ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್: ಶೌಚಕ್ಕೆ ಬಯಲನ್ನೇ ಆಶ್ರಯಿಸಿದ ಮಹಿಳೆಯರು

ಚಂದ್ರು ಎಂ. ರಾಥೋಡ್
Published 27 ಮೇ 2024, 4:48 IST
Last Updated 27 ಮೇ 2024, 4:48 IST
ಅಕ್ಷರ ಗಾತ್ರ

ನರೇಗಲ್: ಹದಿನೇಳು ವಾರ್ಡ್‌ಗಳನ್ನು ಹೊಂದಿರುವ ನರೇಗಲ್‌ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 12 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಕೇವಲ 3 ಶೌಚಾಲಯಗಳು ಸುಸ್ಥಿತಿಯಲ್ಲಿದ್ದು, ಉಳಿದ 9 ಶೌಚಾಲಯಗಳು ಬಂದ್‌ ಆಗಿವೆ.

ಅದರಲ್ಲೂ ಕೆಲವು ಶೌಚಾಲಯಗಳು ಉದ್ಘಾಟನೆಗೊಂಡ ಮರುದಿನವೇ ಬಂದ್‌ ಆಗಿವೆ. ಇನ್ನುಳಿದವು ಎಷ್ಟೋ ವರ್ಷಗಳಿಂದ ಕಾರ್ಯನಿರ್ವಹಿಸದೇ ಪಾಳುಬಿದ್ದಿವೆ. ಹೀಗಾಗಿ ಪಟ್ಟಣದಲ್ಲಿ ಸಾರ್ವಜನಿಕ, ಸಮುದಾಯ ಮಹಿಳಾ ಶೌಚಾಲಯ ಇದ್ದೂ ಇಲ್ಲದಂತಹ ಸ್ಥಿತಿಯಿದೆ.

ವಾರ್ಡ್ ನಂ.1ರ ಕೋಚಲಾಪುರದ ಕೆರೆದಂಡೆಯ ಮೇಲೆ, ಅನ್ನದಾನೇಶ್ವರ ಕಾಲೇಜಿನ ಎದುರಿಗೆ, ವಾರ್ಡ್ ನಂ.2ರ ತೋಟಗಂಟಿಯಲ್ಲಿ, ವಾರ್ಡ್ ನಂ.3ರ ಮಲ್ಲಾಪುರ ಹಾಗೂ ಬುಲ್ಡೋಜರ್‌ ನಗರದಲ್ಲಿ, ವಾರ್ಡ್ ನಂ.17ರ ಕೋಡಿಕೊಪ್ಪದ ಹಿರೇಕೆರೆ ದಂಡೆಯ ಮೇಲೆ, ವಾರ್ಡ್ ನಂ.12ರ ಮಾವಿನಕಾಯಿ ಓಣಿಯ ಹಂಚಿನಾಳ ದಾರಿಯಲ್ಲಿ, ವಾರ್ಡ್ ನಂ.7ರ ನಾಗರಕೆರೆ ಸಮೀಪ ಹಾಲಕೆರೆ ಮಾರ್ಗದ ದಾರಿಯಲ್ಲಿ, ವಾರ್ಡ್ ನಂ.10ರ ಹಿರೇಬಾವಿ ಪಕ್ಕದಲ್ಲಿ, ವಾರ್ಡ್ ನಂ.16ರ ಕನ್ನಡ ಶಾಲೆಯ ಹಿಂದುಗಡೆ, ವಾರ್ಡ್ ನಂ.5ರ ಭೋವಿ ಕಾಲೊನಿಯಲ್ಲಿ, ವಾರ್ಡ್ ನಂ.16ರ ಪಟ್ಟಣ ಪಂಚಾಯ್ತಿ ಹಿಂದುಗಡೆ ಶೌಚಾಲಯ ನಿರ್ಮಿಸಲಾಗಿದೆ.

ಸರ್ಕಾರದ ವಿವಿಧ ಯೋಜನೆಯಡಿ ಸಮುದಾಯ ಶೌಚಾಲಯ, ಸಾಮೂಹಿಕ ಮಹಿಳಾ ಶೌಚಾಲಯ, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪ್ರತಿ ಶೌಚಾಲಯಕ್ಕೆ ಅಂದಾಜು ₹15 ಲಕ್ಷಕ್ಕೂ ಹೆಚ್ಚಿನ ಹಣವನ್ನು ಪಟ್ಟಣ ಪಂಚಾಯ್ತಿಯಿಂದ ಖರ್ಚು ಮಾಡಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರ್ವಹಣೆ ಕೊರತೆಯಿಂದ ಹಲವು ವರ್ಷಗಳಿಂದ ಅವು ಸ್ಥಗಿತಗೊಂಡಿವೆ. ಇದರಿಂದ ಇಲ್ಲಿನ ಮಹಿಳೆಯರು ಅನಿವಾರ್ಯವಾಗಿ ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಿದ್ದಾರೆ.

3ನೇ ವಾರ್ಡ್‌ನ ಬುಲ್ಡೋಜರ್‌ ನಗರದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಮಹಿಳೆಯರ ಸಾಮೂಹಿಕ ಶೌಚಾಲಯವು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಸುತ್ತಲೂ ಮುಳ್ಳಿನ ಕಂಟಿ ಬೆಳೆದಿವೆ. ಕಾಲಿಡಲು ಭಯವಾಗುವಂತಿದೆ. ಅಲ್ಲಿರುವ ನೀರಿನ ಟ್ಯಾಂಕ್‌ಗೆ ಮುಚ್ಚಳವನ್ನು ಕೆಲವೊಮ್ಮೆ ಹಾಕದೇ ಇರುವಾಗ ನಾಯಿಮರಿಗಳು ಬಿದ್ದು ಸತ್ತಿರುವ ಘಟನೆಗಳೂ ನಡೆದಿವೆ. 

ವಾರ್ಡ್‌ ನಂ.7ರ ನಾಗರಕೆರೆಯ ಸಮೀಪ ಹಾಲಕೆರೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ನಿರ್ಮಿಸಲಾಗಿರುವ ಶೌಚಾಲಯವು ನೀರಿನ ಪೂರೈಕೆ ಇಲ್ಲದಿರುವ ಕಾರಣ ಸ್ಥಗಿತಗೊಂಡು ಬಹಳ ವರ್ಷಗಳಾಗಿವೆ. ಮಹಿಳೆಯರು ಅದೇ ಶೌಚಾಲಯದ ಎದುರು ಬಯಲಲ್ಲಿ ಶೌಚಕ್ಕೆ ಮುಂದಾಗುತ್ತಾರೆ. ಆದರೆ ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಲಾಗಿದ್ದ ಶೌಚಾಲಯದ ಬಾಗಿಲು, ನೀರಿನ ಪೈಪ್‌, ಸಿಂಕ್‌ ಸೇರಿದಂತೆ ಅನೇಕ ವಸ್ತುಗಳು ಕಳ್ಳರ ಪಾಲಾಗಿವೆ.

ವಾರ್ಡ್ ನಂ.16ರಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗದ ಕೊರತೆಯಿರುವ ಕಾರಣ ಪಟ್ಟಣ ಪಂಚಾಯ್ತಿ ಪಕ್ಕದಲ್ಲಿ ಸಾಮೂಹಿಕ ಮಹಿಳಾ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಯಾವಾಗಲೂ ಕದ ಹಾಕಿರುವ ಕಾರಣದಿಂದ ಆ ಭಾಗದ ಮಹಿಳೆಯರು ಹಿರೇಕೆರೆ ದಂಡೆಗೆ ಬಯಲು ಶೌಚಕ್ಕೆ ಮುಂದಾಗುತ್ತಿದ್ದಾರೆ. ವಾರ್ಡ್ ನಂ.12ರ ಮಾವಿನಕಾಯಿ ಓಣಿಯ ಹಾಗೂ ನಾಗಕೆರೆ ಭಾಗದ ಮಹಿಳೆಯರ ಅನಕೂಲಕ್ಕಾಗಿ ಹಂಚಿನಾಳ ಮಾರ್ಗದಲ್ಲಿ ನಿರ್ಮಿಸಲಾಗಿದ್ದ ಶೌಚಾಲಯ ಸಂಪೂರ್ಣವಾಗಿ ಪಾಳುಬಿದ್ದಿದೆ. ಅಲ್ಲಿಯೂ ನಿರ್ವಹಣೆ ಕೊರತೆಯಿಂದ ಮುಳ್ಳಿನ ಕಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ಹಂಚಿನಾಳ ದಾರಿಯಲ್ಲಿಯೇ ಮಹಿಳೆಯರು ಶೌಚಕ್ಕೆ ಕುಳಿತುಕೊಳ್ಳುತ್ತಾರೆ.

ವಾರ್ಡ್‌ ನಂ. 1ರ ಅನ್ನದಾನೇಶ್ವರ ಕಾಲೇಜಿನ ಎದುರಿಗೆ ಅಂದಾಜು ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯ ಇಂದಿಗೂ ಉದ್ಘಾಟನೆಯಾಗಿಲ್ಲ. ವಾರ್ಡ್ ನಂ.10ರ ಹಿರೇಬಾವಿ ಪಕ್ಕದಲ್ಲಿ 2019-20ನೇ ಸಾಲಿನಲ್ಲಿ ಅಂದಾಜು ₹15 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಶೌಚಾಲಯಕ್ಕೆ ಇಂದಿಗೂ ಸರಿಯಾದ ರಸ್ತೆಯಿಲ್ಲ, ವಿದ್ಯುತ್‌ ಸಂಪರ್ಕವಿಲ್ಲ, ನೀರಿನ ವ್ಯವಸ್ಥೆಯಿಲ್ಲದ ಕಾರಣ ಮಹಿಳೆಯರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈಚೆಗೆ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಆದರೆ ನೀರಿನ ಪೂರೈಕೆ ಇಲ್ಲ.

ಅನೇಕ ವರ್ಷಗಳಿಂದ ಶೌಚಾಲಯಗಳು ಸ್ಥಗಿತಗೊಂಡ ಕಾರಣದಿಂದ ಮಹಿಳೆಯರು ಊರ ಹೊರ ವಲಯದಲ್ಲಿನ ಹೊಲದ ದಾರಿ, ರಸ್ತೆ ಮೇಲೆಯೇ ಶೌಚಕ್ಕೆ ಕೂಡಬೇಕು. ಇಲ್ಲವಾದರೆ ಮುಳ್ಳುಕಂಟಿ, ತಗ್ಗು ಗುಂಡಿಗಳನ್ನು ಆಶ್ರಯಿಸಬೇಕಾಗಿದೆ. ಪ್ರಮುಖ ದಾರಿಗೆ, ಹೊಲ ಹಾಗೂ ತೋಟಗಳಿಗೆ ತೆರಳುವ ಜನದಟ್ಟಣೆ ಇರುವಲ್ಲಿ ಮಹಿಳೆಯರು ಶೌಚಕ್ಕೆ ಕೂಡ್ರುವುದಾದರೂ ಹೇಗೆ? ಮಾನಕ್ಕಂಜಿ ಸೂರ್ಯೋದಯದ ಒಳಗೆ ಅಥವಾ ಸೂರ್ಯಾಸ್ತದ ನಂತರ ಶೌಚ ಮುಗಿಸಬೇಕಾಗಿದೆ. ಸಮಸ್ಯೆ ಇಷ್ಟು ಬಿಗಡಾಯಿಸಿದ್ದರೂ ನರೇಗಲ್‌ ಪಟ್ಟಣದಲ್ಲಿ ಮಹಿಳೆಯರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರೇಗಲ್‌ ಪಟ್ಟಣದ 10ನೇ ವಾರ್ಡ್‌ನ ಹಿರೇಬಾವಿ ಪಕ್ಕದಲ್ಲಿ ಪಟ್ಟಣ ಪಂಚಾಯ್ತಿಯಿಂದ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯದ ದುಃಸ್ಥಿತಿ
ನರೇಗಲ್‌ ಪಟ್ಟಣದ 10ನೇ ವಾರ್ಡ್‌ನ ಹಿರೇಬಾವಿ ಪಕ್ಕದಲ್ಲಿ ಪಟ್ಟಣ ಪಂಚಾಯ್ತಿಯಿಂದ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯದ ದುಃಸ್ಥಿತಿ
ನರೇಗಲ್‌ ಪಟ್ಟಣದ 7ನೇ ವಾರ್ಡಿನಲ್ಲಿ ನಿರ್ಮಿಸಲಾಗಿರುವ ಮಹಿಳಾ ಶೌಚಾಲಯದ ಒಳನೋಟ
ನರೇಗಲ್‌ ಪಟ್ಟಣದ 7ನೇ ವಾರ್ಡಿನಲ್ಲಿ ನಿರ್ಮಿಸಲಾಗಿರುವ ಮಹಿಳಾ ಶೌಚಾಲಯದ ಒಳನೋಟ
ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣದ ಕಾಂಪೌಂಡ್‌ ಒಳಗಿರುವ ಮಹಿಳಾ ಶೌಚಾಲಯ
ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣದ ಕಾಂಪೌಂಡ್‌ ಒಳಗಿರುವ ಮಹಿಳಾ ಶೌಚಾಲಯ
ಈಗಾಗಲೇ ನರೇಗಲ್‌ ಪಟ್ಟಣದಲ್ಲಿ ಅನೇಕ ಶೌಚಾಲಯಗಳಿದ್ದು ಹಾಳಾಗಿರುವ ಶೌಚಾಲಯಗಳನ್ನು ಪರಿಶೀಲಿಸಿ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು
ನಾಗಭೂಷಣ ಮುಖ್ಯಾಧಿಕಾರಿ ನರೇಗಲ್‌ ಪಟ್ಟಣ ಪಂಚಾಯ್ತಿ
- ಮಲ್ಲಾಪುರ ಕನ್ನಡ ಶಾಲೆ ಹಿಂದೆ ಭೋವಿ ಕಾಲೊನಿ ಹಂಚಿನಾಳ ರಸ್ತೆಯಲ್ಲಿ ಶೌಚಾಲಯಗಳಿವೆ. ಇನ್ನುಳಿದ ಶೌಚಾಲಯಗಳು ನೀರಿನ ಸಮಸ್ಯೆ ಪೈಪ್‌ಲೈನ್‌ ಸಮಸ್ಯೆಯಿಂದ ಬಂದ್‌ ಆಗಿವೆ
ರಾಮಚಂದ್ರಪ್ಪ ಕಜ್ಜಿ ಕಿರಿಯ ಆರೋಗ್ಯ ನಿರೀಕ್ಷಕ ನರೇಗಲ್‌ ಪಟ್ಟಣ ಪಂಚಾಯ್ತಿ
ವಾರ್ಡ್ ನಂ.1ರ ಮಜರೆ ಕೋಚಲಾಪುರ ಗ್ರಾಮದ ಶೌಚಾಲಯಕ್ಕೆ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಆದರೆ ನೀರು ಪೂರೈಕೆಯಾಗದ ಕಾರಣ ಸಮಸ್ಯೆಯಾಗಿದೆ.
ರಾಚಯ್ಯ ಮಾಲಗಿತ್ತಿಮಠ 1ನೇ ವಾರ್ಡ್‌ ಸದಸ್ಯ

ಚೊಂಬು ಹಿಡಿದು ಪ್ರತಿಭಟಿಸಿದರೂ ಬಗೆಹರಿಯದ

ಸಮಸ್ಯೆ ವಾರ್ಡ್ ನಂ.1ರ ಮಜರೆ ಕೋಚಲಾಪುರ ಗ್ರಾಮದಲ್ಲಿ ಒಂದು ಕಡೆ ಹೊಸದಾಗಿ ನಿರ್ಮಿಸಲಾಗಿರುವ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲದೆ ಪಾಳು ಬಿದ್ದಿದೆ. ಇನ್ನೊಂದು ಕಡೆ ಹಳೆ ಶೌಚಾಲಯದ ಕಟ್ಟಡ ಬಿದ್ದು ಹಲವು ವರ್ಷಗಳಾಗಿವೆ. ಗ್ರಾಮದ ಮಹಿಳೆಯರು ಶೌಚಕ್ಕೆ ಅನಿವಾರ್ಯವಾಗಿ ಕೆರೆಯನ್ನೇ ಆಶ್ರಯಿಸಿದ್ದಾರೆ. ಈಗಿನ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸುವುದರ ಜತೆಗೆ ಇನ್ನೊಂದು ಶೌಚಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿ ನೂರಕ್ಕೂ ಹೆಚ್ಚು ಮಹಿಳೆಯರು ನರೇಗಲ್‌ ಪಟ್ಟಣ ಪಂಚಾಯ್ತಿ ಎದುರು ಚೊಂಬು ಹಿಡಿದು ಎರಡು ಬಾರಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಇಂದಿಗೂ ಶೌಚಾಲಯದ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಸಮಸ್ಯೆ

ಗದಗ ಜಿಲ್ಲೆಯ ನರೇಗಲ್‌ ಪಟ್ಟಣಕ್ಕೆ ನಿತ್ಯ ನೂರಾರು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಮಹಿಳಾ ಸಿಬ್ಬಂದಿ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಆದರೆ ಬಸ್‌ ನಿಲ್ದಾಣದಲ್ಲಿ ಹೆಸರಿಗೆ ಮಾತ್ರ ಮಹಿಳಾ ಶೌಚಾಲಯವಿದೆ. ಅಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಆಗಾಗ ನೀರಿನ ಸಮಸ್ಯೆಯೂ ಉಂಟಾಗುತ್ತದೆ.  ಶೌಚಾಲಯದ ಎದುರು ಮುಳ್ಳಿನ ಕಂಟಿಗಳು ಹುಲ್ಲು ಬೆಳೆದಿದೆ. ಗ್ರಾಮೀಣ ಭಾಗದ ಮಹಿಳೆಯರು ವಿದ್ಯಾರ್ಥಿನಿಯರು ಬಯಲಲ್ಲಿ ಶೌಚಕ್ಕೆ ತೆರಳುತ್ತಾರೆ. ಸಂಬಂಧಿಸಿದವರು ಸುಸಜ್ಜಿತವಾಗಿ ಶೌಚಾಲಯವನ್ನು ನಿರ್ಮಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸುತ್ತಾರೆ. 

ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯ ಕೊರತೆ

ನರೇಗಲ್‌ ಪಟ್ಟಣದಲ್ಲಿರುವ ಉಪ ತಹಶೀಲ್ದಾರ್‌ ಕೇಂದ್ರ ಅಟಲ್‌ ಜನಸ್ನೇಹಿ ಕೇಂದ್ರ ರೈತ ಸಂಪರ್ಕ ಕೇಂದ್ರ ಪಟ್ಟಣ ಪಂಚಾಯ್ತಿ ಕಾರ್ಯಾಲಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಬ್ಯಾಂಕಿಂಗ್‌ ಸೌಲಭ್ಯ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ವ್ಯಾಪಾರ ವಹಿವಾಟುಗಳಿಗೆ ಬರುವವರಿಗೆ ಸಮೀಪದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಸಮಸ್ಯೆ ಅನುಭವಿಸುತ್ತಾರೆ. ರೈತರು ಬೀದಿ–ಬದಿ ವ್ಯಾಪಾರಿಗಳು ಗ್ರಾಹಕರು ಕೂಡ ಶೌಚಾಲಯಕ್ಕಾಗಿ ಪರದಾಡುತ್ತಾರೆ.

ಉಪಹತಶೀಲ್ದಾರ್‌ ಕಚೇರಿ ಸಾರ್ವಜನಿಕ ಗ್ರಂಥಾಲಯ ಪಟ್ಟಣ ಪಂಚಾಯ್ತಿಗಳಿಗೆ ಬರುವ ಜನರು ಶೌಚಾಲಯಕ್ಕಾಗಿ ಗಾಂಧಿ ಭವನದ ಹಿಂದಿನ ಜಾಗ ಮತ್ತು ಕೆರೆಯ ದಂಡೆಯನ್ನು ಅವಲಂಬಿಸಿದ್ದಾರೆ. ಮಹಿಳಾ ಶೌಚಾಲಯ ಇಲ್ಲದೆ ಇರುವುದರಿಂದ ಮಹಿಳೆಯರು ಗಿಡಗಂಟಿಗಳ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಮಹಿಳೆ ಹಾಗೂ ಪುರಷರಿಗೆ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡುವುದು ಅತ್ಯವಶ್ಯಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT