ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಗೆ ನೆರವಾದ 'ಪೊಲೀಸ್ ಸಹಾಯವಾಣಿ!

ಮಾನವೀಯತೆ ಮರೆದ ಪೊಲೀಸರು; ಸಾರ್ವಜನಿಕರಿಂದ ಭಾರಿ ಪ್ರಶಂಸೆ
Last Updated 1 ಜನವರಿ 2020, 9:13 IST
ಅಕ್ಷರ ಗಾತ್ರ

ಗದಗ: ಹೊಸ ವರ್ಷಕ್ಕೆ ಒಂದು ದಿನ ಬಾಕಿ ಉಳಿದಿರುವಾಗ ಬೆಟಗೇರಿ ಠಾಣೆಯ ಪೊಲೀಸರು ಮಾಡಿದ ಕಾರ್ಯವೊಂದು ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

ಡಿ. 31ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಟಗೇರಿಯ ಕಬಾಡಿ ಓಣಿಯ ನಿವಾಸಿ, ತುಂಬು ಗರ್ಭಿಣಿ ಜ್ಯೋತಿ ರಾಘವೇಂದ್ರ ಕಬಾಡಿ ಎಂಬುವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗಲು ಸಕಾಲದಲ್ಲಿ ವಾಹನ ಸಿಗದೆ ಪರದಾಡುತ್ತಿದ್ದರು.

ಇನ್ನೇನು ಆಸ್ಪತ್ರೆಗೆ ದಾಖಲಾಗದಿದ್ದರೆ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯವಿತ್ತು. ಇಂತಹ ಸಂದಿಗ್ಧ ಸಮಯದಲ್ಲಿ ಆ ಕುಟುಂಬದ ನೆರವಿಗೆ ಬಂದಿದ್ದು ಗದಗ ಪೊಲೀಸ್ ಇಲಾಖೆ ಇತ್ತೀಚೆಗೆ ಪ್ರಾರಂಭಿಸಿದ್ದ ಮಹಿಳಾ ಸಹಾಯವಾಣಿ ಸಂಖ್ಯೆ 9480804400ಕ್ಕೆ ಕರೆ ಮಾಡಿದ ಕುಟುಂಬ ಸದಸ್ಯರು ಪೊಲೀಸರ ನೆರವು ಕೋರಿದರು.

ತಕ್ಷಣ ಸಹಾಯವಾಣಿ ಸಿಬ್ಬಂದಿ, ಈ ಮಾಹಿತಿಯನ್ನು ಕರೆ ಬಂದ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಬೆಟಗೇರಿ ಪೊಲೀಸರಿಗೆ ರವಾನಿಸಿದರು. ಕೂಡಲೇ ಗರ್ಭಿಣಿ ಇರುವ ಮನೆಯನ್ನು ತಲುಪಿದ ಪೊಲೀಸರು ತುರ್ತಾಗಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಆದಾದ ಕೆಲ ಸಮಯದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದರು. ಪೊಲೀಸ್ ಗಸ್ತು ಸಿಬ್ಬಂದಿ ಎಂ.ಬಿ ಮೇಟಿ, ದಶರಥ ಎಂ. ಅವರು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಕಾಲದಲ್ಲಿ ನೆರವಾದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಶಿ ಅವರು ಡಿ. 6ರಂದು ಮಹಿಳಾ ಸಹಾಯವಾಣಿ ಪ್ರಾರಂಭಿಸಿದ್ದರು. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಮತ್ತು ವಾಹನ ನಿಯೋಜಿಸಿದ್ದರು. ಸಹಾಯವಾಣಿಗೆ ಬಂದ ಮೊದಲ ಕರೆ ಇದಾಗಿದ್ದು, ಹೊಸ ವರ್ಷದ ಹಿಂದಿನ ದಿನ ಇಬ್ಬರ (ತಾಯಿ ಮತ್ತು ಮಗು)ಜೀವ ಉಳಿಸಿದ ಮಾನವೀಯ ಕಾರ್ಯಕ್ಕೆ ಪೊಲೀಸ್ ಇಲಾಖೆ ಪಾತ್ರವಾಗಿದೆ.

ಕೆಲವೊಮ್ಮೆ ದೂರದ ಊರುಗಳಿಂದ ನಗರಕ್ಕೆ ತಡರಾತ್ರಿ ಬಂದಿಳಿಯುವ ಮಹಿಳೆಯರು, ಮನೆಗೆ ಹೋಗಲು ಸಕಾಲದಲ್ಲಿ ವಾಹನ ಸಿಗದೆ ತೊಂದರೆ ಅನುಭವಿಸುತ್ತಾರೆ. ಇಂತಹ ಒಂಟಿ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಸಹಾಯವಾಣಿ ಪ್ರಾರಂಭಿಸಲಾಗಿದೆ. ದೇಶದಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಗದಗ ಜಿಲ್ಲಾ ಪೊಲೀಸರ ಈ ಕ್ರಮ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.

ಸಹಾಯವಾಣಿ ಆರಂಭದ ದಿನದಿಂದಲೂ ಎರಡು–ಮೂರು ದಿನಕ್ಕೆ ಒಂದರಂತೆ ಮಹಿಳೆಯರಿಂದ ಸಹಾಯವಾಣಿಗೆ ಕರೆಗಳು ಬರುತ್ತಿದ್ದು, ವಾಹನಗಳ ಮೂಲಕ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಕ್ರಿಸ್‌ಮಸ್‌ ಹಬ್ಬದ ದಿನದಂದು ರಾತ್ರಿ 2.40ರ ಸುಮಾರಿಗೆ ಬೆಟಗೇರಿಯಲ್ಲಿ ವಾಹನ ಸಿಗದ ಕಾರಣ ಸಹಾಯವಾಣಿಗೆ ಕರೆ ಮಾಡಿ ಸಹಾಯ ಕೋರಿದ್ದರು. ತಕ್ಷಣ ಪೊಲೀಸ್‌ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಸಿಬ್ಬಂದಿಯೂ ಸಹಾಯವಾಣಿ ಕರೆಗಳಿಗೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಪ್ರಜಾವಾಣಿಯೊಂದಿಗೆ ಮಾಹಿತಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT