ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಬಸವರಾಜ ಬೊಮ್ಮಾಯಿ

Published 20 ಏಪ್ರಿಲ್ 2024, 16:20 IST
Last Updated 20 ಏಪ್ರಿಲ್ 2024, 16:20 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಉದ್ಯಮ, ಜವಳಿ ಪಾರ್ಕ್ ನಿರ್ಮಾಣ, ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್, ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದನಾ ಒಕ್ಕೂಟ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಏರ್ಪಡಿಸಿದ್ದ ಜನತಾ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಮತ್ತು ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ ಮತ ಹಾಕುವುದಷ್ಟೇ ಮುಖ್ಯವಲ್ಲ. ಆ ನಂತರದ ಆಗುಹೋಗುಗಳಲ್ಲಿ ಜನರು ಪಾಲ್ಗೊಳ್ಳಬೇಕು. ಅಭಿವೃದ್ಧಿಯಲ್ಲಿ ಜನರನ್ನು ಪಾಲುದಾರರನ್ನಾಗಿ ಮಾಡಬೇಕು. ಅದಕ್ಕೆ ಜನರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ್ದಾರೆ. ನಮ್ಮ ಪಕ್ಷದ ಸಂಕಲ್ಪ ಪತ್ರ ಕೂಡ ಅದೇ ಆಶಯ ಹೊಂದಿದೆ’ ಎಂದು ಹೇಳಿದರು.

‘ಸಂವಾದದಲ್ಲಿ ಹಲವಾರು ಸಮಸ್ಯೆಗಳ ಜೊತೆಗೆ ಸಲಹೆಗಳನ್ನು ನೀಡಿದ್ದೀರಿ, ಮೂಲಸೌಕರ್ಯಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದೀರಿ, ಚಿಂತನೆಗೆ ಹಚ್ಚಿದ್ದೀರಿ, ನಾನು ಪ್ರಾಮಾಣಿಕವಾಗಿ ನಿಮ್ಮ ಕೆಲಸ ಮಾಡುತ್ತೇನೆ’ ಎಂದರು.

‘ಗದಗದಲ್ಲಿ ಪ್ರಮುಖವಾಗಿ ನೀರಿನ ಸಮಸ್ಯೆ ಇದೆ. ನೀರಿನ ಸಮಸ್ಯೆಗೆ ತಾರ್ಕಿಕ ಪರಿಹಾರ ಸಿಕ್ಕಿಲ್ಲ. ಮಲಪ್ರಭಾ ಯೋಜನೆಯಿಂದ ನೀರು ತಂದರೂ ಉಪಯೋಗ ಆಗಲಿಲ್ಲ. ಸಿಂಗಟಾಲೂರು ಯೋಜನೆ ಮಾಡಿದ ಮೇಲೆ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಮಾಡಲು ಅವಕಾಶವಾಗಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಅಮೃತ್‌– 2 ಯೊಜನೆ ಅಡಿ ₹140 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಯಿತು. ಈಗಿನ ಸರ್ಕಾರ ಅದನ್ನು ಸರಿಯಾಗಿ ಅನುಷ್ಟಾನ ಮಾಡಿದರೆ, ಗದಗ ನಗರದ ನೀರಿನ ಬಹುತೇಕ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆ’ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿರುತ್ತದೆ. ಕಾಲಕಾಲಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಆದಷ್ಟು ಬೇಗ ಸೂಕ್ತ ಯೋಜನೆ ರೂಪಿಸಿ ನೀರಿನ ವ್ಯವಸ್ಥೆ ಮಾಡಿ, ಗಂಡು ಮಕ್ಕಳಿಗೆ ಹೆಣ್ಣು ಕೊಡುವ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದರು.

‘ಗದುಗಿನಲ್ಲಿ ಜವಳಿ ಪಾರ್ಕ್ ಮಾಡುವ ಅಗತ್ಯವಿದೆ. ನಾನು ಸಿ.ಎಂ ಇದ್ದಾಗ ಗದಗ ಸೇರಿ ಮೂರು ಕಡೆ ಜವಳಿ ಪಾರ್ಕ್ ಮಾಡಲು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆ. ಮುಂದಿನ ದಿನಗಳಲ್ಲಿ ಗದಗದಲ್ಲಿ ಜವಳಿ ಪಾರ್ಕ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗದಗದಲ್ಲಿ ಗಾರ್ಮೆಂಟ್‌ ಸ್ಥಾಪನೆ ಮಾಡಿದರೆ ಮಹಿಳೆಯರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ’ ಎಂದರು.

‘ನಾನು ಸಿ.ಎಂ ಆಗಿದ್ದಾಗ ಹಾವೇರಿಯಲ್ಲಿ ಪ್ರತ್ಯೇಕ ಹಾಲು ಉತ್ಪಾದಕರ ಘಟಕ ಸ್ಥಾಪನೆ ಮಾಡಿದ್ದೇವೆ. ಇದರಿಂದ ಅಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಗದುಗಿನ ಸ್ಥಳೀಯ ಮುಖಂಡರ ಸಹಕಾರ ಸಿಕ್ಕರೆ ಈ ಜಿಲ್ಲೆಗೂ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಮಾಡಲು ಕ್ರಮ ವಹಿಸಲಾಗುವುದು. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ’ ಎಂದರು.

ಇನ್ನು ಮಾಜಿ ಸೈನಿಕರಿಗೆ ಭವನ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ಮುದ್ರಣ ಉದ್ಯಮಕ್ಕೆ ಅಗತ್ಯ ಸವಲತ್ತು ಕೊಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

‘ಮೆಣಸಿನಕಾಯಿ ಬೆಳೆಗಾರರಿಗೆ ಕೋಲ್ಡ್ ಸ್ಟೋರೇಜ್ ಅಗತ್ಯವಿದ್ದು ಈ ಭಾಗದಲ್ಲಿ ಸ್ಥಾಪನೆ ಮಾಡಲಾಗುವುದು. ಕೈಗಾರಿಕೆಗಳ ಸ್ಥಾಪನೆಗೆ ಜಮೀನಿನ ಅವಶ್ಯಕತೆ ಬಹಳ ಮುಖ್ಯ. ಅದಕ್ಕೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಉದ್ಯಮಗಳನ್ನು ತರಲು ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಬಿಜೆಪಿ ಮುಖಂಡರಾದ ಕಾಂತಿಲಾಲ್‌ ಬನ್ಸಾಲಿ, ರವಿ ದಂಡಿನ, ವಿಜಯ್‌ಕುಮಾರ್‌ ಗಡ್ಡಿ, ಡಾ. ಎನ್‌.ಬಿ.ಪಾಟೀಲ, ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಆರ್‌.ಗೋವಿಂದಗೌಡ್ರ ಇದ್ದರು.

ಜನತಾ ಸಂವಾದ ನನಗೆ ಕಣ್ಣು ತೆರೆಸಿದ ಕಾರ್ಯಕ್ರಮ. ಸಕಾರಾತ್ಮಕ ಚರ್ಚೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾವನೆಗಳನ್ನು ಚುನಾವಣಾ ಪೂರ್ವದಲ್ಲೇ ಅರಿಯುವ ಅವಕಾಶ ಕಲ್ಪಿಸಿದ ಪ್ರಗತಿಪರ ಚಿಂತಕ ಅನಿಲ್‌ ಮೆಣಸಿನಕಾಯಿ ಅವರಿಗೆ ಅಭಿನಂದನೆ ಸಲ್ಲಿಸುವೆ
ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ
ಆಡಳಿತದಲ್ಲಿ ದೂರದೃಷ್ಟಿತ್ವ ಪ್ರಾಮಾಣಿಕತೆ ಮನೋಭಾವ ಹೊಂದಿರುವ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಲು ಗದಗ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಶಕ್ತಿ ತುಂಬಲಾಗುವುದು. ಗದಗ ಕ್ಷೇತ್ರದ ಬದಲಾವಣೆಗೆ ಅವರು ಮುನ್ನುಡಿ ಬರೆಯಲಿದ್ದಾರೆ
ಅನಿಲ್‌ ಮೆಣಸಿನಕಾಯಿ ಬಿಜೆಪಿ ಮುಖಂಡ
ಜನತಾ ಸಂವಾದ ಎಂಬುದು ವಿನೂತನ ಕಾರ್ಯಕ್ರಮ. ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಜನರು ಗಮನ ಸೆಳೆದಿದ್ದಾರೆ. ಅವುಗಳನ್ನು ಈಡೇರಿಸಲು ಬಸವರಾಜ ಬೊಮ್ಮಾಯಿ ಅವರನ್ನು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕಿದೆ
ಸಿ.ಸಿ.ಪಾಟೀಲ ನರಗುಂದ ಶಾಸಕ
‘ನೇಕಾರರ ಹಬ್‌ ಮಾಡಲು ಪ್ರಯತ್ನ’
‘ಬೆಟಗೇರಿಯನ್ನು ನೇಕಾರರ ಹಬ್ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬೊಮ್ಮಾಯಿ ಭರವಸೆ ನೀಡಿದರು. ‘ನೇಕಾರರು ತಮ್ಮ ಉದ್ಯಮದಲ್ಲಿ ಸಮಸ್ಯೆ ಕುರಿತು ಪ್ರಸ್ತಾಪ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಹ್ಯಾಂಡ್ ಲೂಮ್ ಮಾದರಿಯಲ್ಲಿ ಪವರ್ ಲೂಮ್ ನೇಕಾರರಿಗೆ ಸವಲತ್ತುಗಳನ್ನು ನೀಡಲಾಯಿತು. ನೇಕಾರ ಸಮ್ಮಾನ್‌ ಯೋಜನೆ 50 ಯುನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್ ಮಾದರಿಯಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿ ಮಾಡಲಾಗುವುದು. ನಾನು ಸಿ.ಎಂ ಆಗಿದ್ದಾಗ ನೇಕಾರರ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇ; ಈಗಿನ ಸರ್ಕಾರ ನಿಲ್ಲಿಸಿದೆ’ ಎಂದು ಬೇಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT