಾಮ ಪಂಚಾಯಿತಿಯಿಂದ ಎಷ್ಟೇ ತಿಳಿವಳಿಕೆ ನೀಡಿದರೂ ಜನರು ರಸ್ತೆಗೆ ಕಸ ತಂದು ಹಾಕುತ್ತಾರೆ. ಇದರಿಂದ ಸಾಕಾಗಿದೆ. ಆದರೂ ಸ್ವಚ್ಛತಾ ಕಾರ್ಯಗಳನ್ನು ತಪ್ಪದೇ ಮಾಡಿಸುತ್ತಿದ್ದೇವೆ
ಬಸಪ್ಪ ಕಲ್ಲಪ್ಪ ಮಾರನಬಸರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊಸಹಳ್ಳಿ
ಶಾಲೆ ಎದುರಿನ ರಸ್ತೆ ಸಮಸ್ಯೆ ಕುರಿತು ಪಿಡಬ್ಲೂಡಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಪೌರಕಾರ್ಮಿಕರನ್ನು ನೇಮಿಸುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಪತ್ರ ಬರೆಯಲಾಗಿದೆ
ಶಿವಪ್ಪ ಪರಸಪ್ಪ ತಳವಾರ ಪಿಡಿಒ ಹೊಸಹಳ್ಳಿ
ನರೇಗಲ್‌ ಹೋಬಳಿ ಹೊಸಹಳ್ಳಿಯ ಚರಂಡಿಯಲ್ಲಿ ಹಾಗೂ ಅದರ ಸುತ್ತಲೂ ಬೆಳೆದಿರುವ ಗಿಡಗಂಟಿ
ನರೇಗಲ್‌ ಹೋಬಳಿ ಹೊಸಹಳ್ಳಿಯ ಚರಂಡಿಯಲ್ಲಿ ಹಾಗೂ ಅದರ ಸುತ್ತಲೂ ಬೆಳೆದಿರುವ ಗಿಡಗಂಟಿ

ಗ್ರಾ.ಪಂನಲ್ಲಿ ಒಬ್ಬರೂ ಸಿಬ್ಬಂದಿ ಇಲ್ಲ!

ಗ್ರಾಮದ ಕೆಲಸ ಮಾಡಲು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಒಬ್ಬರೂ ಸಿಬ್ಬಂದಿ ಇಲ್ಲ. ಮೊದಲಿನವರು ನಿವೃತ್ತರಾಗಿದ್ದಾರೆ. ಹಾಗಾಗಿ ಕೂಲಿ ರೂಪದಲ್ಲಿ ತೆಗೆದುಕೊಂಡು ಕೆಲಸ ಮಾಡಿಸುತ್ತೇವೆ. ಮಳೆಗಾಲದಲ್ಲಿ ಹೊಲದ ಕೆಲಸ ಜೋರು ಇದ್ದಾಗ ಯಾರೂ ಗ್ರಾಮ ಪಂಚಾಯಿತಿ ಕೆಲಸಕ್ಕೆ ಬರುವುದಿಲ್ಲ. ಆದರೂ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಜಾಗೃತಿ ವಹಿಸಿದ್ದೇವೆ. ಶಾಲೆಯ ಮುಂದಿರುವ ರಸ್ತೆಯ ತೊಂದರೆ ಸರಿಪಡಿಸುವುದಕ್ಕಾಗಿ ₹ 3 ಲಕ್ಷ ಅನುದಾನ ಬಂದಿದೆ. ಅದನ್ನು ಬಳಕೆ ಮಾಡಿಕೊಂಡು ಎಸ್‌ಡಿಎಂಸಿಯವರೇ ಮಾಡಿಸುತ್ತಾರೆ. ಈಗಾಗಲೇ ಗರಸು ಹಾಕಿ ಅಲ್ಲಿ ನೀರು ನಿಲ್ಲದಂತೆ ಮಾಡಿದ್ದೇವೆ. ಅಲ್ಲಿಯ ರಸ್ತೆಯಲ್ಲಿ ನಿಲ್ಲುವ ಬಂಡಿ ಟ್ರ್ಯಾಕ್ಟರ್‌ ಹಾಗೂ ಅಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲು ನೋಟಿಸ್‌ ನೀಡಲಾಗಿದೆ. ಮಾತು ಕೇಳದೇ ಇದ್ದರೆ ಪೊಲೀಸ್‌ ಸಹಾಯ ಪಡೆದು ಮಕ್ಕಳಿಗೆ ಅನಕೂಲ ಮಾಡಿಕೊಡುತ್ತೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಪ್ಪ ಕಲ್ಲಪ್ಪ ಮಾರನಬಸರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT