ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್:‌ ಮಳೆ ಬಂದರೆ, ಮನೆ ಮುಂದೆ ನಿಲ್ಲುವ ನೀರು

ಹಾಲಕೆರೆಯಲ್ಲಿ ಚರಂಡಿ, ಸಿಸಿ ರಸ್ತೆ ಸಮಸ್ಯೆ
ಚಂದ್ರು ಎಂ. ರಾಥೋಡ್
Published 29 ಮೇ 2024, 4:44 IST
Last Updated 29 ಮೇ 2024, 4:44 IST
ಅಕ್ಷರ ಗಾತ್ರ

ನರೇಗಲ್:‌ ಸಮೀಪದ ಹಾಲಕೆರೆ ಗ್ರಾಮದ ವಿವಿಧ ಕಾಲೊನಿಗಳಲ್ಲಿ ಚರಂಡಿಗಳನ್ನು ನಿರ್ಮಿಸಿಲ್ಲ. ಸಿಸಿ ರಸ್ತೆಗಳನ್ನೂ ಮಾಡಿಲ್ಲ. ಹಾಗಾಗಿ ಮಳೆ ಬಂದರೆ ಮನೆ ಮುಂದೆ ಅಪಾರ ಪ್ರಮಾಣದಲ್ಲಿ ನಿಲ್ಲುವ ನೀರಿನಿಂದ ರಸ್ತೆ ಕೆಸರುಗದ್ದೆಯಂತೆ ಆಗುತ್ತದೆ.

ಚರಂಡಿ ಇರುವ ಕಡೆಗಳಲ್ಲಿ ಸ್ವಚ್ಛತೆ ಕೈಗೊಳ್ಳದ ಕಾರಣ ದುರ್ನಾತ ಬೀರುತ್ತಿದೆ. ಇಲ್ಲಿನ 3ನೇ ವಾರ್ಡ್‌ನ ಐತಿಹಾಸಿಕ ಅನ್ನದಾನೇಶ್ವರ ಮಠದ ಹಿಂದಿನ ಓಣಿಯಲ್ಲಿ ಅರ್ಧದವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ಮಾಡಿದ್ದಾರೆ. ಇದರಿಂದ ಪರಸಿವರೆಗಿನ ಮನೆಗಳ ಮುಂದೆ ಅಪಾರ ಪ್ರಮಾಣದಲ್ಲಿ ನೀರು ನಿಲುತ್ತದೆ. ಪರಸಿಯು ಎತ್ತರವಾಗಿದ್ದು, ರಸ್ತೆ ತಗ್ಗು ಪ್ರದೇಶದಲ್ಲಿದೆ. ಇದರಿಂದ ಜೋರು ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುತ್ತದೆ. ಅನೇಕ ಬಾರಿ ಇಲ್ಲಿ ಜನ ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ. ಕ್ರಮವಹಿಸಲು ಮನವಿ ಮಾಡಿದರೂ ಅಧಿಕಾರಿಗಳು ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳಾದ ಹೇಮಾ ಹಾಲಕೆರೆ, ನೂರಸಾಬ್‌ ನದಾಫ್‌, ಅಂದಮ್ಮ ಪ್ರಭಣ್ಣವರ, ಪ್ರಕಾಶ ತಳವಾರ ಆರೋಪಿಸಿದರು.

‘ಕರಮುಡಿಗೆ ಕಡೆಗೆ ಹೋಗುವ ಓಣಿಯಲ್ಲಿ ಚರಂಡಿಯಲ್ಲಿ ಹೂಳು ತುಂಬಿದ್ದು, ಅನೇಕ ಕಡೆ ಹುಲ್ಲು ಬೆಳೆದಿದೆ. ಇದರಿಂದ ನೀರು ಹರಿದು ಹೋಗದೆ ಅಲ್ಲಿಯೇ ನಿಲ್ಲುತ್ತಿದೆ. ಹಾಗಾಗಿ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗಿ ರೋಗ ಹರಡುತ್ತಿದೆ’ ಎಂದು ಸ್ಥಳೀಯ ನಿವಾಸಿ ಹನಮಂತ ಭಜಂತ್ರಿ ಅಳಲು ತೋಡಿಕೊಂಡರು.

ಅಂಬೇಡ್ಕರ್‌ ನಗರದ ಮುಂದಿಲಮನಿ ಓಣಿಯಲ್ಲಿ ಚರಂಡಿಯೇ ಇಲ್ಲ. ಇದರಿಂದ ಮಳೆ ಬಂದಾಗ ಹಾಗೂ ಮನೆಯಲ್ಲಿ ಬಳಕೆ ಮಾಡಿದ ನೀರು ಹರಿದು ಹೋಗಲು ದಾರಿಯೇ ಇಲ್ಲವಾಗಿದೆ.

ಈಚೆಗೆ ಸುರಿದ ಮಳೆ ನೀರು ಹರಿದು ಹೋಗದ ಕಾರಣ ಓಣಿಯ ನಿವಾಸಿ ವೃದ್ದ ಮಹಿಳೆ ರೇಣಮ್ಮ ಮುಂದಲಮನಿ, ಸಲಕೆ ಹಿಡಿದು ನೀರು ಹರಿದು ಹೋಗಲು ದಾರಿ ಮಾಡಿದರು. ‘25 ವರ್ಷಗಳಿಂದ ಈ ತನಕ ನಮ್ಮ ಓಣಿಗೆ ಚರಂಡಿ ವ್ಯವಸ್ಥೆ ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಅದೇ ಓಣಿಯಲ್ಲಿ ಸ್ವಲ್ಪ ಮುಂದಕ್ಕೆ ಹೋದರೆ ಮಳೆ ಬಂದಾಗ ಹೊಲದಿಂದ ಅಪಾರ ಪ್ರಮಾಣದಲ್ಲಿ ಬರುವ ನೀರು ಹರಿದು ಹೋಗಲು ದಾರಿಯೇ ಇಲ್ಲವಾಗಿದೆ. ಇದರಿಂದ ಕೃಷಿ ಹೊಂಡದಂತೆ ನೀರು ನಿಲ್ಲುತ್ತದೆ. ಮಕ್ಕಳು ಬಿದ್ದರೆ ಸಮಸ್ಯೆಗಳಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.

ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಇಂದಿಗೂ ಯಾರೂ ಕ್ರಮವಹಿಸಿಲ್ಲ

-ಬಸಪ್ಪ ಮಾರನಬಸರಿ ಅನ್ನದಾನೇಶ್ವರ ನಗರ

ಚರಂಡಿ ಇಲ್ಲದ ಕಾರಣ ನಾವೇ ಸಲಕೆ ಹಿಡಿದು ನೀರಿಗೆ ಹರಿವು ಮಾಡುತ್ತೇವೆ. ನಮ್ಮ ಗೋಳು ಕೇಳುವವರು ಇಲ್ಲ

-ರೇಣಮ್ಮ ಮುಂದಲಮನಿ ಅಂಬೇಡ್ಕರ್‌ ನಗರ

ಮಳೆ ಬಂದಾಗ ಮನೆಯಿಂದ ಮುಖ್ಯ ರಸ್ತೆಗೆ ಈಜಿಕೊಂಡು ಹೋಗುವಷ್ಟು ನೀರು ನಿಲ್ಲುತ್ತದೆ

-ಹೇಮಾ ಹಾಲಕೆರೆ 3ನೇ ವಾರ್ಡ್‌ ಮಠದ ಹಿಂದಿನ ಓಣಿ

ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಬರುವ ಅನುದಾನದಲ್ಲಿ ಮೊದಲ ಆದ್ಯತೆ ನೀಡಿ ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಮುಂದಾಗುತ್ತೇವೆ

-ಗೀರೀಶಗೌಡ ಮುಲ್ಕಿಪಾಟೀಲ ಗ್ರಾ.ಪಂ ಅಧ್ಯಕ್ಷ  ಹಾಲಕೆರೆ 

ಅನ್ನದಾನೇಶ್ವರ ನಗರಕ್ಕಿಲ್ಲ ಸಿಸಿ ರಸ್ತೆ

‘ಹಾಲಕೆರೆ ಗ್ರಾಮದ ಸರ್ಕಾರಿ ಶಾಲೆಯ ಹಿಂದುಗಡೆ ಇರುವ ಅನ್ನದಾನೇಶ್ವರ ನಗರದಲ್ಲಿ ಮನೆಗಳು ನಿರ್ಮಾಣವಾಗಿ 28 ವರ್ಷಗಳು ಗತಿಸಿದ್ದರೂ ಇಂದಿಗೂ ಚರಂಡಿ ಸಿಸಿ ರಸ್ತೆ ನಿರ್ಮಾಣ ಮಾಡಿಲ್ಲ. ಈ ಕುರಿತು ಅಧಿಕಾರಿಗಳನ್ನು ಕೇಳಲು ಹೋದರೆ ಎರಡು ಗಾಡಿ ಗರಸು ತಂದು ನರೇಗಲ್‌ ದಾರಿಯಿಂದ ಸರ್ಕಾರಿ ಶಾಲೆ ವರೆಗೆ ಹಾಕಿ ಹೋಗುತ್ತಾರೆ. ಆದರೆ ಅದು ಸಾಕಾಗುವುದಿಲ್ಲ. ನಾವು ಎಲ್ಲ ರೀತಿಯ ತೆರಿಗೆ ಕಟ್ಟಿದರೂ ನಮ್ಮ ಓಣಿಗೆ ಮೂಲ ಸೌಕರ್ಯಗಳೇ ಇಲ್ಲವಾಗಿವೆ’ ಎನ್ನುತ್ತಾರೆ ಎಂದು ನಿವಾಸಿಗಳಾದ ಬಸಪ್ಪ ಮಾರನಬಸರಿ ಮಂಜುನಾಥ ವಕ್ಕಳದ ಶರಣಪ್ಪ ಭೈರಗೊಂಡ ಮುರ್ತುಸಾಬ್‌ ನದಾಫ್‌.

‘ಅಭಿವೃದ್ಧಿಗೆ ಕ್ರಮ’

‘ಸಣ್ಣ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲಾಗುವುದು. ಹೊಸದಾಗಿ ಸಿಸಿ ರಸ್ತೆ ಚರಂಡಿ ನಿರ್ಮಾಣ ಮಾಡಲು ಕ್ರಿಯಾಯೋಜನೆ ರೂಪಿಸಿ ಮುಂಬರುವ ಅನುದಾನದಲ್ಲಿ ಅಭಿವೃದ್ಧಿಗೆ ಕ್ರಮವಹಿಸಲಾಗುವುದು’ ಎಂದು ಹಾಲಕೆರೆ ಪಿಡಿಒ ಶರಣು ನರೇಗಲ್ಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT