ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ: ಉಳಿದೆಡೆಗಿಂತ ಗದುಗಿನಲ್ಲೇ ಬೆಲೆ ಕಡಿಮೆ

ಎಪಿಎಂಸಿಗೆ ತಗ್ಗಿದ ಆವಕ; ರಾಯಚೂರು, ಹುಬ್ಬಳ್ಳಿಯಲ್ಲಿ ಗರಿಷ್ಠ ಧಾರಣೆ
Last Updated 3 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಗದಗ: ಹುಬ್ಬಳ್ಳಿ, ವಿಜಯಪುರ, ರಾಯಚೂರು, ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ (ಎಪಿಎಂಸಿ) ಹೋಲಿಸಿದರೆ, ಗದಗ ಎಪಿಎಂಸಿಯಲ್ಲಿ ಈರುಳ್ಳಿಗೆ ಕಡಿಮೆ ದರ ಲಭಿಸುತ್ತಿದ್ದು, ರೈತರು ಇಲ್ಲಿಂದ ಈರುಳ್ಳಿಯನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ.

ಈರುಳ್ಳಿ ವಹಿವಾಟಿನಲ್ಲಿ ಗದಗ ಎಪಿಎಂಸಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ನೆರೆ ಮತ್ತು ಅತಿವೃಷ್ಠಿಯಿಂದ ಗರಿಷ್ಠ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಹೀಗಾಗಿ ಮಾರುಕಟ್ಟೆಗೆ ಗುಣಮಟ್ಟದ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ರಫ್ತು ಗುಣಮಟ್ಟದ ಈರುಳ್ಳಿ ಬರುತ್ತಿಲ್ಲ ಎಂದು ಎಪಿಎಂಸಿ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಉಳಿದೆಡೆಗಿಂತ ಬೆಲೆ ಕಡಿಮೆ ಇದೆ.

ರಾಯಚೂರು ಎಪಿಎಂಸಿಯಲ್ಲಿ ಮಂಗಳವಾರ ಕ್ವಿಂಟಲ್‌ ಈರುಳ್ಳಿ ₹10,690, ಹುಬ್ಬಳ್ಳಿಯಲ್ಲಿ ₹9,500 ಬಾಗಲಕೋಟೆಯಲ್ಲಿ ₹7500 ದರಕ್ಕೆ ಮಾರಾಟವಾಗಿದೆ. ಆದರೆ, ಗದಗ ಎಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಗಡ್ಡೆಗಳಿಗೆ ಗರಿಷ್ಠ ₹5 ಸಾವಿರ ಧಾರಣೆ ಲಭಿಸಿದೆ.

‘ಜಿಲ್ಲೆಯಲ್ಲಿ ಈ ಬಾರಿ ನೆರೆ ಮತ್ತು ಅತಿವೃಷ್ಠಿಯಿಂದ ಬೆಳೆಹಾನಿಯಾಗಿದ್ದು, ಹಸಿ ಈರುಳ್ಳಿಯನ್ನು ಹೆಚ್ಚು ದಿನ ಸಂಗ್ರಹಿಸಿ ಇಡಲು ಆಗುವುದಿಲ್ಲ ಎಂದು ವರ್ತಕರು ಉತ್ತಮ ಬೆಲೆ ಕೊಡುತ್ತಿಲ್ಲ. ಒಳ್ಳೆಯ ಈರುಳ್ಳಿಯನ್ನು ಮಾರುಕಟ್ಟೆಗೆ ತಂದರೂ ಕ್ವಿಂಟಲ್‌ ₹4,500ರಿಂದ ₹5 ಸಾವಿರ ದರ ನಿಗದಿಪಡಿಸುತ್ತಿದ್ದಾರೆ’ ಎಂದು ರೋಣ ತಾಲ್ಲೂಕಿನಿಂದ ಈರುಳ್ಳಿ ಮಾರಾಟ ಮಾಡಲು ಗದಗ ಎಪಿಎಂಸಿಗೆ ಬಂದಿದ್ದ ಅಮರಪ್ಪ ಚೌಡಿ ದೂರಿದರು.

ಮಂಗಳವಾರ ಗದಗ ಎಪಿಎಂಸಿಗೆ 1,390 ಕ್ವಿಂಟಲ್‌ ಈರುಳ್ಳಿ ಆವಕವಾಗಿದ್ದು, ದೊಡ್ಡ ಗಾತ್ರದ ಗಡ್ಡೆಗಳನ್ನು ವರ್ತಕರು ಕ್ವಿಂಟಲ್‌ಗೆ ಕನಿಷ್ಠ ₹1ರಿಂದ ಗರಿಷ್ಠ ₹5 ಸಾವಿರದವರೆಗೆ ಖರೀದಿಸಿದ್ದಾರೆ. ಬೆಳ್ಳುಳ್ಳಿ ಗಾತ್ರದ ಗಡ್ಡೆಗಳು ಕ್ವಿಂಟಲ್‌ಗೆ ಕನಿಷ್ಠ ₹200ರಿಂದ ಗರಿಷ್ಠ ₹1 ಸಾವಿರಕ್ಕೆ ಮಾರಾಟವಾಗಿವೆ.

ಈರುಳ್ಳಿ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ನೇರವಾಗಿ ತಟ್ಟಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ, ದೊಡ್ಡ ಗಾತ್ರದ ಒಂದು ಕೆ.ಜಿ ಈರುಳ್ಳಿ ₹80ಕ್ಕೆ ಮಾರಾಟ ಆಗುತ್ತಿದೆ. ಮಧ್ಯಮ ಗಾತ್ರದ ಗಡ್ಡೆಗಳು ₹65 ರಿಂದ ₹70ಕ್ಕೆ, ನಿಂಬೆಹಣ್ಣಿನ ಗಾತ್ರದ ಗಡ್ಡೆಗಳು ₹50ಕ್ಕೆ ಹಾಗೂ ಬೆಳ್ಳುಳ್ಳಿ ಗಾತ್ರದ ಗಡ್ಡೆಗಳು ₹40ಕ್ಕೆ ಮಾರಾಟವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT