ಮಂಗಳವಾರ, ಜೂನ್ 22, 2021
23 °C
ಜನರಿಂದ ಉತ್ತಮ ಸ್ಪಂದನೆ; ಪುಸ್ತಕಗಳು, ದಿನಪತ್ರಿಕೆಗಳ ಸಂಗ್ರಹ; ಬಿಡುವಿನ ವೇಳೆಯಲ್ಲಿ ಓದು

ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕ ಗ್ರಂಥಾಲಯ..!

ಹುಚ್ಚೇಶ್ವರ ಅಣ್ಣಿಗೇರಿ Updated:

ಅಕ್ಷರ ಗಾತ್ರ : | |

ಗದಗ ಜಿಲ್ಲಾಡಳಿತ ಭವನದಲ್ಲಿರುವ ಸಾರ್ವಜನಿಕ ಗ್ರಂಥಾಲಯ

ಗದಗ: ‘ಅತ್ಯುತ್ತಮ ಪುಸ್ತಕಗಳು ಉತ್ತಮ ಸಂಗಾತಿಗಳು’ ಎಂಬ ಮಾತಿದೆ. ಗದಗ ಜಿಲ್ಲಾಡಳಿತ ಭವನದಲ್ಲಿ ಇತ್ತೀಚೆಗೆ ಆರಂಭವಾಗಿರುವ ಸಾರ್ವಜನಿಕ ಗ್ರಂಥಾಲಯವು ಜನರ ಓದಿನ ದಾಹವನ್ನು ತಣಿಸುತ್ತಿದೆ. 

ಜಿಲ್ಲಾಡಳಿತ ಭವನದಲ್ಲಿ ಮೂರು ಮಹಡಿಗಳಿದ್ದು, ಇಲ್ಲಿ 40ಕ್ಕೂ ಹೆಚ್ಚು ಇಲಾಖೆಗಳಿವೆ. ನಿತ್ಯ ನೂರಾರು ಜನರು ಇಲ್ಲಿಗೆ ವಿವಿಧ ಕೆಲಸಗಳಿಗಾಗಿ ಬರುತ್ತಾರೆ. ಕೆಲವೊಮ್ಮೆ ಅಧಿಕಾರಿಗಳು ಸಭೆ, ಸಮಾರಂಭಗಳಲ್ಲಿ ಭಾಗವಹಿಸಲು ತೆರಳಿರುತ್ತಾರೆ. ಇಂತಹ ಸಂದರ್ಭದಲ್ಲಿ ಜನರು ಗಂಟೆಗಟ್ಟಲೆ ಜಿಲ್ಲಾಡಳಿತದ ಕಟ್ಟಡದಲ್ಲೇ ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಲು ಮತ್ತು ಈ ಕಾಯುವ ಸಮಯವನ್ನೇ ಜ್ಞಾನದ ಸಮಯವಾಗಿ ಬದಲಾಯಿಸಲು ರೂಪುಗೊಂಡ ಯೋಜನೆಯೇ ಈ ಗ್ರಂಥಾಲಯ. ಇದು ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರ ಕನಸಿನ ಕೂಸು.

ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಕೊಠಡಿಗಳ ನಡುವೆ ಸಾರ್ವಜನಿಕರ ಅನುಕೂಲಕ್ಕೆ ಕಲ್ಪಿಸಲಾಗಿದ್ದ ನಿರೀಕ್ಷಣಾಲಯವನ್ನೇ ಈಗ ಗ್ರಂಥಾಲಯವಾಗಿ ಪರಿವರ್ತನೆ ಮಾಡಲಾಗಿದೆ. ಧಾರವಾಡದ ಕೇಂದ್ರ ಗ್ರಂಥಾಲಯದಲ್ಲಿ ಹೆಚ್ಚುವರಿಯಾಗಿದ್ದ ರ‍್ಯಾಕ್‌ಗಳನ್ನು ಇಲ್ಲಿಗೆ ತರಲಾಗಿದೆ. ಜಿಲ್ಲಾಡಳಿತ ಭವನದಲ್ಲಿ ಮೂಲೆ ಗುಂಪಾಗಿದ್ದ 30 ಕುರ್ಚಿಗಳನ್ನು ದುರಸ್ತಿಗೊಳಿಸಿ, ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಂಥಾಲಯ ಇಲಾಖೆಯಲ್ಲಿದ್ದ ಪುಸ್ತಕಗಳನ್ನೇ ಇಲ್ಲಿ ತಂದು ಜೋಡಿಸಲಾಗಿದೆ. ನೋಡು, ನೋಡುತ್ತಿದ್ದಂತೆ ಸುಸಜ್ಜಿತವಾದ ಗ್ರಂಥಾಲಯ ರೂಪುತಳೆದಿದೆ.

ನಿರೀಕ್ಷಣಾಲಯ ಇದ್ದರೂ, ಅದು ಸಾರ್ವಜನಿಕರ ಉಪಯೋಗಕ್ಕೆ ಅಷ್ಟಾಗಿ ಬಳಕೆಯಾಗುತ್ತಿರಲಿಲ್ಲ. ಸದಾ ಬಿಕೋ ಎನ್ನುತ್ತಿತ್ತು. ಇದನ್ನೇ ಗ್ರಂಥಾಲಯವಾಗಿ ಪರಿವರ್ತಿಸಲಾಗಿದೆ. ಗ್ರಂಥಾಲಯ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಜಿಲ್ಲಾಡಳಿತ ಭವನದಲ್ಲಿ ಸ್ವಯಂಘೋಷಿತ ಶಿಸ್ತು ಮತ್ತು ಮೌನ ಮೂಡಿದೆ. ಎಲ್ಲಿ ಬೇಕೆಂದರಲ್ಲಿ ನಿಂತುಕೊಂಡು ಮಾತನಾಡುತ್ತಿದ್ದವರು, ಗ್ರಂಥಾಲಯದೊಳಗೆ ಹೋಗಿ, ಗಂಭೀರವದನರಾಗಿ ಪತ್ರಿಕೆ, ಪುಸ್ತಕ ಓದುತ್ತಿದ್ದಾರೆ. ಸಾರ್ವಜನಿಕರು ಸಮಯವನ್ನು ಸದುಪಯೋಗಪಡಿಸಿಕೊಳ್ಳಲಿ ಎನ್ನುವುದು ಜಿಲ್ಲಾಡಳಿತದ ಆಶಯ.

ಗ್ರಂಥಾಲಯದಲ್ಲಿ 30 ಆಸನಗಳಿವೆ. 12 ಕನ್ನಡ ದಿನ ಪತ್ರಿಕೆಗಳು, 4 ಇಂಗ್ಲಿಷ್‌, 1 ವಾರ ಪತ್ರಿಕೆ ಹಾಗೂ ಕನ್ನಡ, ಇಂಗ್ಲಿಷ್‌ ಪುಸ್ತಕಗಳು, ಸ್ವಾತಂತ್ರ್ಯ ಹೋರಾಟಗಾರರ, ರಾಷ್ಟ್ರ ನಾಯಕರ ಜೀವನ ಚರಿತ್ರೆ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಸಸ್ಯಶಾಸ್ತ್ರ, ಜೀವ ವಿಜ್ಞಾನ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಸಿದ್ಧತಾ ಪುಸ್ತಕಗಳು, ಸಂಗೀತ, ಕಲೆ, ಸಾಹಿತ್ಯ, ಕಾನೂನು ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ 450ಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದೆ.

‘ಪ್ರತಿನಿತ್ಯ ನೂರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಗ್ರಂಥಾಲಯದಿಂದ ಸಾರ್ವಜನಿಕರು, ಜಿಲ್ಲಾಡಳಿತ ಭವನದ ಸಿಬ್ಬಂದಿಗೆ ತುಂಬ ಅನುಕೂಲವಾಗಿದೆ’ ಎನ್ನುತ್ತಾರೆ ಗ್ರಂಥಾಲಯದ ಅಧಿಕಾರಿ ಜಿ.ಎಸ್.ವೆಂಕಟೇಶ್ವರಿ.

ಕಳೆದ ತಿಂಗಳು ಆರಂಭವಾದ ಗ್ರಂಥಾಲಯಕ್ಕೆ ನಿತ್ಯ ನೂರಾರು ಜನರು ಭೇಟಿ ನೀಡುತ್ತಿದ್ದಾರೆ. ಆಸಕ್ತರು ಸದಸ್ಯತ್ವ ನೋಂದಣಿ ಮಾಡಿಕೊಳ್ಳಬಹುದು
– ಮುತ್ತಣ್ಣ ಹೊಸಹಳ್ಳಿ, ಗ್ರಂಥಾಲಯ ಸಿಬ್ಬಂದಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.