ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಅತಿರೇಕದ ವರ್ತನೆ: ಜಿಲ್ಲಾಸ್ಪತ್ರೆ ವೈದ್ಯ ಅಮಾನತು

Published 27 ಆಗಸ್ಟ್ 2023, 13:43 IST
Last Updated 27 ಆಗಸ್ಟ್ 2023, 13:43 IST
ಅಕ್ಷರ ಗಾತ್ರ

ಗದಗ: ತಾಯಿ, ಮಗುವಿಗೆ ಸರಿಯಾಗಿ ಚಿಕಿತ್ಸೆ ನೀಡುವಂತೆ ಆಗ್ರಹಿಸಿದ ರೋಗಿಗಳ ಸಂಬಂಧಿಕರ ಮೇಲೆ ಜಿಲ್ಲಾ ಆಸ್ಪತ್ರೆ (ಜಿಮ್ಸ್‌) ವೈದ್ಯ ಗೌತಮ್‌ ಪಾಟೀಲ ಅತಿರೇಕದಿಂದ ವರ್ತಿಸಿ, ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿದ್ದು, ವೈದ್ಯರನ್ನು ಅಮಾನತು ಮಾಡಲಾಗಿದೆ.

ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಮುಷ್ತಾಕ್‌ ಅಲಿ ಅವರು ಕೆಲವು ದಿನಗಳ ಹಿಂದೆ ಹೆರಿಗೆಗಾಗಿ ಹೆಂಡತಿಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದರು. ಹೆರಿಗೆ ಆದ ಬಳಿಕ ಮಗು ಜಾಂಡೀಸ್‌ನಿಂದ ಬಳಲುತ್ತಿತ್ತು. ‘ಜಿಮ್ಸ್‌ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ’ ಎಂದು ಆರೋಪಿಸಿ ಮುಷ್ತಾಕ್‌, ‘ನವಜಾತ ಶಿಶು, ಬಾಣಂತಿ ಆರೈಕೆ ಸರಿಯಾಗಿ ಮಾಡದಿದ್ದರೆ ಆರೋಗ್ಯ ಸಚಿವರಿಗೆ ದೂರು ನೀಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಮುಷ್ತಾಕ್‌ ಮಾತಿನಿಂದ ಕೆರಳಿದ ಡಾ.ಗೌತಮ್‌ ಪಾಟೀಲ,‘ಯಾರಿಗೆ ಫೋನ್‌ ಮಾಡುತ್ತೀಯಾ ಮಾಡು, ಮಾತಾಡ್ತೇನೆ’ ಎಂದು ಆವಾಜ್‌ ಹಾಕಿ, ಏಕವಚನದಲ್ಲಿ ನಿಂದಿಸಿದ್ದಾರೆ. ಮುಷ್ತಾಕ್‌ ನೆರವಿಗೆ ಧಾವಿಸಿದ ಸಂಬಂಧಿಕರ ವಿರುದ್ಧವೂ ತಿರುಗಿ ಬಿದ್ದಿದ್ದಾರೆ.

‘ನಾನು ಇರೋದೆ ಹಿಂಗೆ, ಏನ್‌ ಮಾಡ್ತೀಯ ಮಾಡು’ ಎಂದು ಶರ್ಟ್‌ ಗುಂಡಿಯನ್ನು ಬಿಚ್ಚಿ, ಸಿನಿಮಾ ಶೈಲಿಯಲ್ಲಿ ಕೈ ಅಗಲಿಸಿ, ತೋಳು ಬಿಗಿಗೊಳಿಸಿದ್ದಾರೆ.

‘ಯಾರೋ ನೀನು? ಯಾರನ್ನು ಕರೆಯಿಸುತ್ತೀಯಾ ಕರೆಸು? ನನ್ನ ವಿಳಾಸ ಬರ್ಕೋ. ಊರಲ್ಲಿ ನಾನೊಬ್ಬನೇ ಇರ್ತೇನೆ. ಧಮ್‌ ಇದ್ದರೆ ಬಂದು ಟಚ್‌ ಮಾಡು. ಬೇಕಿದ್ದರೆ ಫೇಸ್‌ಬುಕ್‌ ಲೈವ್‌ ಮಾಡು’ ಎಂದು ಅತಿರೇಕದಿಂದ ವರ್ತಿಸಿದ್ದಾರೆ.

‘ವಿಡಿಯೊ ಮಾಡಿದರೆ ಹೊಡೆತ ಬೀಳುತ್ತವೆ’ ಎಂದು ಹೇಳಿ ಮುಷ್ಠಿ ಬಿಗಿ ಹಿಡಿದು ಗುದ್ದುವಂತೆ ಮಾಡಿ, ಬೆದರಿಕೆ ಹಾಕಿರುವುದು ವಿಡಿಯೊದಲ್ಲಿದೆ. ವೈದ್ಯರ ಅತಿರೇಕದ ವರ್ತನೆ ಕಂಡು ರೋಗಿಗಳು ಕಂಗಾಲಾಗಿದ್ದಾರೆ.

ರೋಗಿಗಳ ಸಂಬಂಧಿಕರ ಜತೆಗೆ ವೈದ್ಯನ ಗುಂಡಾವರ್ತನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ‘ರೋಗಿಗಳ ಜತೆಗೆ ಈ ರೀತಿಯ ವರ್ತನೆ ಸರಿಯಲ್ಲ. ಆಸ್ಪತ್ರೆಗೆ ಬರುವವರು ಬಡವರು ಇರುತ್ತಾರೆ. ವೈದ್ಯರು ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಮುಂದೆ ಈ ರೀತಿ ಘಟನೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಡಾ.ಗೌತಮ್‌ ಪಾಟೀಲ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ)ನಿಂದ ಬಂದಿದ್ದು, ಜಿಮ್ಸ್‌ ವೈದ್ಯರಲ್ಲ. ಬುಧವಾರ ಈ ಘಟನೆ ನಡೆದಿದೆ. ಅವರನ್ನು ವಿಚಾರಿಸಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ವೈದ್ಯರು ‘ಬೈಪೋಲಾರ್‌ ಡಿಸಾರ್ಡರ್‌’ ನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅವರು ಹೇಗೆ ವರ್ತಿಸಿದರು ಎಂಬುದು ಅವರಿಗೇ ನೆನಪಿರುವುದಿಲ್ಲ. ಅವರನ್ನು ಅಮಾನತು ಮಾಡಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT