ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಾಯಕ ಬೆಲೆಗೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ- ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ
Last Updated 8 ಸೆಪ್ಟೆಂಬರ್ 2021, 15:51 IST
ಅಕ್ಷರ ಗಾತ್ರ

ಗದಗ: ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘದ ಗದಗ ಜಿಲ್ಲಾ ಘಟಕದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಭಾರತೀಯ ಕಿಸಾನ್‌ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ. ನೀಲಪ್ಪಗೌಡ್ರ ಮಾತನಾಡಿ, ‘ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಮಾರುಕಟ್ಟೆಯಲ್ಲಿ ದಳ್ಳಾಳಿಗಳ ಹಾವಳಿ ನಿಯಂತ್ರಿಸಬೇಕು. ರೈತರ ಉತ್ಪನ್ನಗಳನ್ನು ನೋಂದಣಿ ಮಾಡಿಕೊಂಡ ಖರೀದಿದಾರ ಮಾತ್ರ ಖರೀದಿ ಮಾಡಲು ಅವಕಾಶ ನೀಡಬೇಕು. ಜೀವನಕ್ಕೆ ಅತ್ಯವಶ್ಯಕವಾಗಿರುವ ಕೃಷಿ ಕ್ಷೇತ್ರ ಹಾಗೂ ಕೃಷಿಕರು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಿವಿಧ ಕಾರಣಗಳಿಂದಾಗಿ ರೈತರು ಬೆಳೆದ ಬೆಳೆಗಳು ಕೈಗೆ ಬಾರದೇ ಕೃಷಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.

‘ಎಪಿಎಂಸಿ ಒಳ ಮತ್ತು ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಘೋಷಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿ ಜಿಲ್ಲೆಯಲ್ಲಿ ಕೃಷಿ ನ್ಯಾಯಾಲಯ ಸ್ಥಾಪಿಸಬೇಕು. ಏಕ ರೂಪದ ಕೃಷಿ ಕಾನೂನುಗಳನ್ನು ಜಾರಿಗೊಳಿಸಬೇಕು. ಕೆರೆಗಳ ಹೂಳು ತೆಗೆಸಿ, ನದಿ ನೀರು ತುಂಬಿಸುವ ಮೂಲಕ ನೀರಾವರಿ ಪ್ರದೇಶವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು ಬಳಿಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಬರದ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದು ಗದಗ ಹುಬ್ಬಳ್ಳಿ ರಸ್ತೆ ತಡೆದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತರು ಪ್ರತಿಭಟನೆ ಜತೆಗೆ ರಸ್ತೆ ತಡೆ ಮಾಡಿದ ವಿಚಾರ ತಿಳಿದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಅವರು ಸಭೆ ಮೊಟಕುಗೊಳಿಸಿ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರಿಂದ ಮನವಿ ಸ್ವೀಕರಿಸಿದರು.

ಉತ್ತರ ಕರ್ನಾಟಕ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ವೀರಣ್ಣ ಮಜ್ಜಗಿ, ಶಿವನಾಗಪ್ಪ ದೊಡ್ಡಮೇಟಿ, ಸೋಮಶೇಖರಪ್ಪ ಹಿರೇಮಠ, ಪ್ರಭುಲಿಂಗ ಹಲಸೂರ, ರಾಮನಗೌಡ ಪಾಟೀಲ, ಬಿ.ಆರ್. ಕೊನಿಸಾಗರ, ಶಿರಹಟ್ಟಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವಪ್ಪ ಕಲ್ಯಾಣಿ ಹಾಗೂ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT