ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಗುಂದ | ಹದಗೆಟ್ಟ ಒಳಚರಂಡಿ ವ್ಯವಸ್ಥೆ; ತಪ್ಪದ ಕಿರಿಕಿರಿ

ಚಿಂಚಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಹೆಚ್ಚಿನ ಅನೈರ್ಮಲ್ಯ
ಚಂದ್ರಶೇಖರ್ ಕ.ಭಜಂತ್ರಿ
Published 14 ಆಗಸ್ಟ್ 2024, 4:46 IST
Last Updated 14 ಆಗಸ್ಟ್ 2024, 4:46 IST
ಅಕ್ಷರ ಗಾತ್ರ

ಮುಳಗುಂದ: ಇಲ್ಲಿಗೆ ಸಮೀಪದ ಕಲ್ಲೂರ ಗ್ರಾಮದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದೆ, ಜನರಿಗೆ ರೋಗ ಭೀತಿ ಎದುರಾಗಿದೆ. ಮಳೆ ನೀರು ನಿಂತು ಇಲ್ಲಿನ ನೈರ್ಮಲ್ಯ ಹದಗೆಟ್ಟಿದೆ.

ಚಿಂಚಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರಿನ ವಾರ್ಡ್‌ ಸಂಖ್ಯೆ ಒಂದು ಮತ್ತು ಎರಡರ ನಡುವೆ ಕಳೆದ ಎರಡು ದಶಕಗಳ ಹಿಂದೆ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ನಿರ್ವಹಣೆ ಮಾಡದೆ ಇರುವುದರಿಂದ ಒಳಚರಂಡಿ ಚೇಂಬರ್‌ನಲ್ಲಿ ಹೊಳು ತುಂಬಿದೆ. ದುರಸ್ತಿ ಮಾಡಲೆಂದು ತೆಗೆದ ಮ್ಯಾನ್‌ಹೋಲ್ ಮುಚ್ಚಳ ಹಾಗೆಯೇ ಬಿಡಲಾಗಿದೆ. ಈ ಪರಿಣಾಮ ರಸ್ತೆ ಮಧ್ಯೆ ಗಲೀಜು ನೀರು ಸಂಗ್ರಹವಾಗಿ ಸಂಚಾರ ಬಂದ್‌ ಆಗಿ ನೂರಾರು ಮನೆಗಳಿಗೆ ತೊಂದರೆಯಾಗಿದೆ.

ಕೊಳಚೆಯಿಂದಾಗಿ ದುರ್ನಾತವೂ ಹೆಚ್ಚಾಗಿದೆ. ಇಲ್ಲಿನ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಆರು ತಿಂಗಳಿಂದ ಸಾಕಷ್ಟು ಬಾರಿ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿ ಮಲ್ಲಪ್ಪ ಸಕ್ರಪ್ಪನವರ ಆರೋಪಿಸಿದರು.

ವಾರ್ಡ್‌ ಸಂಖ್ಯೆ 2ರಲ್ಲಿ ಚರಂಡಿಗಳ ಸ್ವಚ್ಛತೆ ಕೈಗೊಂಡಿಲ್ಲ. ಇದರಿಂದಾಗಿ ಮನೆಗಳ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೆಲವು ಭಾಗದಲ್ಲಿ ರಸ್ತೆ ಮಧ್ಯೆ ನೀರು ನಿಂತು ಅನೈರ್ಮಲ್ಯ ಹೆಚ್ಚಾಗುತ್ತಿದೆ. ಕೊಳಚೆ ಸ್ಥಳಗಳು ಸೊಳ್ಳೆ ಉತ್ಪತ್ತಿ ತಾಣವಾಗಿ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸೊಳ್ಳೆ ನಾಶಕ ಸಿಂಪಡಣೆ ಮಾಡದ ಕಾರಣ ನಿವಾಸಿಗಳಿಗೆ ಮತ್ತಷ್ಟು ತೊಂದರೆ ಆಗುತ್ತಿದೆ.

ಊರ ಅಗಸಿ ಬಾಗಿಲ ಹತ್ತಿರ ಒಳ ಚರಂಡಿ ವ್ಯವಸ್ಥೆ ಹದಗೆಟ್ಟ ಪರಿಣಾಮ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಹಲವು ಭಾಗದಲ್ಲಿ ಮಳೆ ನೀರು ನಿಂತು ಕೊಳಚೆ ನಿರ್ಮಾಣವಾಗಿದೆ. ಆದರೆ ಸ್ವಚ್ಛತೆ ಮತ್ತು ಗ್ರಾಮದ ನೈರ್ಮಲ್ಯ ಕಾಪಾಡಬೇಕಿದ್ದ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಕೊಡಲೇ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಲ್ಲೂರ ಗ್ರಾಮದಲ್ಲಿನ ಒಳ ಚರಂಡಿ ಪೈಪ್‌ಗಳು ಚಿಕ್ಕವಿರುವ ಕಾರಣ ಮನೆಗಳ ಕೊಳಚೆ ನೀರಿನೊಂದಿಗೆ ಕಸ ಕಟ್ಟಿ ಸೇರಿಕೊಂಡು ಪದೇ ಪದೇ ಬಂದ್‌ ಆಗುತ್ತಿದೆ. ಮತ್ತೆ ಹೊಳೆತ್ತಿಸುವ ಕೆಲಸ ಕೈಗೊಳ್ಳುತ್ತೇವೆ. ಒಳಚರಂಡಿ ಪುನರ್‌ ನಿರ್ಮಾಣವೇ ಇದಕ್ಕೆ ಶಾಶ್ವತ ಪರಿಹಾರವಾಗಿದೆ
- ಬಸವರಾಜ ರಾಮರಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ಕಲ್ಲೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT