ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಹಿತ್ಯಕ್ಕೆ ಗದುಗಿನ ಮಹಾಭಾರತ ಕೊಡುಗೆ ದೊಡ್ಡದು: ಪ್ರೊ.ಗಣೇಶ ಚಲವಾದಿ

Published 2 ಜುಲೈ 2024, 14:47 IST
Last Updated 2 ಜುಲೈ 2024, 14:47 IST
ಅಕ್ಷರ ಗಾತ್ರ

ಗದಗ: ‘ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ತುಂಗ ಶಿಖರದಲ್ಲಿ ಇರುವಂತೆ ಮಾಡಿದ ಕವಿಗಳ ಸಾಲಿಗೆ ಸೇರುವ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಕುಮಾರವ್ಯಾಸ ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಕುಳಿತು ಬರೆದ ಗದುಗಿನ ಮಹಾಭಾರತ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ದೊಡ್ಡ ಕೊಡುಗೆ’ ಎಂದು ಪ್ರೊ.ಗಣೇಶ ಚಲವಾದಿ ಹೇಳಿದರು.

ವಿಜಯ ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಳು ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದಾಗ ಇತಿಹಾಸ ಪರಿಚಯಿಸಿ ಮಾತನಾಡಿದರು.

ಗದುಗಿನ ವೀರನಾರಾಯಣ ದೇವಸ್ಥಾನವು ಕ್ರಿಶ 1,117 ಸುಮಾರಿನಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನ ಕಟ್ಟಿಸಿದ್ದು, ಈ ದೇವಸ್ಥಾನವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ಸಂರಕ್ಷಿತ ಸ್ಮಾರಕವಾಗಿದೆ ಎಂದು ತಿಳಿಸಿದರು.

ಕುಮಾರವ್ಯಾಸರು ಧಾರವಾಡ ಜಿಲ್ಲೆಯ ಕೋಳಿವಾಡದಲ್ಲಿ ಜನಿಸಿದರು. ನಾರಾಯಣಪ್ಪನವರು ಕುಮಾರವ್ಯಾಸ ಎಂಬ ಹೆಸರಿನಿಂದ ಪರಿಚಿತರಾದವರು. ಕುಮಾರವ್ಯಾಸನ ಅತ್ಯಂತ ಪ್ರಸಿದ್ಧ ಕೃತಿ, ‘ಕರ್ಣಾಟ ಭಾರತ ಕಥಾಮಂಜರಿ’ ಗದುಗಿನ ಭಾರತ ಮತ್ತು ಕುಮಾರವ್ಯಾಸ ಭಾರತವೆಂದೇ ಪ್ರಸಿದ್ಧವಾಗಿದೆ. ಇದು ಮಹಾಭಾರತದ ಮೊದಲ ಹತ್ತು ಪರ್ವಗಳ (ಅಧ್ಯಾಯಗಳು) ರೂಪಾಂತರವಾಗಿದೆ. ಗದುಗಿನ ಭಾರತವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಲಾಗಿದ್ದು, ಇದು ಆರು ಸಾಲಿನ ಚರಣಗಳ ರೂಪಕವಾಗಿದೆ ಎಂದು ತಿಳಿಸಿದರು.

ಕುಮಾರವ್ಯಾಸನ ಜೀವನದ ಅಧ್ಯಯನದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಆಸಕ್ತಿ, ಉಲ್ಲಾಸ ಹಾಗೂ ಶಿಸ್ತಿನೊಂದಿಗೆ ಗುರಿ ಸಾಧನೆಗೆ ಪ್ರೇರಣೆಯಾಗಬಹುದು. ಈ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಕ್ಷೇತ್ರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರೊ.ಶ್ರೀದೇವಿ ವಿ.ವೈ., ಪ್ರೊ. ವಿಶಾಲಾಕ್ಷಿ ಮೂಲಿಮನಿ ಹಾಗೂ ಅರುಣಾ ಹುಲ್ಲೂರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT